ಮಹಿಳೆಯರಿಗೆ ಎಲ್ಲಾ ರಂಗಗಳಲ್ಲಿ ಸಮಾನ ಅವಕಾಶ
ಬೆಂಗಳೂರು: ಮಹಿಳೆಯರಿಗೆ ಎಲ್ಲಾ ರಂಗಗಳಲ್ಲಿ ಸಮಾನ ಅವಕಾಶ ಮತ್ತು ಪ್ರಾತಿನಿಧ್ಯ ದೊರಕುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ನಾಡಿನ ನನ್ನ ಅಕ್ಕ ತಂಗಿಯರಿಗೆ, ತಾಯಂದಿರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು. ಅಂತಾರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವಿಸುವುದಕ್ಕಷ್ಟೇ ಸೀಮಿತವಾಗದೆ ಅವರು ಎದುರಿಸುತ್ತಿರುವ ಸವಾಲುಗಳ ಮೇಲೆಯೂ ಬೆಳಕು ಚೆಲ್ಲಬೇಕು. ಲಿಂಗಾಧಾರಿತ ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಮಹಿಳೆಯರ ಹೋರಾಟದಲ್ಲಿ ನಾವೆಲ್ಲರೂ ಜೊತೆಯಲ್ಲಿ ನಿಲ್ಲಬೇಕು.
ಅವಕಾಶಗಳಿಂದ ವಂಚಿತವಾಗಿರುವ ಮಹಿಳೆಯರಿಗೆ ಎಲ್ಲಾ ರಂಗಗಳಲ್ಲಿ ಸಮಾನ ಅವಕಾಶ ಮತ್ತು ಪ್ರಾತಿನಿಧ್ಯ ದೊರಕುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ. ಇದು ಬುದ್ಧ, ಬಸವಣ್ಣ, ಅಂಬೇಡ್ಕರರು ಸಾರಿದ ಸಮಸಮಾಜದ ಆಶಯ ಕೂಡ. ಈ ದಿಸೆಯಲ್ಲಿ ಪ್ರಯತ್ನಗಳು ಸಾಗಲಿ.
ನಮ್ಮ ಹಿಂದಿನ ಮತ್ತು ಇಂದಿನ ಸರ್ಕಾರದ ಅರ್ಧದಷ್ಟು ಯೋಜನೆಗಳು ಮಹಿಳಾಕೇಂದ್ರಿತವಾಗಿರುವುದನ್ನು ನಾಡು ಗಮನಿಸಿದೆ. ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಸ್ವಾಭಿಮಾನಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಿ, ಈ ದಿನದ ಆಚರಣೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿದೆ ಎಂದಿದ್ದಾರೆ.