ಮಾಧುರಿಗೆ ಜೀವಮಾನ ಸಾಧನೆ ಗರಿ
ಪಣಜಿ: ಭಾರತೀಯ ಸಿನಿಮಾಕ್ಕೆ ನೀಡಿರುವ ಸೇವೆಯನ್ನು ಪರಿಗಣಿಸಿ ಗೋವಾದಲ್ಲಿ ನಡೆಯುತ್ತಿರುವ ೫೪ ನೇಯಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ರವರಿಗೆ "ಜೀವಮಾನ ಸಾಧನೆ" ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾಲ್ಕು ದಶಕಗಳ ಕಾಲದ ಸಿನಿಮಾ ವೃತ್ತಿಜೀವನದೊಂದಿಗೆ ಮಾಧುರಿ ದೀಕ್ಷಿತ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಮೂಡಿಸಿರುವ ಛಾಪನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಗೋವಾ ರಾಜಧಾನಿ ಪಣಜಿ ಸಮೀಪದ ಬಾಂಬೋಲಿ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್‌ಸಿಂಗ್ ಠಾಕೂರ್ ರವರು ಮಾಧುರಿ ದೀಕ್ಷಿತ್ ರವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಕುರಿತು ಸಚಿವ ಅನುರಾಗ್ ಠಾಕೂರ್ ರವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಭಾರತದ ೫೪ ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿಂತ್ರರಂಗದಲ್ಲಿ ಶ್ರೇಷ್ಠತೆಯನ್ನು ನೀಡಿದ ಪ್ರತಿಭಾವಂತ ವರ್ಚಸ್ವೀ ನಟಿ ಮಾಧುರಿ ರವರಿಗೆ ಭಾರತೀಯ ಸಿನಿಮಾ ಕೊಡುಗೆಗಾಗಿ ವಿಶೇಷ ಮನ್ನಣೆ ಪ್ರಶಸ್ತಿ ನೀಡಿರುವುದಕ್ಕೆ ಸಂತೋಷವಿದೆ ಎಂದು ಸಚಿವರು ಶ್ಲಾಘನೆ ಮಾಡಿದ್ದಾರೆ.
ಗೋವಾದಲ್ಲಿ ನಡೆಯುತ್ತಿರುವ ೫೪ ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಗೋವಾಕ್ಕೆ ಆಗಮಿಸಿದ ಬಾಲಿವುಡ್ ಖ್ಯಾತಿಯ ನಟ ಸಲ್ಮಾನ್ ಖಾನ್ ರವರು ಪಣಜಿಯ ಅಲ್ತಿನೊದಲ್ಲಿರುವ ಗೋವಾ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ರವರು ಸಲ್ಮಾನ್ ಖಾನ್ ರವರನ್ನು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು.