ಮಾಮೂಲಿ ಕೊಡದಿದ್ದಕ್ಕೆ ಹಲ್ಲೆ ನಡೆಸಿದ ಪೊಲೀಸರು
ಹಾವೇರಿ: ಮರಳು ಸಾಗಿಸುತ್ತಿದ್ದ ಲಾರಿಯವರು ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಲಾರಿ ಚಾಲಕ ಹಾಗೂ ಮಾಲೀಕನ ಮೇಲೆ ಹಲ್ಲೆ ಮಾಡಿ, ಚಿನ್ನದ ಸರ ಕಿತ್ತುಕೊಂಡಿದ್ದಾರೆಂದು ಗುತ್ತಲ ಪಿಎಸ್‌ಐ ಶಂಕರಗೌಡ ಪಾಟೀಲ ಹಾಗೂ ಜೀಪ್ ಚಾಲಕ ಮಹೇಶಗೌಡ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಲಾರಿ ಚಾಲಕ ದ್ಯಾಮಪ್ಪ ಕೋಟೆಪ್ಪ ಕುರಿ(೨೮) ಹಾಗೂ ಲಾರಿ ಮಾಲೀಕ ಗುಡ್ಡಪ್ಪ ಹಲ್ಲೆಗೀಡಾದವರು ಎನ್ನಲಾಗಿದೆ. ಅಲ್ಲದೇ ಗುಡ್ಡಪ್ಪನ ಕೊರಳಿನಲ್ಲಿದ್ದ ಮೂರು ತೊಲೆ ಚಿನ್ನದ ಸರವನ್ನೂ ಕಿತ್ತುಕೊಂಡಿದ್ದಾರೆಂದು ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಲಾರಿ ಚಾಲಕ ದ್ಯಾಮಪ್ಪ ದೂರು ಸಲ್ಲಿಸಿದ್ದಾರೆ. ಮಾ. ೧೨ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪಾಸ್ ತೆಗೆದುಕೊಂಡು ಜಿಪಿಎಸ್ ಅಳವಡಿಸಿದ್ದ ಲಾರಿಯಲ್ಲಿ ರಾಣೆಬೆನ್ನೂರ ತಾಲೂಕಿನ ಬೇಲೂರು ಗ್ರಾಮದ ಮರಳಿನ ಪಾಯಿಂಟ್‌ನಿಂದ ಮರಳು ತುಂಬಿಸಿಕೊಂಡು ಚಿಕ್ಕೋಡಿ ತಾಲೂಕಿನ ತೋರಣಹಳ್ಳಿಗೆ ಮರಳು ಸಾಗಿಸಲು ತೆರಳುತ್ತಿದ್ದೆ.
ಗುತ್ತಲ ಬಳಿ ಹೊರಟಿದ್ದಾಗ ಪಿಎಸ್‌ಐ ಶಂಕರಗೌಡ ಪಾಟೀಲ ಹಾಗೂ ಜೀಪ್ ಚಾಲಕ ಮಹೇಶಗೌಡ ಲಾರಿ ನಿಲ್ಲಿಸಿ ೮೦ ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪಾಸ್ ಇದೆ ನಾವೇಕೆ ಹಣ ಕೊಡಬೇಕು ಎಂದರೂ ಹಲ್ಲೆ ನಡೆಸಿ, ನಿಂದಿಸಿದ್ದಾರೆ. ಮಹೇಶಗೌಡ ಲಾರಿ ಚಾಲಕರ ಚಿನ್ನದ ಸರವನ್ನೂ ಕಿತ್ತುಕೊಂಡಿದ್ದಾರೆ ಎಂದು ದ್ಯಾಮಪ್ಪ ದೂರಿನಲ್ಲಿ ಆರೋಪಿಸಿದ್ದಾನೆ.
ಮಾ. ೧೨ರಂದು ನನ್ನ ಹಾಗೂ ವಾಹನವನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದರು. ಮರುದಿನ ನಾನು ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿ ತಮ್ಮ ಮೇಲೆ ಆರೋಪ ಬರಬಾರದು ಎಂಬ ಕಾರಣಕ್ಕೆ ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ದರಿಂದ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದ್ಯಾಮಪ್ಪ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಗುತ್ತಲ ಪಿಎಸ್‌ಐ ವರ್ಗಾವಣೆ, ಕಾನ್‌ಸ್ಟೇಬಲ್ ಅಮಾನತು
ಮರಳು ಲಾರಿ ಮಾಲೀಕ ಹಾಗೂ ಚಾಲಕನ ಮೇಲಿನ ಹಲ್ಲೆ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಗುತ್ತಲ ಪಿಎಸ್‌ಐ ಶಂಕರಗೌಡ ಅವರನ್ನು ಹಾವೇರಿ ಕಂಟ್ರೋಲ್ ರೂಮ್‌ಗೆ ವರ್ಗಾವಣೆ ಮಾಡಲಾಗಿದ್ದು, ಕಾನ್‌ಸ್ಟೆಬಲ್ ಮಹೇಶಗೌಡನನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಇಲಾಖಾ ತನಿಖೆಗೆ ಆದೇಶಿಸಿದ್ದು, ವರದಿ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ಅಂಶುಕುಮಾರ ತಿಳಿಸಿದ್ದಾರೆ.