ಮಹಿಳೆಗೆ ಕಪಾಳಮೋಕ್ಷ: ಕಂಡಕ್ಟರ್ ಪೊಲೀಸ್ ವಶಕ್ಕೆ
07:24 PM Jan 22, 2025 IST
|
Samyukta Karnataka
ಮೂಡುಬಿದಿರೆ: ಬಸ್ ಟಿಕೆಟ್ ವಿಚಾರದಲ್ಲಿ ಮಂಗಳವಾರ ನೀರುಡೆಯಲ್ಲಿ ದಲಿತ ಮಹಿಳೆಗೆ ಕಪಾಳಮೋಕ್ಷ ಮಾಡಿದ ಬಸ್ ಕಂಡಕ್ಟರನ್ನು ಮೂಡುಬಿದಿರೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿ ಪ್ರಶಾಂತ್ ಪೂಜಾರಿ ಶಾಲೋಮ್ ಬಸ್ ಕಂಡಕ್ಟರ್. ಮುಚ್ಚೂರಿನಿಂದ ಹಲವು ಮಹಿಳೆಯರು ಪುತ್ತಿಗೆಯಲ್ಲಿರುವ ಆಳ್ವಾಸ್ ಹಾಸ್ಟೆಲ್‌ಗೆ ಶಾಲೊಮ್ ಬಸ್‌ನಲ್ಲಿ ಪ್ರತಿನಿತ್ಯ ಕೆಲಸಕ್ಕೆ ಬರುತ್ತಿದ್ದರು. ಕೆಲವೊಮ್ಮೆ ಕೆಲಸ ಬೇಗ ಮುಗಿದರೆ ಬೇರೆ ಬಸ್ಸಿನಲ್ಲಿ ಊರಿಗೆ ವಾಪಾಸಾಗುತ್ತಿದ್ದರು. ಪ್ರತಿದಿನ ಇದೇ ಬಸ್ಸಿನಲ್ಲಿ ಬರದಿದ್ದರೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುವುದಿಲ್ಲ ಎಂದು ಮಂಗಳವಾರ ಕಂಡಕ್ಟರ್ ಹೇಳಿದ್ದರೆನ್ನಲಾಗಿದ್ದು, ಶಾಂತಿ ಹೆಸರಿನ ದಲಿತ ಮಹಿಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಷಯಕ್ಕೆ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ಕಂಡಕ್ಟರ್ ಆಕೆಗೆ ಕಪಾಳಮೋಕ್ಷ ಮಾಡಿದ್ದಾರೆನ್ನಲಾಗಿದೆ. ಆರೋಪಿ ಕಂಡಕ್ಟರನ್ನು ಬುಧವಾರ ಪೊಲೀಸರು ಬಂಧಿಸಿ ದಲಿತ ದೌರ್ಜನ್ಯ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
Next Article