For the best experience, open
https://m.samyuktakarnataka.in
on your mobile browser.

ಮಾಜಿ ಸಚಿವರ ಪುತ್ರನಿಗೆ 20 ಲಕ್ಷ ರೂ. ವಂಚನೆ

12:21 AM Oct 27, 2024 IST | Samyukta Karnataka
ಮಾಜಿ ಸಚಿವರ ಪುತ್ರನಿಗೆ 20 ಲಕ್ಷ ರೂ  ವಂಚನೆ

ಹನಿಟ್ರ್ಯಾಪ್ ವೇಳೆ ಕಲಬುರಗಿಯ ದಂಪತಿ ಬಂಧನ

ಬೆಂಗಳೂರು: ನಲಪಾಡ್ ಬ್ರಿಗೇಡ್ ಹೆಸರಿನ ಅಭಿಮಾನಿ ಸಂಘಟನೆಯ ಕಲಬುರಗಿ ಘಟಕದ ಅಧ್ಯಕ್ಷೆಯಾಗಿರುವ ಮಹಿಳೆಯೋರ್ವಳು ಮಾಜಿ ಸಚಿವರೊಬ್ಬರ ಪುತ್ರನಿಗೆ ವಂಚಿಸಿ 20 ಲಕ್ಷ ರೂ. ಪಡೆಯುತ್ತಿದ್ದ ವೇಳೆ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್ ಬಂಧಿತರು. ಅಶ್ಲೀಲ ವಿಡಿಯೊ ಮಾಡಿಕೊಂಡು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಪುತ್ರ ರಿತೇಶ್ ಗುತ್ತೇದಾರ್ ಅವರಿಂದ ಇಪ್ಪತ್ತು ಲಕ್ಷ ರೂ. ಹಣ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳ ತಂಡ ಇಬ್ಬರು ಆರೋಪಿಗಳನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.

ಮಾಜಿ ಸಚಿವರ ಪುತ್ರ ನೀಡಿದ್ದ ದೂರಿನ ಅನ್ವಯ, ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು, ಬೆಂಗಳೂರಿನ ಎಂ.ಜಿ. ರಸ್ತೆಯ ಬಳಿ ಹಣ ಪಡೆದುಕೊಳ್ಳಲು ಬಂದಿದ್ದಾಗ ಸಿಲುಕಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಫೋನ್ ಮೂಲಕ ಪರಿಚಯಿಸಿಕೊಂಡಿದ್ದ ಮಂಜುಳಾ ಪಾಟೀಲ್, ಅವರೊಂದಿಗೆ ಆತ್ಮೀಯತೆ ಗಳಿಸಿಕೊಂಡಿದ್ದರು. ನಂತರ ಇಬ್ಬರ ನಡುವೆ ಫೋನ್ ಕರೆ, ವಿಡಿಯೊ ಸಂಭಾಷಣೆ ನಡೆಸಿದ್ದರು. ನಂತರ ಆರೋಪಿ ಮಂಜುಳಾ ಪಾಟೀಲ್ ಹಾಗೂ ಶಿವರಾಜ್ ಪಾಟೀಲ್ 20 ಲಕ್ಷ ರೂ. ನೀಡದಿದ್ದರೆ ವಿಡಿಯೊ, ಕರೆಯ ದೃಶ್ಯಗಳನ್ನು ವೈರಲ್ ಮಾಡುವುದಾಗಿ ಮಾಜಿ ಸಚಿವರಿಗೆ ವಂಚಿಸಿ ಬೆದರಿಕೆ ಹಾಕಲಾರಂಭಸಿದ್ದರು. ಅಲ್ಲದೆ, ಮೂರು ದಿನದ ಹಿಂದೆ ಮಾಜಿ ಸಚಿವರ ಪುತ್ರನನ್ನು ಭೇಟಿಯಾಗಿದ್ದ ಆರೋಪಿಗಳು, ನಿಮ್ಮ ತಂದೆ ನಿಂದನಾತ್ಮಕ ಸಂದೇಶಗಳನ್ನು ಕಳಿಸಿದ್ದಾರೆ. ಇದೆಲ್ಲವೂ ಹೊರಗಡೆ ಬಾರದಿರಲು 20 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆಯಿಟ್ಟಿದ್ದರೆಂದು ಮಾಜಿ ಸಚಿವರ ಪುತ್ರ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.
ಇಬ್ಬರ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ 308(2), 308(3), 308(4)ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು, ಶನಿವಾರ ಹಣ ಪಡೆದುಕೊಳ್ಳಲು ಬೆಂಗಳೂರಿನ ಎಂ.ಜಿ. ರಸ್ತೆಯ ಗರುಡಾ ಮಾಲ್ ಬಳಿ ಬಂದಿದ್ದ ಆರೋಪಿತ ದಂಪತಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗಾಗಿ 8 ದಿನ ಕಸ್ಟಡಿಗೆ ಪಡೆದುಕೊಂಡಿರುವುದಾಗಿ ಸಿಸಿಬಿಯ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.

Tags :