ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದ್ದನ್ನು ಬಿಜೆಪಿ ಸಹಿಸುತ್ತಿಲ್ಲ
ಬೆಂಗಳೂರು: 2028ರಲ್ಲೂ ನಾವೇ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮ ಮುಂದುವರೆಸುತ್ತೇವೆ. ಮಹಿಳೆಯರು ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆಗೆ ಮುಂದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
KPCC ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸೌಮ್ಯ ರೆಡ್ಡಿಯವರು ಪ್ರದೇಶ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಾತ್ಯತೀತತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧನದ ಮೌಲ್ಯಗಳ ಬಗ್ಗೆ ಸ್ಪಷ್ಟತೆ ಕೊಡುವ ಮೂಲಕ ಕಾರ್ಯಕರ್ತೆಯರನ್ನು ಸಜ್ಜುಗೊಳಿಸಿ ಪಕ್ಷ ಸಂಘಟನೆ ಮಾಡುವ ಸಮರ್ಥ್ಯ ಸೌಮ್ಯರೆಡ್ಡಿಯವರಿಗೆ ಇದ್ದು ಈ ದಿಕ್ಕಿನಲ್ಲಿ ಮುಂದುವರೆಯಿರಿ ಎಂದು ಕರೆ ನೀಡಿದರು.
ಬಿಜೆಪಿ ಪಕ್ಷವೇ ಬಹುಜನರ, ದುಡಿಯುವ ವರ್ಗಗಳ, ಶ್ರಮಿಕ ಸಂಸ್ಕೃತಿಯ ವಿರೋಧಿ. ಮುಖ್ಯವಾಗಿ ಬಿಜೆಪಿ ಮಹಿಳಾ ಮೀಸಲಾತಿಯ, ಮಹಿಳಾ ಹಕ್ಕುಗಳ ವಿರೋಧಿ. ಇದನ್ನು ಸಮಸ್ತ ಮಹಿಳೆಯರಿಗೆ ಅರ್ಥ ಮಾಡಿಸುವ ಕೆಲಸ ಮಾಡಿ ಎಂದು ಕರೆ ನೀಡಿದರು.
ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಮಹಿಳೆಯರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕಾಳಜಿ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಹೀಗಾಗಿ ಎಲ್ಲಾ ಜಾತಿ, ಎಲ್ಲಾ ಧರ್ಮದ ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಗ್ಯಾರಂಟಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದ್ದು ನಾವು. ಇದನ್ನು ವಿರೋಧಿಸಿದ್ದು ಬಿಜೆಪಿ. ರಾಜ್ಯದ ಒಂದು ಕೋಟಿ 21 ಲಕ್ಷ ಕುಟುಂಬಗಳಿಗೆ ಪ್ರತಿ ತಿಂಗಳು ಆರ್ಥಿಕ ಶಕ್ತಿ ನೀಡುತ್ತಿರುವುದು ನಾವು. ಬಿಜೆಪಿಯವರು ಅತ್ತೆ ಸೊಸೆ ಜಗಳ ಆಡ್ತಾರೆ ಎನ್ನುವ ಸುಳ್ಳು ನೆಪ ಮುಂದಿಟ್ಟು ಮಹಿಳೆಯರ ಖಾತೆಗೆ ಹೋಗುವ ಹಣವನ್ನು ನಿಲ್ಲಿಸಲು ಷಡ್ಯಂತ್ರ ನಡೆಸಿತು ಎಂದು ಟೀಕಿಸಿದರು.
ಆದರೆ ಗೃಹಲಕ್ಷ್ಮಿ ಹಣದಲ್ಲಿ ಅತ್ತೆ ಸೊಸೆಗೆ ಬಳೆ ಅಂಗಡಿ ಹಾಕಿಕೊಟ್ಟ, ಹೊಲಿಗೆ ಯಂತ್ರ ಕೊಡಿಸಿದ ಉದಾಹರಣೆಗಳು ಸಾಕಷ್ಟಿವೆ ಎಂದು ವಿವರಿಸಿದರು.
2028 ರಲ್ಲೂ ನಾವೇ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇವೆ. ನೀವು ನಮಗೆ ರಾಜಕೀಯ ಶಕ್ತಿ ಕೊಡಿ. ನಾವು ನಿಮಗೆ ಆರ್ಥಿಕ ಶಕ್ತಿ ನೀಡುವುದನ್ನು ಮುಂದುವರೆಸುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿಯವರು ಅನ್ನಭಾಗ್ಯವನ್ನೂ ವಿರೋಧಿಸುತ್ತಾರೆ, ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆಯನ್ನೂ ವಿರೋಧಿಸುತ್ತಿದೆ. ಇದಕ್ಕೆ ತಕ್ಕ ಉತ್ತರ ನೀವೇ ನೀಡಬೇಕು ಎಂದು ಕರೆ ನೀಡಿದರು.
ಸಂವಿಧಾನ ಮಹಿಳೆಯರಿಗೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ನೀಡಿದೆ. ಈ ಸಂವಿಧಾನವನ್ನು ಬಿಜೆಪಿ ವಿರೋಧಿಸುತ್ತದೆ. ಬಿಜೆಪಿಯವರ ಗುರೂಜಿ ಸಾವರ್ಕರ್ ಸಂವಿಧಾನ ವಿರೋಧಿಸಿದ್ದರು. ಈ ಇತಿಹಾಸವನ್ನು ರಾಜ್ಯದ ಮಹಿಳೆಯರು, ಯುವತಿಯರಿಗೆ ಸರಿಯಾಗಿ ಮನದಟ್ಟು ಮಾಡಿಸಿ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾಲಂಬಾ, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಪಕ್ಷದ ಕಾರ್ಯಾಧ್ಯಕ್ಷರುಗಳು, ಮಾಜಿ ಮಹಿಳಾ ಅಧ್ಯಕ್ಷರುಗಳು, ಶಾಸಕ ಹ್ಯಾರಿಸ್ ಸೃರಿ ಮತ್ತಿತರರು ಭಾಗವಹಿಸಿದ್ದರು.