ಮಹಾ ವಿಮಾ ಯೋಜನೆ ಕರ್ನಾಟಕಕ್ಕೆ ಬರಬಾರದು
ಬೆಳಗಾವಿ: ಮಹಾರಾಷ್ಟ್ರದವರು ತಮ್ಮದೇನಿದ್ದರೂ ತಮ್ಮ ರಾಜ್ಯದಲ್ಲಿಯೇ ಇಟ್ಟುಕೊಳ್ಳಲಿ. ಅವರು ಯೋಜನೆ ತಗೊಂಡು ಕರ್ನಾಟಕದೊಳಗೆ ಬರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ತಾಕೀತು ಮಾಡಿದರು.
ಬೈಲಹೊಂಗಲ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ತೆರಳುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಗಡಿಭಾಗದ ೮೬೫ ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಜಾರಿಗೊಳಿಸಲು ಮುಂದಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮಹಾರಾಷ್ಟçದವರು ಕರ್ನಾಟಕದೊಳಗೆ ಬರಬಾರದು ಎಂದು ರಾಜ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದವರಿಗೆ ಸೂಚಿಸಿದ್ದಾರೆ ಎಂದರು.
ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ಕನ್ನಡದವರಿಗೆ ೬೫ರಷ್ಟು ಹಾಗೂ ಇತರರಿಗೆ ಶೇ.೩೫ರಷ್ಟು ಸೀಟು ಹಂಚಿಕೆಯಾಗಬೇಕೆಂದು ಕ್ರಮ ಕೈಗೊಳ್ಳಲಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳಲ್ಲಿ ದೇಶಪ್ರೇಮ ಬೆಳೆಸಲಾಗುವುದು. ಇಲ್ಲಿ ಕಲಿತವರು ಸೇನೆಗೆ ಸೇರ್ಪಡೆಯಾಗುವ ಅವಕಾಶವಿದೆ ಎಂದು ತಿಳಿಸಿದರು.
ಅನುದಾನ ಸೇರಿದಂತೆ ಸುಮಾರು ೧೧೦ ಎಕರೆ ಜಮೀನನ್ನು ಸರ್ಕಾರದ ವತಿಯಿಂದ ರಾಕ್ ಗಾರ್ಡನ್ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣಕ್ಕಾಗಿ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನೀಡಲಾಗಿತ್ತು. ಮುಖ್ಯಮಂತ್ರಿಯಾಗಿ ಶಂಕುಸ್ಥಾಪನೆ ಮಾಡಿ, ಉದ್ಘಾಟನೆಯನ್ನೂ ಮಾಡುತ್ತಿದ್ದೇನೆ. ಎಲ್ಲವೂ ಉತ್ತಮವಾಗಿ ಮೂಡಿಬಂದಿದೆ. ರಾಯಣ್ಣನ ಜ್ಞಾಪಕಾರ್ಥವಾಗಿ ಇಲ್ಲಿ ರಾಕ್ ಗಾರ್ಡನ್ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣವಾಗಿದೆ ಎಂದು ತಿಳಿಸಿದರು.