For the best experience, open
https://m.samyuktakarnataka.in
on your mobile browser.

ಮಾಜಿ ಐಪಿಎಸ್ ಸಂಜೀವ್ ಭಟ್ ಮತ್ತೆ ಅಪರಾಧಿ

11:00 PM Mar 27, 2024 IST | Samyukta Karnataka
ಮಾಜಿ ಐಪಿಎಸ್ ಸಂಜೀವ್ ಭಟ್ ಮತ್ತೆ ಅಪರಾಧಿ

ಅಹ್ಮದಾಬಾದ್: ಗುಜರಾತಿನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಈಗ ಎರಡನೇ ಅಪರಾಧ ಪ್ರಕರಣದಲ್ಲಿ ಅಪರಾಧಿಯಾಗಿದ್ದಾರೆ. ೧೯೯೬ಕ್ಕೂ ಹಿಂದಿನ ಮಾದಕದ್ರವ್ಯ ವಶ ಪ್ರಕರಣದಲ್ಲಿ ಸಂಜೀವ್ ಭಟ್ ಅಪರಾಧಿ ಎಂದು ಬನಾಸ್‌ಕಾಂತ್ ಜಿಲ್ಲೆಯ ಪಲನ್‌ಪುರ ಪಟ್ಟಣದ ಸತ್ರ ನ್ಯಾಯಾಲಯ ಬುಧವಾರ ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಗುರುವಾರ ಮಧ್ಯಾಹ್ನ ನ್ಯಾಯಾಲಯ ಘೋಷಿಸುವ ನಿರೀಕ್ಷೆಯಿದೆ. ಈಗಾಗಲೇ ಸಂಜೀವ್ ೧೯೯೦ರ ಪೊಲೀಸ್ ಕಸ್ಟಡಿ ಕಿರುಕುಳ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ:
೧೯೯೬ರಲ್ಲಿ ರಾಜಸ್ಥಾನದ ವಕೀಲ ಸಮೇರ್‌ಸಿಂಗ್ ರಾಜಪುರೋಹಿತ ಪಲನ್‌ಪುರ ಪಟ್ಟಣದ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾಗ ಅವರ ಕೊಠಡಿಯಿಂದ ೧.೫ ಕಿಲೋ ಒಪಿಯಮ್ ವಶಪಡಿಸಿಕೊಳ್ಳಲಾಗಿದೆ ಎಂದು ಸಂಜೀವ್ ಭಟ್ ಈ ವಕೀಲರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಲ್ಲದೆ, ಮಾದಕದ್ರವ್ಯ ತಡೆ ಕಾಯ್ದೆಯಡಿ ಪ್ರಕರಣವನ್ನೂ ದಾಖಲಿಸಿದ್ದರು. ಆದರೆ ರಾಜಸ್ಥಾನದ ಪಾಲಿ ಎಂಬಲ್ಲಿರುವ ವಿವಾದಿತ ಆಸ್ತಿ ವರ್ಗಾವಣೆಗೆ ಬಲವಂತ ಮಾಡುವ ಉದ್ದೇಶದಿಂದ ರಾಜಪುರೋಹಿತರ ವಿರುದ್ಧ ಬನಾಸ್‌ಕಾಂತ್ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ರಾಜಸ್ಥಾನ ಪೊಲೀಸರು ಆನಂತರದಲ್ಲಿ ಹೇಳಿಕೊಂಡಿದ್ದರು. ಪಲನ್‌ಪುರ ಅಪರಾಧ ತನಿಖಾ ವಿಭಾಗದ ಇನ್‌ಸ್ಪೆಕ್ಟರ್ ಐ.ಬಿ.ವ್ಯಾಸ್ ಅವರನ್ನು ಪ್ರಕರಣದ ಸಹ ಆರೋಪಿಯೆಂದು ಹೆಸರಿಸಲಾಗಿತ್ತು. ಆದರೆ ೨೦೨೧ರಲ್ಲಿ ವ್ಯಾಸ್ ಮಾಫಿ ಸಾಕ್ಷಿಯಾದರು.