For the best experience, open
https://m.samyuktakarnataka.in
on your mobile browser.

ಮಾದಕ ವಸ್ತು ಸಾಗಾಟ, ಮಾರಾಟ ಪ್ರಕರಣ: ವಿದೇಶಿ ಪ್ರಜೆ ಸೇರಿ 6 ಆರೋಪಿಗಳ ಬಂಧನ

09:20 PM Oct 28, 2024 IST | Samyukta Karnataka
ಮಾದಕ ವಸ್ತು ಸಾಗಾಟ  ಮಾರಾಟ ಪ್ರಕರಣ  ವಿದೇಶಿ ಪ್ರಜೆ ಸೇರಿ 6 ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಣಿಜ್ಯ ಪ್ರಮಾಣದ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿತರನ್ನು ಪಣಂಬೂರು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಮಾದಕ ವಸ್ತು ಮತ್ತು ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಚಂದನ್, ಶರತ್, ಮಧುಸೂಧನ ಕೊಂಚಾಡಿ, ಧನುಷ್ ಆಕಾಶ್ ಭವನ, ಮುಖೇಶ್ ದೇರೆಬೈಲ್ ಮತ್ತು ನೈಜಿರಿಯಾ ದೇಶದ ಪ್ರಜೆ ಮೈಕಲ್ ಬಾಲಾಜಿ ಯಾನೆ ಅಝಬೈಕ್ ಜಾನಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ೧೧ ಗ್ರಾಂ ಕೋಕೇನ್ ಮತ್ತು ಪ್ಯಾಕೇಟ್ ಸಮೇತ ೩೦ ಗ್ರಾಂ ತೂಕದ ಎಂಡಿಎಂಎ ೯೧,೦೦೦ ರೂ.ಗಳಷ್ಟು ಮೌಲ್ಯದ ಮಾದಕ ವಸ್ತು, ಸ್ಕೂಟರ್ ಮತ್ತು ೯ ಮೊಬೈಲ್‌ಗಳನ್ನು ಸ್ವಾಧೀನಪಡಿಸಲಾಗಿದೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಐಓಸಿಎಲ್ ಹಿಂಬಾಗದ ಸಮುದ್ರ ಕಡೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಸ್ಕೂಟರ್ ನಿಲ್ಲಿಸಿಕೊಂಡು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪಣಂಬೂರು ಠಾಣಾ ಪಿಎಸ್‌ಐ ಶ್ರೀಕಲಾ ಕೆ.ಟಿ. ಅವರಿಗೆ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ಶ್ರೀಕಲಾ ಕೆ.ಟಿ. ಅವರ ತಂಡ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿತರ ಪೈಕಿ ೫ ಮಂದಿ ಮಂಗಳೂರಿನ ನಿವಾಸಿಗಳಾಗಿದ್ದು, ಒಬ್ಬ ಆರೋಪಿ ನೈಜೀರಿಯಾ ದೇಶದವನಾಗಿರುತ್ತಾನೆ. ಆರೋಪಿಗಳೆಲ್ಲರೂ ಕ್ಯಾಟರಿಂಗ್, ಪೈಂಟಿಂಗ್ ಸೇರಿದಂತೆ ಖಾಸಗಿ ಕೆಲಸ ಮಾಡಿಕೊಂಡಿದ್ದು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.