ಮಹಿಳೆ, ಅಪ್ರಾಪ್ತೆಯ ವಿಡಿಯೋ ತೆಗೆದ ಅಪರಾಧಿಗೆ ಸಜೆ
ಮಂಗಳೂರು: ಅಪ್ರಾಪ್ತೆ ಮತ್ತು ವಿವಾಹಿತ ಮಹಿಳೆ ಸ್ನಾನ ಮಾಡುತ್ತಿರುವುದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ -೧ (ಪೋಕ್ಸೋ) ನ್ಯಾಯಾಲಯದಲ್ಲಿ ಸಾಬೀತಾಗಿದೆ. ನ್ಯಾಯಾಲಯ ಅಪರಾಧಿಗೆ ೫ ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ೧೫ ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಮಂಗಳೂರಿನ ಸ್ಯಾಂಡ್ ಪಿಟ್ ಬೆಂಗ್ರೆಯ ಮುಹಮ್ಮದ್ ರಂಶೀದ್ ಯಾನೆ ರಂಶಿ ಶಿಕ್ಷೆಗೊಳಗಾದ ತಪ್ಪಿತಸ್ಥ.
ಪ್ರಕರಣ ವಿವರ: ೨೦೨೪ರ ಜು.೫ ಮತ್ತು ೭ರಂದು ರಾತ್ರಿ ಆರೋಪಿ ರಂಶೀದ್ ಬಾಲಕಿ ಮತ್ತು ವಿವಾಹಿತ ಮಹಿಳೆ ಮನೆಯಲ್ಲಿ ಸ್ನಾನ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದನು. ಜು.೧೬ರಂದು ಇನ್ನೊಂದು ಮನೆಯ ಟೆರೇಸ್ ಮೇಲೆ ವಿಡಿಯೋ ಮಾಡುವ ಉದ್ದೇಶದಿಂದ ಹೋಗಿದ್ದು, ಇದನ್ನು ಮನೆಯವರು ಗಮನಿಸಿ, ಆತನನ್ನು ಯಾರೆಂದು ಕೂಗಿದಾಗ ಆತ ಅಲ್ಲಿಂದ ಹಾರಿ ಪರಾರಿಯಾಗಿದ್ದನು.
ಆರೋಪಿ ಓಡುವ ಸಂದರ್ಭದಲ್ಲಿ ಮೊಬೈಲ್ ಕೆಳಗೆ ಬಿದ್ದಿತ್ತು. ಮೊಬೈಲ್ ವಶಪಡಿಸಿಕೊಂಡ ಮನೆಯವರು ಆತನನ್ನು ಪತ್ತೆ ಹಚ್ಚಿ ಆತನ ಮೂಲಕವೇ ಮೊಬೈಲ್‌ನ ಲಾಕ್ ತೆಗೆಸಿ ನೋಡಿದಾಗ ಸ್ನಾನ ಮಾಡುತ್ತಿದ್ದ ಮಹಿಳೆ ಮತ್ತು ಬಾಲಕಿಯ ವಿಡಿಯೋ ಕಂಡು ಬಂದಿತ್ತು. ಈ ಹಿನ್ನೆಲೆ ಮಹಿಳೆ ನೀಡಿದ ದೂರಿನಂತೆ ಆತನ ವಿರುದ್ಧ ಜು.೧೭ರಂದು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ-೧ (ಪೋಕ್ಸೋ)ಯ ನ್ಯಾಯಾಧೀಶ ವಿನಯ್ ದೇವರಾಜ್ ಅವರು, ರಂಶೀದ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಿಎನ್‌ಎಸ್ ಸೆಕ್ಷನ್ ೩೨೯ (೩) ರಡಿ ೩ ತಿಂಗಳ ಸಾಮಾನ್ಯ ಕಾರಾಗೃಹ ಶಿಕ್ಷೆ, ಸೆಕ್ಷನ್ ೩೨೯(೪)ರಡಿ ಒಂದು ವರ್ಷದ ಸಾಮಾನ್ಯ ಕಾರಾಗೃಹ ಶಿಕ್ಷೆ ಮತ್ತು ೫ ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ೨ ತಿಂಗಳು ಹೆಚ್ಚುವರಿ ಕಾರಾಗೃಹ ಶಿಕ್ಷೆ, ಪೋಕ್ಸೋ ಕಾಯ್ದೆ ಕಲಂ ೧೪ ರಡಿ ೫ ವರ್ಷಗಳ ಸಾಮಾನ್ಯ ಕಾರಾಗೃಹ ಶಿಕ್ಷೆ ಮತ್ತು ೧೦ ಸಾವಿರ ರೂ. ದಂಡ. ದಂಡ ಕಟ್ಟಲು ತಪ್ಪಿದಲ್ಲಿ ೧ ವರ್ಷ ಹೆಚ್ಚುವರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ಸಂತ್ರಸ್ತರಿಗೆ ೧ ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಪ್ರಕರಣದ ಭಾಗಶಃ ತನಿಖೆಯನ್ನು ಪಣಂಬೂರು ಠಾಣೆಯ ಪಿಎಸ್‌ಐ ರಾಘವೇಂದ್ರ ಅವರು ಮಾಡಿದ್ದು, ಪಿಎಸ್‌ಐ ಶ್ರೀಕಲಾ ಅವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.