ಮಾತಿನಲ್ಲಲ್ಲಾ ಕೃತಿಯಲ್ಲಿ ನಿಮ್ಮ ಬದ್ದತೆ ತೋರಿಸಬೇಕು
ಬೆಂಗಳೂರು: ಮಾತಿನಲ್ಲಲ್ಲಾ ಕೃತಿಯಲ್ಲಿ ನಿಮ್ಮ ಬದ್ದತೆ ತೋರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬರಪರಿಹಾರ ಹಣ ಬಿಡುಗಡೆ ಕುರಿತು ಸರಣಿ ಪೋಸ್ಟ್ ಮಾಡಿರುವ ಅವರು "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಾವು ಬಿಡುಗಡೆ ಮಾಡಿರುವ 105 ಕೋಟಿ ಎಷ್ಟು ಲಕ್ಷ ಜನ ರೈತರಿಗೆ ತಲುಪಲಿದೆ. ಅರೆಕಾಸಿನ ಮಜ್ಜಿಗೆಗೂ ಸಾಲುವುದಿಲ್ಲ. ಅಗಾಧ ಪ್ರಮಾಣದ ಬರ ಮತ್ತು ತಾವು ಬಿಡುಗಡೆ ಮಾಡಿರುವ ಹಣವನ್ನು ನೋಡಿದರೆ, ರೈತರಿಗೆ ಚಿಲ್ಲರೆ ಕಾಸಿನ ಭಿಕ್ಷೆ ಕೊಟ್ಟಂತೆ ಕಾಣುತ್ತದೆ. NDRF ಮಾರ್ಗಸೂಚಿ ಪ್ರಕಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಹಣದ ಬಗ್ಗೆ ನಾವೂ ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಆದರೆ, ನಿಮ್ಮನ್ನು ಆಯ್ಕೆ ಮಾಡಿ ಅಧಿಕಾರದ ಗದ್ದುಗೆಗೆ ಕೂಡಿಸಿರುವ ರೈತಾಪಿ ವರ್ಗವನ್ನು ರಕ್ಷಿಸುವಂತದ್ದು ನಿಮ್ಮ ಕರ್ತವ್ಯ ನೀವು ಕೂಡಲೇ ಸಂಪೂರ್ಣವಾಗಿರುವ ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹ ಮಾಡುತ್ತೇನೆ. ಈಗಾಗಲೇ ಸಾಕಷ್ಟು ಕಾಲಹರಣವನ್ನು ಮಾಡಿರುತ್ತೀರಿ, ರಾಜ್ಯದ ಆರ್ಥಿಕ ಸ್ಥಿತಿ ಉತ್ತಮ ಇದೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ನಿಮ್ಮ ಸರ್ಕಾರ ಯಾಕೆ ರೈತರ ಪರಿಹಾರವನ್ನು ಪೂರ್ಣ ಬಿಡುಗಡೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ 18000 ಕೋಟಿ ಬರ ಪರಿಹಾರಕ್ಕೆ ಮನವಿ ಮಾಡಿರುವ ರಾಜ್ಯ ಸರ್ಕಾರ 105 ಕೋಟಿ ಬಿಡುಗಡೆ ಮಾಡಿದ್ದು, ಶೇ 1 % ರಷ್ಟು ಆಗಿಲ್ಲ ಎಂದು ರೈತಾಪಿ ವರ್ಗದವರು ಕೇಳುತ್ತಿದ್ದಾರೆ. ಮಾತಿನಲ್ಲಲ್ಲಾ ಕೃತಿಯಲ್ಲಿ ನಿಮ್ಮ ಬದ್ದತೆ ತೋರಿಸಬೇಕು.
ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲಿ ನಾವು ಕೇವಲ ಎರಡು ತಿಂಗಳಲ್ಲಿ ಎನ್ ಡಿ ಆರ್ ಎಫ್ ನಿಯಮದ ಪ್ರಕಾರ ಒಟ್ಡು 2031 ಕೋಟಿ ನಾವು ಬಿಡುಗಡೆ ಮಾಡಿದ್ದೇವೆ ಹೀಗಾಗಿ ಈ ಪ್ರಶ್ನೆ ಕೇಳುವ ಹಕ್ಕು ನಮಗಿದೆ. ರೈತರ ಪರವಾಗಿ ಅವರ ಹಿತಾಸಕ್ತಿ ಕಾಪಾಡುವುದು ಮತ್ತು ಅವರ ಹಕ್ಕನ್ನು ಕೊಡಿಸುವುದರಲ್ಲಿಯೇ ನನ್ನ ರಾಜಕೀಯ ಅಸ್ತಿತ್ವ ಇದೆ ಎಂದು ನಾನು ನಂಬಿದ್ದೇನೆ. ಅದಕ್ಕಾಗಿ ಸದಾ ನಾನು ರೈತರ ಪರ ಧ್ವನಿ ಎತ್ತಲು ಸಿದ್ದನಿದ್ದೇನೆ ಎಂದು ಬರೆದುಕೊಂಡಿದ್ದಾರೆ.