ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಯತ್ನಾಳ್ ಧರಣಿ
ಶಾಸಕ ಯತ್ನಾಳ್ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಎನ್ಒಸಿ ನೀಡದಿದ್ದರೆ, ಬಿಜೆಪಿ ಶಾಸಕರೆಲ್ಲ ಸೇರಿ ಹೋರಾಟ ಮಾಡಲಿದ್ದೇವೆ. ಅದಕ್ಕೂ ಬಗ್ಗದಿದ್ದರೆ ಕಬ್ಬು ಬೆಳೆದ ರೈತರೊಂದೊಗೆ ದೊಡ್ಡಮಟ್ಟದ ಹೋರಾಟ ಮಾಡಬೇಕಾಗಲಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ನ್ಯಾಯಾಲಯದ ಆದೇಶದ ನಂತರವೂ ಸಕ್ಕರೆ ಕಾರ್ಖಾನೆ ತೆರೆಯಲು ಅನುಮತಿ ನೀಡದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಡರಾತ್ರಿ ಮಂಡಳಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿರುವ ಅವರು ಕಬ್ಬು ಬೆಳೆವ ರೈತರಿಗೆ ಜೀವನಾಡಿಯಾಗಿರುವ, ನೂರಾರು ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ರಾಜ್ಯದ ಅತ್ಯಂತ ಹಿಂದುಳಿದ ಚಿಂಚೋಳಿ ಮತ ಕ್ಷೇತ್ರದಲ್ಲಿ ನಾವು ಪ್ರಾರಂಭಿಸುವ ಸಿದ್ಧಸಿರಿ ಶುಗರ್ಸ್ ಅಂಡ್ ಎಥನಾಲ್ ಪ್ರೈವೇಟ್ ಲಿಮಿಟೆಡ್ (ಸಕ್ಕರೆ ಕಾರ್ಖಾನೆಗೆ) ಸರ್ಕಾರ ಕ್ಷುಲ್ಲಕ, ರಾಜಕೀಯ ಕಾರಣಗಳಿಗೆ ಅನುಮತಿ ಹಿಂಪಡೆದು ಇದರಿಂದ ಕಬ್ಬು ಬೆಳೆಯುವ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಇದನ್ನು ನಾವು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ, ಘನ ನ್ಯಾಯಾಲಯ ಕಾರ್ಖಾನೆಯನ್ನು ಪುನರಾರಂಭಿಸಲು ತೀರ್ಪು ನೀಡಿದರೂ ಸಹ ಸರ್ಕಾರ ವಿಳಂಬ ನೀತಿ/ಧೋರಣೆ ಅನುಸರಿಸುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ರೈತ ವಿರೋಧಿ ನೀತಿಗೆ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗೆ, ಕಬ್ಬು ಬೆಳೆಗಾರರ ಹಿತರಕ್ಷಣೆಗೆ ನಾನು ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಹೋರಾತ್ರಿ ಧರಣಿ ಮಾಡುತ್ತಿದ್ದೇನೆ. ಸರ್ಕಾರಕ್ಕೆ ಕಿಂಚಿತ್ತಾದರೂ ಪ್ರಜ್ಞೆ, ರೈತರ ಪರ ಕಾಳಜಿ ಇದ್ದರೆ ಕೂಡಲೇ ಕಾರ್ಖಾನೆಯ ಪುನರಾರಂಭಕ್ಕೆ ಅನುಮತಿ ನೀಡಬೇಕು ಎಂದಿದ್ದಾರೆ.