ಮಿ. ಪಾಟೀಲ ನಿಮ್ಮ ಸ್ಥಾನ ಶಾಶ್ವತವಲ್ಲ…
ಧಾರವಾಡ: ಕೃಷಿ ಮೇಳ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಮಿಸ್ಟರ್ ಪಿ.ಎಲ್. ಪಾಟೀಲ್ ನಿಮ್ಮ ಸ್ಥಾನ ಶಾಶ್ವತವಲ್ಲ. ಅದರಂತೆ ನನ್ನ ಸ್ಥಾನವೂ ಶಾಶ್ವತವಲ್ಲ. ಎಷ್ಟು ದಿನ ಮಂತ್ರಿಯಾಗಿ ಇರುತ್ತೇನೋ ಗೊತ್ತಿಲ್ಲ. ಅಧಿಕಾರ ಇದ್ದಷ್ಟು ಅವಧಿಯಲ್ಲಿ ನಾವು ಜನರ ಒಳಿತಿಗಾಗಿ ಕೆಲಸ ಮಾಡಬೇಕು. ಕೃಷಿ ವಿಶ್ವವಿದ್ಯಾಲಯ ರೈತರ ಒಳಿತಿಗಾಗಿ ಕಾರ್ಯಕ್ರಮ ರೂಪಿಸಬೇಕು. ನಿಮ್ಮ ಬಳಿ ಧಾರವಾಡ ಜಿಲ್ಲೆಯ ಕೃಷಿ ಕುರಿತ ಮಾಹಿತಿಯಿಲ್ಲ. ಹಿಂದೆ ಕೂಡ ನಾನು ನಿಮಗೆ ಜಿಲ್ಲಾ ಮಟ್ಟದ ಮಾಹಿತಿ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದೆ. ಆದರೆ ನೀವು ನನ್ನ ಮಾತನ್ನು ಕಡೆಗಣಿಸಿದಿರಿ. ಕೃಷಿ ವಿವಿ ರೈತರಿಂದ ಅಂತರ ಕಾಯ್ದುಕೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವು ಬಾರಿ ಹೇಳಿದರೂ ನೀವು ಕೆಡಿಪಿ ಸಭೆಗೆ ಹಾಜರಾಗಿಲ್ಲ. ಕೆಡಿಪಿ ಸಭೆ ನಮಗೆ ಸಂಬಂಧ ಇಲ್ಲ ಎಂದುಕೊಂಡಿದ್ದೀರಾ? ಕೃಷಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಿತ ಇಲಾಖೆಗಳ ಸಹಯೋಗ ಪಡೆದುಕೊಂಡು ರೈತರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ನಾನು ತಿಳಿಸಿದ್ದೆ. ಆದರೆ ಯಾವುದೇ ಫಾಲೋ ಅಪ್ ಆಗಲಿಲ್ಲ ಎಂದು ನಿರಾಸೆ ವ್ಯಕ್ತಪಡಿಸಿದರು.
ಭಾಷಣದ ಮಧ್ಯೆ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ಅವರ ಗಮನ ತಮ್ಮ ಕಡೆ ಇಲ್ಲ ಎಂಬುದನ್ನು ಅರಿತ ಸಚಿವ ಲಾಡ್ ಕೆಂಡಾಮಂಡಲವಾದರು. ಭಾಷಣ ನಿಲ್ಲಿಸಿ, ಮಿಸ್ಟರ್ ಪಾಟೀಲ್ ಇತ್ತ ಲಕ್ಷ್ಯ ಕೊಡಿರಿ. ವಿಶ್ವವಿದ್ಯಾಲಯದಲ್ಲಿ ನಡೆಯುವ ಸಂಶೋಧನೆಗಳನ್ನು ಹಾಗೂ ತಾಂತ್ರಿಕತೆಗಳನ್ನು ಮಾರ್ಕೆಟಿಂಗ್ ಮಾಡಲು ಏನು ಮಾಡಿದ್ದೀರಿ? ಸಹಕಾರಿ ಸಂಸ್ಥೆಗಳಲ್ಲಿ, ರೈತ ಕೇಂದ್ರಗಳಲ್ಲಿ ತಾಲೂಕು ಕಚೇರಿಗಳಲ್ಲಿ ನಿಮ್ಮ ಉತ್ಪನ್ನಗಳಿರಬೇಕು. ಈ ದಿಸೆಯಲ್ಲಿ ನೀವು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.