ಮಿಡಿ ಮಾವು ತಜ್ಞ ಸುಬ್ಬರಾವ್ ಇನ್ನಿಲ್ಲ
ಸಾಗರ: ಮಿಡಿ ಮಾವು ತಜ್ಞ ಬಿ.ವಿ. ಸುಬ್ಬರಾವ್ ಅನಾರೋಗ್ಯದಿಂದಾಗಿ ನಿಧನ ಹೊಂದಿದ್ದಾರೆ.
ತಾಲೂಕಿನ ಕೆಳದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳೂರಿನ ಅಪರೂಪದ ಮಿಡಿ ಮಾವು ತಜ್ಞ ಬಿ.ವಿ. ಸುಬ್ಬರಾವ್ ಅವರಿಗೆ 87 ವರ್ಷ ವಯಸ್ಸಾಗಿತ್ತು, ದೀರ್ಘ ಕಾಲದ ಅನಾರೋಗ್ಯದಿಂದಾಗಿ ಇಂದು ತಮ್ಮ ಸ್ವಗೃಹದಲ್ಲಿ ಬೆಳಿಗ್ಗೆ ನಿಧನ ಹೊಂದಿದರು. ಮೃತರು ಕಸಿ, ಮಿಡಿ ಮಾವು ಕೃಷಿಯಲ್ಲಿ ಕೈಜೋಡಿಸಿದ್ದ ಪತ್ನಿ ಭಾಗೀರಥಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 2006 ರಲ್ಲಿ ಆರಂಭವಾದ ಮಾವಿನ ಮಿಡಿ ತಳಿ ಸಂಗ್ರಹ ಚಟುವಟಿಕೆಯಿಂದ ಸಂಗ್ರಹಿಸಿದ 120 ಜಾತಿ ಮಿಡಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ ಸುಬ್ಬಣ್ಣ ಪ್ರತಿಯೊಂದನ್ನೂ ವ್ಯವಸ್ಥಿತವಾಗಿ ಚಟ್ಟು ಹಾಕಿ ಮಾವಿನ ಮಿಡಿ ತಯಾರಿಸಿದ್ದರು. 120 ಜಾತಿಯ ಮಾವಿನ ಮಿಡಿಗಳನ್ನು ಪರೀಕ್ಷಿಸಿ, ಅವುಗಳ ತಾಳಿಕೆ ಬಾಳಿಕೆಗಳನ್ನು ವಿಶ್ಲೇಷಿಸಿ ಟಾಪ್ 10 ಎಂಬುದನ್ನು ಸಿದ ಹಾಗೂ ತಳಿ ಸಂರಕ್ಷಣೆಯಲ್ಲಿ ವಿಶೇಷವಾಗಿ ಕೆಲಸ ನಿರ್ವಹಿಸಿದ ಬಿ.ವಿ.ಸುಬ್ಬರಾವ್ ಅವರನ್ನು ಮಿಡಿ ಸುಬ್ಬಣ್ಣ ಎಂದೇ ಈ ಭಾಗದಲ್ಲಿ ಗುರುತಿಸಲಾಗುತ್ತಿತ್ತು. ಅವರ ಸಂಶೋಧನೆಗಳು ಯಾವುದೇ ಕೃಷಿ ವಿವಿ ಸಂಶೋಧನೆಯ ಮಟ್ಟದಲ್ಲಿತ್ತು. ಅವರ ಸಾಧನೆಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಕೇವಲ ಕೃಷಿಯಲ್ಲದೆ ರಂಗಭೂಮಿಯಲ್ಲಿ, ತಾಂತ್ರಿಕ ವಿಷಯಗಳಲ್ಲೂ ಸುಬ್ಬರಾವ್ ತೊಡಗಿಸಿಕೊಂಡಿದ್ದರು.