ಮಹಿಳೆ ಮೇಲೆ ಹರಿದ ಕಂಟೇನರ್
ಉಳ್ಳಾಲ: ರಸ್ತೆ ಗುಂಡಿಗೆ ಸ್ಕೂಟರ್ ಬಿದ್ದ ಪರಿಣಾಮ ಸಹಸವಾರೆ ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು,ಚೆಂಬುಗುಡ್ಡೆಯ ಸೇವಾ ಸೌಧದ ಬಳಿ ಶನಿವಾರ ಸಂಜೆ ನಡೆದಿದ್ದು,ಶವ ಸಾಗಿಸಲು ಒಪ್ಪದ 108 ಅಂಬ್ಯುಲೆನ್ಸ್ ಮತ್ತು ರಸ್ತೆ ದುರವಸ್ಥೆಯ ವಿರುದ್ಧ ರೊಚ್ಚಿಗೆದ್ದ ನಾಗರಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಸುರತ್ಕಲ್ ,ಕುಳಾಯಿ ನಿವಾಸಿ ರೆಹಮತ್ (45)ಮೃತ ಪಟ್ಟ ಮಹಿಳೆ ಎಂದು ತಿಳಿದು ಬಂದಿದೆ.
ರೆಹಮತ್ ಅವರ ಪತಿ ರಶೀದ್ ಅವರು ಯೆನೆಪೋಯ ಆಸ್ಪತ್ರೆಯಲ್ಲಿ ಇಲೆಕ್ಟ್ರಿಕಲ್ ಮೆಂಟೆಡೆನ್ಸ್ ಸಿಬ್ಬಂದಿಯಾಗಿದ್ದು ಶನಿವಾರ ಸಂಜೆ ವೇಳೆ ಆಕ್ಟಿವ ಸ್ಕೂಟರಲ್ಲಿ ಪತ್ನಿಯನ್ನು ಕುಳ್ಳಿರಿಸಿ ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆ ಸಾಗುತ್ತಿದ್ದ ವೇಳೆ ಚೆಂಬುಗುಡ್ಡೆ ಎಂಬಲ್ಲಿ ಸ್ಕೂಟರ್ ಹದಗೆಟ್ಟ ರಸ್ತೆ ಗುಂಡಿಗೆ ಬಿದ್ದಿದೆ. ಪರಿಣಾಮ ಸ್ಕೂಟರ್ ಸಹ ಸವಾರೆ ರಶೀದ್ ಅವರ ಪತ್ನಿ ರೆಹಮತ್ ರಸ್ತೆಗೆಸೆಯಲ್ಪಟ್ಟಿದ್ದು ಆಕೆಯ ಮೇಲೆ ಹಿಂದಿನಿಂದ ಬರುತ್ತಿದ್ದ ಕಂಟೇನರ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಹಿಳೆಯ ಶವ ಅರ್ಧ ಗಂಟೆಗೂ ಹೆಚ್ಚಿನ ಕಾಲ ರಸ್ತೆಯಲ್ಲೇ ಇದ್ದು,ಶವ ಸಾಗಿಸಲು ತಾಂತ್ರಿಕ ಕಾರಣ ನೀಡಿದ 108 ತುರ್ತು ಆಂಬುಲೆನ್ಸ್ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿಢೀರ್ ಪ್ರತಿಭಟನೆಯಿಂದಾಗಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಕೊಣಾಜೆ ,ಮುಡಿಪುವಿಗೆ ತೆರಳುವ ವಾಹನಸವಾರರು ಪರದಾಡುವಂತಾಯಿತು.ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್,ಸಂಚಾರಿ ವಿಭಾಗದ ಎಸಿಪಿ ನಜ್ಮ ಫಾರೂಕಿ ,ಎಸಿಪಿ ಧನ್ಯನಾಯಕ್ ಭೇಟಿ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.