ಮಾಜಿ ಪ್ರಧಾನಿ ದೇವೇಗೌಡ್ರಿಗೆ ಅಭಿನಂದಸಿದ ಡಿಸಿಎಂ ಡಿ.ಕೆ ಶಿವಕುಮಾರ್
ಈಗ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನಾದರೂ ಮನಗಂಡು ಕೇಂದ್ರ ಸರಕಾರ ಮೇಕೆದಾಟು ಆಣೆಕಟ್ಟು ಯೋಜನೆಗೆ ಅನುಮತಿ ನೀಡುತ್ತದೆ ಎಂಬ ವಿಶ್ವಾಸ ನನ್ನದು. ಈ ಎಲ್ಲ ಸಮಸ್ಯೆಗಳನ್ನು ನಿರೀಕ್ಷೆ ಮಾಡಿಯೇ ಕಾಂಗ್ರೆಸ್ ಪಕ್ಷವು "ನಮ್ಮ ನೀರು ನಮ್ಮ ಹಕ್ಕು" ಪಾದಯಾತ್ರೆ ಮಾಡಿತ್ತು.
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅಭಿನಂದನೆ ಹೇಳಿದ್ದಾರೆ.
ಮೇಕೆದಾಟು ಯೋಜನೆ ಕುರಿತು ಮಾಜಿ ಪ್ರಧಾನಿ ದೇವೇಗೌಡರ ನಿಲುವು ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಾವು ಮಾಡಿದ "ನಮ್ಮ ನೀರು, ನಮ್ಮ ಹಕ್ಕು" ಹೋರಾಟಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರು ಧ್ವನಿಗೂಡಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ಈಗ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನಾದರೂ ಮನಗಂಡು ಕೇಂದ್ರ ಸರಕಾರ ಮೇಕೆದಾಟು ಆಣೆಕಟ್ಟು ಯೋಜನೆಗೆ ಅನುಮತಿ ನೀಡುತ್ತದೆ ಎಂಬ ವಿಶ್ವಾಸ ನನ್ನದು. ಈ ಎಲ್ಲ ಸಮಸ್ಯೆಗಳನ್ನು ನಿರೀಕ್ಷೆ ಮಾಡಿಯೇ ಕಾಂಗ್ರೆಸ್ ಪಕ್ಷವು "ನಮ್ಮ ನೀರು ನಮ್ಮ ಹಕ್ಕು" ಪಾದಯಾತ್ರೆ ಮಾಡಿತ್ತು. ಆ ಮೂಲಕ ನಮ್ಮ ಹಕ್ಕೊತ್ತಾಯವನ್ನು ಕನ್ನಡಿಗರ ಮನೆ-ಮನಗಳಿಗೆ ತಲುಪಿಸಿತ್ತು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರಬೇಕೆಂಬ ಸಂಕಲ್ಪದಿಂದಲೇ ನಾನು ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಮೇಕೆದಾಟು ಯೋಜನೆಗಾಗಿ ಕಾನೂನು ಹೋರಾಟ ಮುಂದುವರೆದಿದೆ. ನಮಗೆ ಗೆಲುವು ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಈ ಸಂದರ್ಭದಲ್ಲಿ ದೇವೇಗೌಡರು ನಮ್ಮ ಹೋರಾಟಕ್ಕೆ ಧ್ವನಿಗೂಡಿಸಿರುವುದನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.