ಮಾತು ಹೆಚ್ಚಿದಂತೆ ನೀತಿ ಕುಗ್ಗುತ್ತದೆ
ಯಾವುದಾದರೊಂದು ನಮಗೆ ಇಷ್ಟವಾದ ಕಾರ್ಯವಿದ್ದರೆ ಆಗ ಕಾಲದ ಓಟವನ್ನು ಸಂಭ್ರಮದಿಂದ ನೋಡುತ್ತೇವೆ. ಹಾಗಿಲ್ಲದೆ ಇದ್ದರೆ, ಕಾಲದ ಚಲಿಸುವಿಕೆಗೆ ನಮ್ಮ ದುಗುಡದ ಭಾರವನ್ನು ಸೇರಿಸಿ ಎಷ್ಟು ನಿಧಾನ' ಎನ್ನುತ್ತೇವೆ. ಹಾಗಾದರೆ ಕಾಲಕ್ಕೆ ನಮ್ಮ ಮನಸ್ಸಿನ ಸುಖದುಃಖಗಳ ಬಣ್ಣವೇ ಬಣ್ಣವೇನು? ಅದಕ್ಕೆ ಸ್ವಂತವಾದ ಬಣ್ಣವೇ ಇಲ್ಲವೇನು? ಮನುಷ್ಯನು ತಾನು ಕರ್ತೃವೆಂದುಕೊಂಡು ಕುಳಿತಿರುವಾಗ ಕಾಲಕ್ಕೆಂತು ಸ್ವಂತವಾದ ಬಣ್ಣವಿದ್ದೀತು? ಕಾಲವು ಯಾರಿಗೆ ಏನನ್ನು ಕಾದಿಟ್ಟಿರುವುದೋ ಅದು ಯಾರಿಗೂ ಗೊತ್ತಿಲ್ಲ. ಯಾವುದು ತರ್ಕದಿಂದ ಆಚೆ ಇದ್ದು ಸಂಭವ ಕಾರಣವಾಗುವುದೋ ಅದನ್ನು
ದೈವವೆನ್ನಲಾಗುತ್ತದೆ.' ಮನುಷ್ಯ ಬುದ್ಧಿಗೆ ಎಟುಕದ ಯಾವುದೋ ಒಂದು ಕಾರಣದಿಂದ ಆದುದನ್ನು ದೈವ'ವೆನ್ನುತ್ತಾರೆ. ನಾವು ಕಣ್ಣಿಗೆ ಕಾಣುವುದಿಲ್ಲವೆಂಬ ಕಾರಣದಿಂದ ದೇವತೆಗಳು ಇಲ್ಲ ಎಂದುಕೊಳ್ಳುತ್ತೇವೆ. ಆದರೆ ಅವರು ಪರೋಕ್ಷಪ್ರಿಯರು. ಕಾಣದ ಕೈಯಾಗಿ ಇದ್ದುಕೊಂಡು ಎಲ್ಲ ಕೆಲಸಗಳನ್ನೂ ಮಾಡಿಸುವವರು ಅವರು. ಮನಸ್ಸು ಶಾಂತ ಸಂಕಲ್ಪವಾದಲ್ಲದೆ ದೇವತೆಗಳು ಆ ದೇಹದಲ್ಲಿ ನೆಲೆಸುವುದಿಲ್ಲ. ಮನುಷ್ಯಬುದ್ಧಿ ಕೆಲಸ ಮಾಡುವುದಕ್ಕೆ ವಿಷಯ ಸಾಮಗ್ರಿ ಬೇಕು. ಬುದ್ಧಿ ಕೆಲಸ ಮಾಡಲು ಕಾರ್ಯದ್ರವ್ಯ ಬೇಕು. ಕುಂಬಾರನು ಎಷ್ಟೇ ನಿಪುಣನಾದರೂ ಜೇಡಿಮಣ್ಣಿಲ್ಲದ ಕಡೆ ಅವನಿಗೆ ಕೆಲಸವಿಲ್ಲ. ಬಡಗಿಗೆ ಮರದ ದಿಮ್ಮಿಯಿಲ್ಲದಿದ್ದರೆ ಕೆಲಸವಿರದು. ಕೃಷಿಕನಿಗೆ ನೆಲ, ವರ್ತಕನಿಗೆ ಸರಕು, ವೈದ್ಯನಿಗೆ ಮೂಲಿಕೆ - ಹೀಗೆ ಪ್ರತಿಯೊಬ್ಬ ವೃತ್ತಿಕರ್ತನಿಗೂ ಒಂದೊಂದು ಕಾರ್ಯದ್ರವ್ಯ ಬೇಕು. ಎಲ್ಲಿ ವಿಷಯವು ಶೂನ್ಯವೋ ಅಲ್ಲಿ ಬುದ್ಧಿ ಏನನ್ನೂ ಮಾಡಲಾರದು. ಬುದ್ಧಿಗೆ ಕಾರ್ಯಸಾಮಗ್ರಿಯನ್ನು ಒದಗಿಸುವುದು ಮನಸ್ಸು. ಮನಸ್ಸಿಗೆ ಸಾಮಗ್ರಿಯನ್ನೊದಗಿಸುವುವು ಇಂದ್ರಿಯಗಳು. ಇಂದ್ರಿಯಗಳು ವಿಷಯ ಸಂಪಾದನೆ ಮಾಡದಿದ್ದರೆ ಮನಸ್ಸಿನ ಕ್ಷೇತ್ರ ಖಾಲಿ ಖಾಲಿ. ಹೀಗೆ ಇಂದ್ರಿಯಗಳು, ಮನಸ್ಸು, ಪೂರ್ವಸ್ಮೃತಿ - ಇವೆಲ್ಲ ಒದಗಿಸಿದ ತಿಳುವಳಿಕೆ ಬುದ್ಧಿಗೆ ಕಾರ್ಯದ್ರವ್ಯವಾಗುತ್ತದೆ. ಅಂದರೆ, ಮನಸ್ಸು ನಿರುದ್ಯೋಗಿಯಾಗಿ ಸುಮ್ಮನಾದರೆ ಬುದ್ಧಿಯೂ ಸುಮ್ಮನಿರಬೇಕಾದದ್ದೇ. ಬುದ್ಧಿಯ ಕರ್ಮಕ್ಷೇತ್ರ ಹೀಗೆ ಪರಿಮಿತವಾಗಿದೆ. ಜೀವ, ಆತ್ಮ, ಜನ್ಮಾಂತರ, ಲೋಕಾಂತರ-ಈ ವಿಷಯಗಳು ಅದಕ್ಕೆ ದೂರವಾದವು. ಇಂದ್ರಿಯಗಳು ಆ ರಹಸ್ಯಗಳನ್ನು ಮುಟ್ಟಲಾರವು. ಇಂದ್ರಿಯಗಳೇ ಹೋಗದ ಕಡೆ ಮನಸ್ಸು ಹೇಗೆ ಹೊಕ್ಕೀತು? ಹೀಗೆ ಪರತತ್ತ÷್ವವು ಬುದ್ಧಿಯ ಹಿಡಿತಕ್ಕೆ ಸಿಗುವಂತಹುದಲ್ಲ. ಮನುಷ್ಯಬುದ್ಧಿಗೆ ಎರಡು ಸ್ವಾಭಾವಿಕವಾದ ನ್ಯೂನತೆಗಳುಂಟು. ಒಂದು, ಕಾರ್ಯಸಾಮಗ್ರಿಯ ಅಪೂರ್ಣತೆ. ಇನ್ನೊಂದು, ದೃಷ್ಟಿಶಕ್ತಿಯ ಅಪೂರ್ಣತೆ. ಬುದ್ಧಿಗಿರುವ ಕಾರ್ಯ ಮುಖ್ಯವಾಗಿ ವಸ್ತುಪರೀಕ್ಷೆ ಮತ್ತು ಯೋಗ್ಯತಾ ನಿರ್ಣಯ. ಪರೀಕ್ಷೆಗೆ ವಿಷಯ ಬೇಕು. ಆ ವಿಷಯವನ್ನು ಬುದ್ಧಿ ಸ್ವತಂತ್ರವಾಗಿ ಕಲ್ಪಿಸಿಕೊಳ್ಳಲಾರದು. ಏಕೆಂದರೆ; ಅದಕ್ಕೆ ನೇರವಾಗಿ ಲೋಕಸಂಪರ್ಕವಿಲ್ಲ. ಬುದ್ಧಿಗೆ ಪರೀಕ್ಷಾ ಸಾಮಗ್ರಿಯನ್ನು ಮನಸ್ಸೋ ಸ್ಮೃತಿಯೋ ಒದಗಿಸಬೇಕು. ಮನಸ್ಸೂ ಸ್ಮೃತಿಯೂ ವಿಷಯ ಸಾಮಗ್ರಿಯನ್ನು ಇಂದ್ರಿಯಗಳ ಮೂಲಕ ಸಂಗ್ರಹಿಸಬೇಕು. ಹೀಗೆ ಬುದ್ಧಿಗೆ ವಿಚಾರಸಾಮಗ್ರಿಯನ್ನೊದಗಿಸುವ ಚಾರರು ಇಂದ್ರಿಯಗಳು. ಮನುಷ್ಯನ ಎಲ್ಲಾ ಇಂದ್ರಿಯಗಳ ಸಾಮರ್ಥ್ಯ ಪರಿಮಿತವಾದದ್ದು; ಭೋಗಾಭಿಲಾಷಿಗಳು; ಹಾಗಾಗಿ ಪಕ್ಷಪಾತಿ ಧೋರಣೆಯದ್ದು. ಹೀಗಾಗಿ ಇಂದ್ರಿಯಕರಣಗಳು ಸಂಗ್ರಹಿಸಿ ತಂದು ಬುದ್ಧಿಗೆ ದೊರಕಿಸುವ ವಿಚಾರಸಾಮಗ್ರಿ ಏಕಪಕ್ಷದ್ದು; ಮಿತಪ್ರದೇಶದ್ದು. ಇದರಿಂದ ಬುದ್ಧಿಯ ಕಾರ್ಯದ್ರವ್ಯದಲ್ಲಿಯೇ ನ್ಯೂನತೆ ಅನಿವಾರ್ಯ. ಯಾವುದು ಇಂದ್ರಿಯಾನುಭವಕ್ಕೆ ಸಿಕ್ಕುವುದಿಲ್ಲವೋ ಅದರ ಮೇಲೆ ಬುದ್ಧಿಗೆ ಅಧಿಕಾರವಿಲ್ಲ. ಅಧ್ಯಾತ್ಮಿಕ ಸಂಗತಿಗಳು ಇಂದ್ರಿಯಾತೀತವಾದುವು. ಅಧ್ಯಾತ್ಮವೊಂದಿದೆ ಎಂದು ಮನಸ್ಸು ಸೂಚಿಸಬಹುದು; ಬುದ್ಧಿ ಅದನ್ನೊಪ್ಪಬಹುದು; ಆದರೂ ಅಧ್ಯಾತ್ಮವು ಬುದ್ಧಿಗೆ ಸ್ವಾಧೀನವಾಯಿತೆನ್ನಬಹುದು. ಟಿ.ಹೆಚ್.ಗ್ರೀನ್ ಹೇಳುವಂತೆ; "ನಮ್ಮಲ್ಲಿ ಅನೇಕರಿಗೆ ಮನಸ್ಸಿನಲ್ಲಿ ಒಳ್ಳೊಳ್ಳೆಯ ಉದ್ದೇಶಗಳಿರುತ್ತವೆ; ಆದರೆ ಅವು ಮಾತಿನಲ್ಲಿ ಪರ್ಯವಸಾನವಾಗುತ್ತವೆ, ಕೆಲಸದಲ್ಲಿ ಹೊರಹೊಮ್ಮುವುದಿಲ್ಲ. ದೊಡ್ಡ ವಿಷಯಗಳನ್ನು ಕುರಿತು ಹೆಚ್ಚು ಮಾತನಾಡಬಾರದು. ಮಾತು ಹೆಚ್ಚಿದಂತೆ ನೀತಿ ಕುಗ್ಗುತ್ತದೆ." ಹಕ್ಕು ಆಕರ್ಷಕ. ಎಲ್ಲರಿಗೂ ಬೇಕಾದದ್ದು. ಆದರೆ ಹೊಣೆಗಾರಿಕೆ ತುಂಬಾ ಕೆಟ್ಟದ್ದು. ಅದಕ್ಕೆ ಹೆಗಲುಕೊಡದಿದ್ದರೆ ಬದುಕೇ ಅಲ್ಲ. ಕೊಟ್ಟಿತೋ ಹೆಗಲು ಮುರಿದೇಹೋಗುವಷ್ಟು ಭಾರ. ಕೆಳಗಿನವರಿಗೆ ಮೇಲಿನವರ ಒಳ್ಳೆಯತನವಷ್ಟೇ ದೊಡ್ಡದಾಗಿ ಕಾಣುತ್ತದೆ. ಮೇಲಿನವರಿಗೆ ಕೆಳಗಿನವರ ಕೆಟ್ಟತನವಷ್ಟೇ ಇರುವುದಕ್ಕಿಂತ ದೊಡ್ಡದಾಗಿ ತೋರುತ್ತದೆ. ಶತ್ರುಗಳನ್ನು ಕಡಿಮೆ ಮಾಡಬೇಕೆಂದರೆ ಪ್ರೀತಿಸುವವರನ್ನು ಹೆಚ್ಚಿಸಿಕೊಳ್ಳುವುದೇ ಹಾದಿ. ಆಕಳ ಕೆಚ್ಚಲಿನಲ್ಲಿ ಹಾಲು ತುಂಬಿ ಉಬ್ಬಿಕೊಂಡಿರುವಾಗ ಕರು ಬಂದು ಅದನ್ನು ಹೀರಿದರೆ ಆಕಳಿಗೆ ತೃಪ್ತಿ. ಕರು ಬಾರದಿದ್ದರೆ ಆಕಳಿಗೆ ತನ್ನ ಭಾಗ್ಯವೇ ಭಾರ! ಒಳ್ಳೆಯ ಕುದುರೆಗೆ ಯಜಮಾನ ತನ್ನ ವೇಗವನ್ನು ಬಳಸಿಕೊಂಡಾಗ ತೃಪ್ತಿ! ನಾಯಿಗೆ ತನ್ನ ಯಜಮಾನ ತನ್ನಿಂದ ಒಂದು ಸ್ವಾಮಿಕಾರ್ಯ ನಡೆದಾಗ ಅತ್ಯಂತ ಸಂತೋಷ!-ಹೀಗೆ ಪ್ರೀತಿಯು ನದಿಯು ಸಮುದ್ರವನ್ನು ಹುಡುಕುವ ಹಾಗೆ ಒಬ್ಬ
ಗ್ರಾಹಕ'ನಿಗಾಗಿ ಹುಡುಕಾಡುತ್ತಾ ಅಲೆದಾಡುತ್ತಾ ಕಾದುಕೊಂಡಿರುತ್ತದೆ.
ವಸ್ತು ವಸ್ತುವಿನಲ್ಲಿಯೂ ನಿಂತು ಒಂದೊಂದು ಪ್ರತ್ಯೇಕವೆಂಬ ಭಾವನೆಯನ್ನು ಯಾವುದು ಉಂಟು ಮಾಡುವುದೋ ಅದು ಮನಸ್ಸು. ಪ್ರತ್ಯೇಕವೆಂದ ಮೇಲೆ ಅದಕ್ಕೂ ಇದಕ್ಕೂ ಸಂಬಂಧವನ್ನು ಕಲ್ಪಿಸಲು ಸಾಧನವಾದುದು ಮನಸ್ಸು. ಸಂಬಂಧವು ಏರ್ಪಟ್ಟ ಮೇಲೆ ಉಂಟಾಗುವ ಸುಖದುಃಖಗಳು ಮನಸ್ಸಿನ ಇಚ್ಛಾ-ದ್ವೇಷಾನುಗುಣವಾಗಿ ಕಾಣುವುದು. ಹಾಗಾದರೆ ಸುಖದುಃಖಗಳೆನ್ನುವುದು ನಿಜವೇ? ಸುಖಕ್ಕೆ ಒಂದು ನಿಯತ ಸ್ವರೂಪವಿಲ್ಲ. ಸುಖವೆಂಬುದು ಮನಸ್ಸಿನದು. ಮನಸ್ಸು ಕಾಲ, ದೇಶ, ವರ್ತಮಾನಗಳಿಗೆ ತಕ್ಕಂತೆ; ದೇಹದ ಗುಣಕರ್ಮಗಳಿಗೆ ತಕ್ಕಂತೆ ಸುಖವನ್ನು ಕಲ್ಪಿಸಿಕೊಳ್ಳುತ್ತದೆ. ಮನಸ್ಸಿನ ಇಚ್ಛಾ-ದ್ವೇಷಗಳಿಗೆ ಅನುಗುಣವಾಗಿ ಸುಖ-ದುಃಖಗಳೆನ್ನುವೆವು. ಮಾನವನು ತಾನು ಮಾಡುವ ಪ್ರತಿಯೊಂದು ಕಾರ್ಯದಿಂದಲೂ ಬೆಳೆಯುವ ಅಹಂಕಾರವನ್ನು ಬೆಳೆಯಗೊಡದಿರುವುದೇ ವೈರಾಗ್ಯ. ಮನಃಶಾಂತಿ ಅಂದರೆ; ಹಗಲಿರುಳೂ 'ಇಲ್ಲಿ ಸಾಲದು' ಎಂದು ಅಳುವ ಮನಸ್ಸು ತನ್ನ ಅಳುವನ್ನು ನೀಗಿಕೊಂಡು ಸುಖವಾಗಿರುವುದು.
ವಿವಿಧತೆಯಿರುವುದರಿಂದಲೇ ಒಬ್ಬ ಮನುಷ್ಯನಿಗೆ ಇನ್ನೊಬ್ಬನ ವಿಷಯದಲ್ಲಿ ಕುತೂಹಲ, ಆದರಣೆ. ಅಸಮಾನತೆ ಯಿರುವುದರಿಂದಲೇ ಒಬ್ಬ ಮನುಷ್ಯನಿಗೆ ಇನ್ನೊಬ್ಬನ ಸಹಾಯ ಬೇಕೆನಿಸುತ್ತದೆ. ವಿವಿಧತೆ ಅಸಮಾನತೆಗಳಿರುವುದರಿಂದಲೇ ಪರಸ್ಪರ ಸ್ನೇಹಾಭ್ಯಾಸಕ್ಕೆ ಅವಕಾಶ. ಎಲ್ಲರೂ ಹಾಡುವವರಾಗಿಬಿಟ್ಟರೆ ಕೇಳುವವರಾರು? ಎಲ್ಲರೂ ವೈದ್ಯರೇ ಆದರೆ ಚಿಕಿತ್ಸೆ ಮಾಡಿಸಿಕೊಳ್ಳುವವರಾರು? ಎಲ್ಲರೂ ಉಪಾಧ್ಯಾಯರಾದರೆ ಪಾಠ ಹೇಳಿಸಿಕೊಳ್ಳುವವರಾರು? ನಮ್ಮಲ್ಲಿಲ್ಲದಿರುವ ಪದಾರ್ಥವನ್ನು ಇನ್ನೊಬ್ಬರಿಂದ ಬಯಸುತ್ತೇವೆ; ಅದರಿಂದಲೇ ಸ್ನೇಹವುಂಟಾಗುತ್ತದೆ. ಸ್ನೇಹ ಗೌರವಗಳು ಉಂಟಾಗುತ್ತವೆ.