ಮಾದಕ ವಸ್ತುಗಳ ಜಾಲ ವಿರುದ್ಧ ಕ್ರಮ ಅಗತ್ಯ
ದೇಶಾದ್ಯಂತ ಮೊದಲು ಮಾದಕವಸ್ತುಗಳ ಜಾಲದ ಮೇಲೆ ವ್ಯಾಪಕ ದಾಳಿ ನಡೆಯಬೇಕು. ಎಲ್ಲ ರಾಜ್ಯಗಳಲ್ಲಿ ಏಕಕಾಲಕ್ಕೆ ನಡೆಯಬೇಕು. ಇದು ಯಾವುದೇ ರಾಜಕೀಯ ಪಕ್ಷದ ಸಾಧನೆಯಲ್ಲ. ಇಡೀ ದೇಶದ ಜನರ ಸಂಕಲ್ಪ ಮತ್ತು ದೀಕ್ಷೆ. ಇದಕ್ಕೆ ರಾಜಕೀಯ ಲೇಪ ಖಂಡಿತ ಸರಿಯಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪಕ್ಷ ರಾಜಕಾರಣ ಮರೆತು ಈ ಜಾಲವನ್ನು ಸದೆಬಡಿಯಲು ಸಹಕರಿಸಬೇಕು. ಈಗಾಗಲೇ ಹಲವು ರಾಜ್ಯಗಳಲ್ಲಿ ಮಾದಕವಸ್ತುಗಳ ಜಾಲ ಪ್ರಬಲವಾಗಿ ಬೆಳೆದುಬಿಟ್ಟಿದೆ. ಕೆಲವು ಕಡೆ ಸರ್ಕಾರಿ ಅಧಿಕಾರಿಗಳ ಹಿಡಿತದಲ್ಲಿ ಕಾನೂನು ಪರಿಪಾಲನೆ ಉಳಿದುಕೊಂಡಿಲ್ಲ. ಈ ಅನಿಷ್ಠ ದಂಧೆಯವರು ಇಡೀ ಸರ್ಕಾರಕ್ಕೆ ಸವಾಲು ಹಾಕುವಷ್ಟು ಬೆಳೆದುನಿಂತಿದ್ದಾರೆ. ಅದರಲ್ಲೂ ಗಡಿ ಭಾಗದ ರಾಜ್ಯಗಳಲ್ಲಿ ಈ ಜಾಲ ಅಲ್ಲಿಯ ರಾಜಕೀಯದ ಮೇಲೆ ಪ್ರಭಾವ ಬೀರುವಷ್ಟು ಬೆಳೆದುಬಿಟ್ಟಿದೆ. ಇದನ್ನು ಮೊದಲು ಮಟ್ಟ ಹಾಕಲೇಬೇಕು. ಮಾದಕ ವಸ್ತುಗಳ ಮಾರಾಟದ ಹಣ ಚುನಾವಣೆಗೆ ಬಳಕೆಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ.
ನಮ್ಮ ಎನ್‌ಐಎ ದೇಶದ ಉದ್ದಗಲಕ್ಕೂ ಕಣ್ಣಿಟ್ಟಿದ್ದು, ಉಗ್ರರು ಎಲ್ಲೇ ಅಡಗಿಕೊಂಡಿದ್ದರೂ ರಾತ್ರೋರಾತ್ರಿ ಹಿಡಿದು ಜೈಲಿಗೆ ಹಾಕುವುದರಲ್ಲಿ ನೈಪುಣ್ಯತೆ ಹೊಂದಿದೆ. ಆದರೆ ಮಾದಕ ವಸ್ತುಗಳ ನಿರ್ಮೂಲನೆಗೆ ರಚನೆಗೊಂಡಿರುವ ಎನ್‌ಸಿಬಿ ಅಷ್ಟು ಪ್ರಬಲವಾಗಿಲ್ಲ. ನಮ್ಮ ಕಾನೂನು ಕೂಡ ಉಗ್ರವಾಗಿಲ್ಲ. ಮಾದಕವಸ್ತುಗಳ ಜಾಲದಲ್ಲಿರುವವರಿಗೆ ಕನಿಷ್ಠ ಜೀವಾವಧಿ ಶಿಕ್ಷೆ ವಿಧಿಸಬೇಕು. ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕ ಕಾಯ್ದೆ ರಚಿಸಿ ದಮನ ಮಾಡಬೇಕು. ದೇಶದ ಭವಿಷ್ಯದ ದೃಷ್ಟಿಯಿಂದ ಅಗತ್ಯ.
ನಮಗೆ ಎರಡು ಕಡೆ ಶತ್ರುಗಳ ಕಾಟವಿದೆ. ಇರಾನ್, ಆಫ್ಘಾನಿಸ್ತಾನ್, ಪಾಕಿಸ್ತಾನಗಳಿಂದ ಮಾದಕವಸ್ತುಗಳ ಸರಬರಾಜು ಮಾಡುವ ಜಾಲವೇ ಇದೆ. ರಾಜಾಸ್ತಾನ, ಉತ್ತರ ಪ್ರದೇಶ, ಪಂಜಾಬ್, ಮಧ್ಯಪ್ರದೇಶ, ಕಾಶ್ಮೀರ, ಉತ್ತರಾಖಂಡ್, ಜಾರ್ಖಡ್, ಗುಜರಾತ್‌ವರೆಗೆ ಈ ಜಾಲ ಹರಡಿಕೊಂಡಿದೆ. ಅದೇರೀತಿ ನೇಪಾಳ, ಮ್ಯಾನ್ಮಾರ್, ಬಾಂಗ್ಲಾ ಮೂಲಕ ಪಶ್ಚಿಮ ಬಂಗಾಲ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಮಾದಕ ವಸ್ತುಗಳ ಸರಬರಾಜಾಗುತ್ತಿದೆ. ನಮ್ಮನ್ನು ದ್ವೇಷಿಸುವ ದೇಶಗಳು ನೇರವಾಗಿ ಯುದ್ಧ ಮಾಡುವ ಅಗತ್ಯವಿಲ್ಲ. ಮಾದಕ ವಸ್ತುಗಳನ್ನು ರವಾನೆ ಮಾಡಿದರೆ ಸಾಕು. ದೇಶವೇ ದುರ್ಬಲವಾಗಿ ಹೋಗುತ್ತದೆ. ಇಂಥ ಪರಿಸ್ಥಿತಿ ಮುಂದುವರಿಯುವುದು ಸರಿಯಲ್ಲ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಲ್ಲದೆ ನ್ಯಾಯಾಲಯಗಳು ಕೂಡ ಯಾವುದೇ ಕಾರಣಕ್ಕೆ ಜಾಮೀನು ನೀಡಬಾರದು. ತಪ್ಪಿತಸ್ತರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಅದರಲ್ಲೂ ಈ ಜಾಲದಲ್ಲಿರುವ ಮಹಿಳೆಯರು ಹೆಚ್ಚು ಅಪಾಯಕಾರಿ. ಕಾನೂನು ಬಿಗಿಗೊಳಿಸುವುದರೊಂದಿಗೆ ಶಿಕ್ಷಣದ ಮೂಲಕ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಬೇಕು. ಇಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ ತಂದೆತಾಯಿ ಹಾಗೂ ಮಕ್ಕಳು ಮಾತ್ರ ಮನೆಯಲ್ಲಿ ಇರುತ್ತಾರೆ. ಹಿರಿಯರು ವೃದ್ಧಾಶ್ರಮ ಸೇರುತ್ತಿದ್ದಾರೆ. ಯುವ ಪೀಳಿಗೆಯ ಮೇಲೆ ಕಣ್ಣಿಡುವವರು ಯಾರೂ ಇಲ್ಲ. ಅದರಲ್ಲೂ ಯುವತಿಯರು ಈ ಮಾದಕ ವಸ್ತುಗಳಿಗೆ ಬಲಿಯಾದಲ್ಲಿ ಇಡೀ ಕುಟುಂಬ ನಾಶವಾಗುವುದರಲ್ಲಿ ಸಂದೇಹವಿಲ್ಲ.
ನಾವು ಮೊದಲಿನಿಂದಲೂ ಶತ್ರುಗಳು ಉಗ್ರವಾದಿಗಳನ್ನು ಕಳುಹಿಸುವ ಮೂಲಕ ನಮ್ಮ ಮೇಲೆ ಆಕ್ರಮಣ ಮಾಡುತ್ತಾರೆ ಎಂದು ಭಾವಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ವಿರುದ್ಧ ತೀವ್ರ ಹೋರಾಟವನ್ನೇ ನಡೆಸಿದ್ದೇವೆ. ಉಗ್ರವಾದಿಗಳಿಗೆ ಅರ್ಥಿಕ ನೆರವು ನೀಡುವ ದೇಶಗಳನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಪಾಕ್ ನಮ್ಮ ಮೇಲೆ ಉಗ್ರವಾದಿಗಳನ್ನು ರವಾನಿಸುವ ಕೆಲಸ ಕೈಗೊಂಡಿದೆ ಎಂದು ಆರೋಪಿಸುತ್ತಿದ್ದೇವೆ. ಆದರೆ ಈಗ ಇದಕ್ಕಿಂತ ಅಪಾಯಕಾರಿ ಮಾದಕವಸ್ತುಗಳ ಜಾಲ. ಇದು ದೇಶದ ತುಂಬ ವ್ಯಾಪಿಸಿಕೊಂಡಿದ್ದು ನಮ್ಮ ಯುವ ಜನಾಂಗವನ್ನು ಹಾಳು ಮಾಡುತ್ತಿದೆ.
ಎನ್‌ಸಿಬಿ ನೀಡಿರುವ ವಾರ್ಷಿಕ ವರದಿಗಳನ್ನು ನೋಡಿದರೆ ನರಕದರ್ಶನವಾಗುತ್ತದೆ. ಅಫೀಮು, ಹೆರಾಯಿನ್, ಗಾಂಜಾ ಸೇರಿದಂತೆ ಹಲವು ರೀತಿ ಮಾದಕವಸ್ತುಗಳು ಪ್ರತಿದಿನ ಇಡೀ ದೇಶಕ್ಕೆ ಹಂಚಿಕೆಯಾಗುತ್ತಿದೆ. ಇದಕ್ಕೆ ಪ್ರತ್ಯೇಕ ಜಾಲವಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸರು ಭಾಗಿಯಾಗುತ್ತಿರುವುದು ಆತಂಕದ ಸಂಗತಿ. ಹೆರಾಯಿನ್ ೨೯೮೬, ಅಫೀಮು ೮೫೩೩, ಮಾರ್ಫಿನ್ ೨೧೦, ಗಾಂಜಾ ೬೨೮೬೧೨, ಹಶೀಷ್ ೩೩೨೦, ಕೊಕೇನ್ ೨೯೨, ಎಫಿಡ್ರಿನ್ ೯೬೯, ಅಸಿಟಿಕ್ ೪೦, ಎಟಿಎಸ್ ೩೪೦೬ ಕೆಜಿ ಪತ್ತೆಯಾಗಿದೆ. ಇದಕ್ಕಿಂತ ಹೆಚ್ಚು ಪಾಲು ಬಳಕೆಯಲ್ಲಿದೆ. ಇದಕ್ಕೆ ಕ್ರಿಪ್ಟೋ ಕರೆನ್ಸಿ ಬಳಕೆಯಾಗುತ್ತಿರುವುದು ಮತ್ತೊಂದು ತಲೆನೋವು. ಕೋರಿಯರ್ ಮತ್ತು ಅಂಚೆಕಚೇರಿ ಪಾರ್ಸಲ್‌ಗಳನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಈಗ ಇದಕ್ಕೆ ಕಡಿವಾಣ ಹಾಕಲಾಗಿದೆ. ಈ ವಿಷಯದಲ್ಲಿ ಯಾವ ದಾಕ್ಷಿಣ್ಯವೂ ಬೇಡ. ಒಂದು ಕಡೆ ಪೆಡ್ಲರ್‌ಗಳನ್ನು ಹಿಡಿದು ಜೈಲಿಗೆ ರವಾನಿಸುವುದು, ಮತ್ತೊಂದು ಕಡೆ ಯುವಕ-ಯುವತಿಯರಿಗೆ ಇದರ ಬಗ್ಗೆ ಅರಿವು ಮೂಡಿಸುವುದು ಮುಖ್ಯ. ಇದರಲ್ಲಿ ಅವರ ತಂದೆತಾಯಿಗಳ ಪಾತ್ರ ಹಿರಿದು. ಅವರೇ ಇದಕ್ಕೆ ಬಲಿಯಾಗಿದ್ದರೆ ಏನೂ ಮಾಡಲು ಬರುವುದಿಲ್ಲ. ಅದರಲ್ಲೂ ಶ್ರೀಮಂತರ ಮನೆಗಳಲ್ಲಿ ಇದು ಹೆಚ್ಚಾಗಿದೆ. ನಗರ ಪ್ರದೇಶದವರೇ ಇದರ ದಾಸಾನುದಾಸರು. ಅವರು ಹಣದ ಪ್ರಭಾವ ಬಳಸಿ ಬಜಾವ್ ಆಗುವುದು ಸಾಮಾನ್ಯ ಸಂಗತಿಯಾಗಿದೆ. ಒಮ್ಮೆ ಎಫ್‌ಐಆರ್ ಆಯಿತು ಎಂದರೆ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದು ದೇಶ ದ್ರೋಹದ ಕೆಲಸ. ದುರ್ದೈವ ಬೆಂಗಳೂರು ನಗರ ಇದಕ್ಕೆ ಆವಾಸಸ್ಥಾನವಾಗುತ್ತಿದೆ. ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜು ಮತ್ತು ಎಂಜಿನಿಯರಿಂಗ್ ಸಂಸ್ಥೆಗಳು ಈ ವಿಷಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಂಥ ಸಂಸ್ಥೆಯನ್ನೇ ಮುಚ್ಚುವುದು ಸೂಕ್ತ.