ಮಾನವತೆಯ ಕಡಲು ಸ್ತ್ರೀ
ಬ್ರಿಟಿಷ್ ಆಡಳಿತದಿಂದ ಮುಕ್ತವಾಗಿ ಸ್ವತಂತ್ರ ಸರಕಾರವನ್ನು ರಚಿಸುವ ಯೋಚನೆಯ ಜೊತೆಜೊತೆಗೆ ದೇಶದ ಸಮಗ್ರವಿಕಾಸದ ಯೋಜನೆ ರೂಪಿಸಿದವರು ಬಹಳಷ್ಟು ಮಂದಿ. ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸಿ, ದೇಸೀ ಹೋರಾಟಕ್ಕೆ ಬಲತುಂಬಿ ನಾಡಿನ ಸದೃಢತೆಗೆ ಶಕ್ತಿಯಿತ್ತ ತೆರೆಮರೆಯ ಅಸಂಖ್ಯ ಸಮಾಜ ಸುಧಾರಕರಲ್ಲಿ ಪ್ರಾತ:ಸ್ಮರಣೀಯರಾದ ಮಿಥುಬೆನ್ ಪೆಟಿಟ್, ದೀನಭಗಿನಿ-ಮಾ ಜೀ' ಎಂದು ಸುಪ್ರಸಿದ್ಧರು. ಮುಂಬೈಯ ಉದ್ಯಮಿ ದಿನ್ ಶಾ ಪೆಟಿಟ್ ದಂಪತಿಗಳಿಗೆ ಜನಿಸಿದ ಮಿಥುಬೆನ್, ಶಾಲಾದಿನಗಳಲ್ಲೇ ಸ್ವಾತಂತ್ರ‍್ಯ ಹೋರಾಟದತ್ತ ಆಸಕ್ತರಾದರು. ಜಾಗೃತ ಮಹಿಳಾ ಸಭಾದ ಆಶ್ರಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇಶಭಕ್ತಿಯನ್ನು ಮೈಗೂಡಿಸಿದ ಪೆಟಿಟ್ ಯೋಚನೆಗಳು ಕುಟುಂಬವರ್ಗದವರಿಗೆ ಸರಿಕಾಣಲಿಲ್ಲ. ಆಳುವವರ ವಿರುದ್ಧ ಧ್ವನಿಯೆತ್ತುವ ಕಾರ್ಯದಲ್ಲಿ ತೊಡಗಿದರೆ ತೊಡಕಾಗುವುದೆಂಬ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತಪಡಿಸಿದ ಪರಿವಾರ ಸದಸ್ಯರಿಗೆ,
ನಿಮ್ಮ ವ್ಯಾಪಾರ, ವಹಿವಾಟಿನ ಶ್ರೇಯಸ್ಸಿಗಾಗಿ ನೀವು ಬ್ರಿಟಿಷ್ ಅಧಿಕಾರಿಗಳ ಜೊತೆ ನಿಂತರೆ ನನಗೇನೂ ಚಿಂತೆಯಿಲ್ಲ. ಆದರೆ ನಾನು ಸದಾಕಾಲ ದೇಶದ ಪರವಾಗಿಯೇ ನಿಲ್ಲುತ್ತೇನೆ. ನಾಡಿನ ಜನ ಸಂಕಷ್ಟದಲ್ಲಿರುವಾಗ ನಾವು ಕೇವಲ ನಮ್ಮ ಲಾಭ ನೋಡುವುದು ಸರಿಯಲ್ಲ. ಸರ್ವಸ್ವವನ್ನೂ ಒದಗಿಸಿದ ದೇಶದ ಹಿತವನ್ನು ಕಡೆಗಣಿಸುವುದು ಶೋಭೆಯೇ' ಎಂದು ಪ್ರಶ್ನಿಸಿದರು. ಗಾಂಧಿಯುಗ ಆರಂಭವಾಗುತ್ತಿದ್ದಂತೆ ಸತ್ಯಾಗ್ರಹ, ಅಹಿಂಸೆಯ ವಿಚಾರಗಳತ್ತ ಹೊರಳಿ ಕಸ್ತೂರಬಾ, ಸರೋಜಿನಿ ನಾಯ್ಡು ಮೊದಲಾದವರ ಸಖ್ಯ ಸಂಪಾದಿಸಿದರು. ತಮ್ಮ ಚುರುಕುತನ, ನಾಯಕತ್ವದ ಗುಣ, ಅನ್ಯಾಯವನ್ನು ಕಂಡಾಗ ಸಿಡಿದೇಳುವ ಪ್ರವೃತ್ತಿಯಿಂದ ಜನಪ್ರಿಯರಾದ ಮಿಥುಬೆನ್, ದಂಡಿ ಉಪ್ಪಿನ ಸತ್ಯಾಗ್ರಹದ ಯಶಸ್ಸಿಗಾಗಿ ಹಗಲಿರುಳೆನ್ನದೆ ದುಡಿದರು. ಸ್ವಾತಂತ್ರ‍್ಯ ಹೋರಾಟವು ಪ್ರತಿಯೊಬ್ಬ ಭಾರತೀಯನ ಸಹಭಾಗಿತ್ವದಿಂದ ಮಾತ್ರವೇ ಯಶಸ್ವಿಯಾಗುವುದೆಂಬ ಸ್ಪಷ್ಟ ಕಲ್ಪನೆಯಿದ್ದ ಅವರು ಮಹಿಳೆಯರನ್ನು ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿದರು. ಹೆಣ್ಣು ಅಡುಗೆ ಮನೆಗಷ್ಟೇ ಸೀಮಿತಳಾಗದೆ ಸಮಾಜಜೀವನದ ಮುಖ್ಯವಾಹಿನಿಯಲ್ಲಿ ತೊಡಗಿಸಬೇಕೆಂದು ಅಪೇಕ್ಷಿಸಿದ ಅವರ ದೂರದೃಷ್ಟಿ ವಿಶಿಷ್ಟ.
ಕಾನೂನುಭಂಗ ಚಳವಳಿಯಲ್ಲೂ ಸಕ್ರಿಯವಾಗಿ ಭಾಗವಹಿಸಿದ ಮಿಥುಬೆನ್, ಸರದಾರ ವಲ್ಲಭಭಾಯ್ ಪಟೇಲರ ನೇತೃತ್ವದಲ್ಲಿ ನಡೆದ ಬಾರ್ಡೊಲಿ ಸತ್ಯಾಗ್ರಹದ ಮೊದಲ ಸಾಲಿನಲ್ಲಿ ನಿಂತು ಹೋರಾಡಿದರು. ಜನಸಾಮಾನ್ಯರ ನೆಮ್ಮದಿಯನ್ನು ಕಸಿದ ಮದ್ಯಪಾನವನ್ನು ನಿಷೇಧಿಸುವಂತೆ ಬಹುದೊಡ್ಡ ಹೋರಾಟ ನಡೆಸಿ, ಮಹಿಳೆಯರ ಬವಣೆಯನ್ನು ಸಮಾಜದೆದುರು ತೆರೆದಿಟ್ಟರು. ಸಂಪೂರ್ಣ ಪಾನನಿಷೇಧ ಕಾಯಿದೆಗೆ ಅತ್ಯುಗ್ರ ಹೋರಾಟ ನಡೆಸಿದ ಪರಿಣಾಮ ಆಂಗ್ಲ ಸರಕಾರವೂ ಅದರತ್ತ ಯೋಚಿಸಬೇಕಾಯಿತು. ಮಹಿಳೆಯರು ಮನೆಯೊಳಗಿನ ಕೆಲಸಕ್ಕಷ್ಟೇ ಸೀಮಿತರಾಗದೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕೆಂಬ ಹಿನ್ನೆಲೆಯಲ್ಲಿ ಮಹಿಳಾ ಸಭಾವನ್ನು ಪ್ರಾರಂಭಿಸಿದರು. ಆದಿವಾಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ದೀನದಲಿತರ ಗೌರವಯುತ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಕಸ್ತೂರಬಾ ಸೇವಾಶ್ರಮ ಸ್ಥಾಪಿಸಿದರು. ಉಚಿತ ಶಿಕ್ಷಣ, ಊಟ, ವಸತಿಯ ಸೌಲಭ್ಯ ಒದಗಿಸಿ ಬಡಮಕ್ಕಳ ಉದ್ಧಾರಕ್ಕೆ ದುಡಿದ ಪೆಟಿಟ್, ಸ್ವಾತಂತ್ರ‍್ಯಾನಂತರ ಗಾಂಧಿವಾದದ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿದರು. ಗುಡ್ಡಕಾಡುಗಳನ್ನು ಸುತ್ತಾಡಿ ಮೂಲನಿವಾಸಿಗಳಿಗೆ ಬೇಕಾದ ಸಕಲ ಸೌಲಭ್ಯಗಳನ್ನು ಒದಗಿಸಿ ದೀನಸೇವೆಯಿಂದಲೇ ಬಾಳ್ವೆಗೆ ಮುಕ್ತಿ' ಎಂಬ ಆದರ್ಶವನ್ನು ಸಾರಿದ ಮಿಥುಬೆನ್ ಪೆಟಿಟ್, ದೇಶದ ದೀನಸಬಲೀಕರಣದ ರೂವಾರಿ.
ವೀರ ವೀರಾಂಗನೆಯರ ಸಾಹಸಗಾಥೆ ಅನುರಣನಗೊಂಡ ಕ್ಷಾತ್ರಭೂಮಿ ಭಾರತದ ಸಾಧನೆ ಸಾಮಾನ್ಯದ್ದಲ್ಲ. ಲಕ್ಷಾಂತರ ಹೋರಾಟಗಾರರ ತ್ಯಾಗದ ಫಲವಾಗಿ ಲಭಿಸಿರುವ ಸ್ವಾತಂತ್ರ‍್ಯವನ್ನು ಉಳಿಸಿ, ಸಮೃದ್ಧ ದೇಶ ನಿರ್ಮಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಭಾರತೀಯನದು. ಕುಟುಂಬದ ಹಿತದೃಷ್ಟಿಯಿಂದ ಹತ್ತಾರು ವರ್ಷಗಳ ಕಾಲ ಬದುಕಿರುವ ನಾವು, ಎರಡೇ ಎರಡು ವರ್ಷ ಪೂರ್ಣಮನಸ್ಸಿನಿಂದ ದೇಶಕ್ಕಾಗಿ ದುಡಿದರೆ ಜಗತ್ತಿನ ಸರ್ವಸುಂದರ ದೇಶವಾಗಿ ಹಿಂದುಸ್ಥಾನ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ' ಎಂಬ ಸ್ಫೂರ್ತಿಯುತ ಮಾತಿನಿಂದ ಎಳೆಯರಲ್ಲಿ ದೇಶಪ್ರೇಮವನ್ನೂ, ತರುಣರಲ್ಲಿ ಅಗಾಧ ಛಲವನ್ನೂ, ಹಿರಿಯರಲ್ಲಿ ಅದಮ್ಯ ವಿಶ್ವಾಸವನ್ನೂ ತುಂಬಿದ ಶತಾಯುಷಿ ಸ್ವಾತಂತ್ರ‍್ಯ ಹೋರಾಟಗಾರ್ತಿ ಲಾವಣ್ಯಪ್ರಭಾ ಘೋಷ್, ಗಂಡ ಮಕ್ಕಳೊಡಗೂಡಿ ದಾಸ್ಯಮುಕ್ತಿಯ ಆಂದೋಲನದಲ್ಲಿ ಭಾಗವಹಿಸಿದ ವೀರನಾರಿ. ಬಂಗಾಳದ ಕ್ರಾಂತಿಕಾರಿ ಅಧ್ಯಾಪಕ ನಿವರ್ಣಚಂದ್ರದಾಸ ದಂಪತಿಗಳಿಗೆ ಜನಿಸಿದ ಲಾವಣ್ಯಾದೇವಿ ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ತಂದೆಯಿಂದಲೇ ಅಕ್ಷರಾಭ್ಯಾಸ ಕಲಿತು ಹನ್ನೊಂದು ತುಂಬುವ ಹೊತ್ತಿಗೆ ಕ್ರಾಂತಿಕಾರಿ ಅತುಲಚಂದ್ರ ಘೋಷರ ಕೈಹಿಡಿದರು. ಹೋರಾಟದ ಹಾದಿಯಲ್ಲಿ ಜೊತೆಯಾದ ದಂಪತಿಗಳು ಅಸಹಕಾರ ಚಳವಳಿಯಲ್ಲಿ ಮುಂಚೂಣಿ ಸಾಲಿನಲ್ಲಿ ನಿಂತು ಕಂಪೆನಿ ಸರಕಾರದ ದುಷ್ಕೃತ್ಯಗಳನ್ನು ಬಯಲಿಗೆಳೆದರು. ಗಂಡನ ಬಂಧನದಿಂದ ಕಿಂಚಿತ್ತೂ ಧೃತಿಗೆಡದೆ ಕುಟುಂಬ ನಿರ್ವಹಣೆಯ ಜೊತೆಜೊತೆಗೆ ಇಂಗ್ಲೀಷರನ್ನು ದೇಶದಿಂದ ಒದ್ದೋಡಿಸುವ ಯೋಚನೆಯತ್ತಲೂ ಗಮನ ಹರಿಸಿದರು.
ಚೌರಿಚೌರಾ ಘಟನೆಯ ಬಳಿಕ ಸ್ವಾತಂತ್ರ‍್ಯ ಹೋರಾಟಗಾರರ ಚರ್ಚಾಕೇಂದ್ರ, ಕ್ರಾಂತಿಕಾರರ ಅಡಗುತಾಣ ಶಿಲ್ಪಾಶ್ರಮ ಸ್ಥಾಪಿಸಿ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಜನಸಾಮಾನ್ಯರನ್ನು ಅಣಿಗೊಳಿಸಿದರು. ದೇಶದ ಅನೇಕ ಭಾಗಗಳಲ್ಲಿ ನಡೆಯುವ ಚಳವಳಿಗಳ ಸ್ವರೂಪ, ಬಲಿದಾನಗೈದ ವೀರಾಗ್ರಣಿಗಳ ಜೀವನ ಸಾಧನೆ, ಪ್ರತಿ ಮನೆಯಲ್ಲೂ ಮೂಡಬೇಕಾದ ಸ್ವದೇಶೀ ಭಾವ, ಮನೆಯೊಡತಿಯರು ನಿರ್ವಹಿಸಬೇಕಾದ ತುರ್ತು ಜವಾಬ್ದಾರಿಗಳೇ ಮೊದಲಾಗಿ ಅನೇಕ ವಿಷಯಗಳ ಕುರಿತು `ಮುಕ್ತಿ' ಪಾಕ್ಷಿಕದಲ್ಲಿ ಸರಣಿ ಲೇಖನಗಳನ್ನು ಬರೆದ ಲಾವಣ್ಯಪ್ರಭಾ, ಅದರ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ತಮ್ಮ ಮೂವರು ಮಕ್ಕಳನ್ನೂ ಸ್ವಾತಂತ್ರ‍್ಯ ಯಜ್ಞದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ ಅತ್ಯಪರೂಪದ ತಾಯಿ, ಗಾಂಧೀಜಿಯವರ ವಿಚಾರಧಾರೆಯಿಂದ ಆಕರ್ಷಿತರಾಗಿ ಉಪ್ಪಿನ ಸತ್ಯಾಗ್ರಹ ಹಾಗೂ ಧ್ವಜ ಸತ್ಯಾಗ್ರಹದಲ್ಲಿ ಭಾಗಿಯಾಗಿ ಅನೇಕ ಬಾರಿ ಜೈಲುಶಿಕ್ಷೆ ಅನುಭವಿಸಿದರು. ಸೆರೆಮನೆಯಲ್ಲೂ ಹೋರಾಟ ಮುಂದುವರಿಸಿ ಬಿಡುಗಡೆಗೆ ಸಿದ್ಧಗೊಂಡ ಕೈದಿಗಳಲ್ಲಿ ವಿಶ್ವಾಸತುಂಬಿ, ಊರಿಗೆ ಮರಳಿದ ಬಳಿಕ ಮತ್ತೆ ಸಕ್ರಿಯರಾಗಬೇಕೆಂಬ ಸೂಚನೆಯಿತ್ತರು. ಚಲೇ ಜಾವ್ ಹೋರಾಟದಲ್ಲಿ ಕುಟುಂಬಸಮೇತ ಜೈಲುಪಾಲಾದ ಘೋಷ್, ಸ್ವಾತಂತ್ರ‍್ಯಾನಂತರ ಭಾಷಾ ಆಂದೋಲನದಲ್ಲಿ ಭಾಗಿಯಾದರು. ತುರ್ತುಪರಿಸ್ಥಿತಿಯ ಹೇರಿಕೆಯನ್ನು ಖಂಡಿಸಿ ಆಳುವವರಿಗೆ ಗಾಂಧಿಮಾರ್ಗದ ಪಾಠಗೈದ ಘೋಷ್ ಅಂತ್ಯಕಾಲ ಬಡತನದಿಂದಲೇ ಕೂಡಿತ್ತು. ನಿತ್ಯಜೀವನದ ಖರ್ಚಿಗೂ ಸಂಕಟಪಡಬೇಕಾದ ಪರಿಸ್ಥಿತಿಯಿದ್ದರೂ ಜನಸಾಮಾನ್ಯರ ನ್ಯಾಯಕ್ಕಾಗಿಯೇ ಜೀವನ ಸವೆಸಿದ ಲಾವಣ್ಯಪ್ರಭಾ ಘೋಷ್, ಯಾವುದೇ ಅಧಿಕಾರ-ಸ್ಥಾನ-ಸಮ್ಮಾನಗಳಿಗೆ ಭಾಜನರಾಗದೆ ಇತಿಹಾಸದ ಪುಟಗಳಿಂದ ಕಣ್ಮರೆಯಾದುದು ದುರಂತ.
ಸ್ತ್ರೀಯರ ಘನತೆ, ಗೌರವಗಳ ಬಗ್ಗೆ ಸ್ವಾತಂತ್ರ‍್ಯಪೂರ್ವದಲ್ಲೇ ಕಹಳೆ ಊದಿ ಪ್ರೇರಣಾದಾಯಿ ಬದುಕಿನಿಂದ ಸಹಸ್ರಾರು ಮಂದಿಯ ಬಾಳಲ್ಲಿ ಬೆಳಕು ತೋರಿದ ಸ್ತ್ರೀರತ್ಮಗಳ ಜನ್ಮೋತ್ಸವ ಸದಾ ಪ್ರೇರಣೆ.