For the best experience, open
https://m.samyuktakarnataka.in
on your mobile browser.

ಮೀಟರ್‌ನಲ್ಲೇ ಅಡಗಿದೆ ದುಬಾರಿ ವಿದ್ಯುತ್ ದರ

04:00 AM Sep 27, 2024 IST | Samyukta Karnataka
ಮೀಟರ್‌ನಲ್ಲೇ ಅಡಗಿದೆ ದುಬಾರಿ ವಿದ್ಯುತ್ ದರ

ರಾಜ್ಯದಲ್ಲಿ ವಿದ್ಯುತ್ ನಷ್ಟ ಕಡಿಮೆ ಮಾಡಬೇಕು ಎಂಬ ಮಾತು ಮೊದಲಿನಿಂದಲೂ ಹೇಳುತ್ತ ಬರಲಾಗಿದೆ. ಆದರೂ ಮೀಟರ್ ಅಳವಡಿಕೆಯಲ್ಲೇ ಭ್ರಷ್ಟಾಚಾರ ಅಡಗಿದೆ ಎಂಬುದನ್ನು ಯಾರೂ ಬಾಯಿಬಿಟ್ಟು ಹೇಳುತ್ತಿಲ್ಲ. ಸ್ಮಾರ್ಟ್ ಮೀಟರ್ ಶೇ. ೧೦೦ರಷ್ಟಾದರೆ ವಿದ್ಯುತ್ ನಷ್ಟ ಶೇ. ೫ರಷ್ಟು ಕಡಿಮೆಯಾಗುತ್ತದೆ. ಗ್ರಾಹಕರ ಮೇಲಿರುವ ವಿದ್ಯುತ್ ಶುಲ್ಕದ ಹೊರೆಯನ್ನು ಕಡಿಮೆ ಮಾಡಬಹುದು. ಆದರೆ ಇದಕ್ಕೆ ಸರ್ಕಾರವೇ ಪ್ರಮುಖ ಅಡ್ಡಿ. ಅಲ್ಲಿರುವ ಅಕ್ರಮ ವಿಷವರ್ತುಲ ವಿದ್ಯುತ್ ದರ ಕಡಿಮೆ ಮಾಡಲು ಬಿಡುವುದಿಲ್ಲ.
ವಿದ್ಯುತ್ ಉತ್ಪಾದನೆಯಿಂದ ಹಿಡಿದು ಗ್ರಾಹಕ ಬಳಸುವವರೆಗೆ ಪ್ರತಿ ಹಂತದಲ್ಲೂ ಮೀಟರ್ ಅಳವಡಿಸಿದರೆ ವಿದ್ಯುತ್ ಸೋರಿಕೆ ಎಲ್ಲಿದೆ ಎಂಬುದು ತಿಳಿದುಹೋಗುತ್ತದೆ. ಈಗ ಕರ್ನಾಟಕ ವಿದ್ಯುತ್ ನಿಗಮದ ಹಂತದಲ್ಲಿ ಎಷ್ಟು ಉತ್ಪಾದನೆಯಾಗುತ್ತದೆ ಹಾಗೂ ಕೆಪಿಟಸಿಎಲ್‌ಗೆ ಎಷ್ಟು ವಿದ್ಯುತ್ ನೀಡಲಾಗಿದೆ ಎಂಬುದು ಮೀಟರ್‌ನಿಂದ ತಿಳಿದುಹೋಗುತ್ತದೆ. ಎಸ್ಕಾಂಗಳಿಗೆ ಬಂದ ಮೇಲೆ ೧೧ ಕೆವಿ ಫೀಡರ್‌ವರೆಗೆ ಮೀಟರ್ ಇರುವುದರಿಂದ ವಿವರ ಲಭ್ಯ. ಆದರೆ ವಿತರಣ ಟ್ರಾನ್ಸ್ಫಾರ್ಮರ್‌ಗೆ ಬಂದಾಗ ಗ್ರಾಹಕನಿಗೆ ನೀಡುವವರೆಗೆ ಆಗುವ ನಷ್ಟವೇ ಅಳತೆಗೆ ಸಿಗುತ್ತಿಲ್ಲ.
ವಿದ್ಯುತ್ ಸೋರಿಕೆ ಎಲ್ಲಿ: ದೇಶದಲ್ಲಿ ಒಟ್ಟು ೧.೫೧ ಕೋಟಿ ವಿತರಣ ಟ್ರಾನ್ಸ್ಫಾರ್ಮರ್‌ಗಳಿವೆ. ಇದರಲ್ಲಿ ಶೇಕಡ ೪೧.೯ ಟಿಸಿಗಳಿಗೆ ಮೀಟರ್ ಅಳವಡಿಸಲಾಗಿದೆ. ಕರ್ನಾಟಕದಲ್ಲಿ ೧೧ ಕೆವಿ ಫೀಡರ್‌ಗಳಿಗೆ ಶೇ.೭೬.೦೯ ಮೀಟರ್ ಅಳವಡಿಕೆಯಾಗಿದೆ. ಅಂದರೆ ಇಲ್ಲಿಂದಲೇ ವಿದ್ಯುತ್ ನಷ್ಟ ಆರಂಭ. ಗ್ರಾಹಕ ಮಟ್ಟದಲ್ಲಿ ಗೃಹಬಳಕೆಗೆ ಬಹುತೇಕ ಮೀಟರ್ ಅಳವಡಿಸಲಾಗಿದೆ. ಆದರೂ ಕಲಬುರ್ಗಿ, ಹುಬ್ಬಳ್ಳಿ, ಮಂಗಳೂರಿನಲ್ಲಿ ಗೃಹಬಳಕೆಗೆ ಮೀಟರ್ ಅಳವಡಿಸುವುದರಲ್ಲಿ ಶೇ.೧೦೦ ರಷ್ಟು ಸಾಧನೆಯಾಗಿಲ್ಲ. ಪ್ರತಿ ಬಾರಿ ಕೆಇಆರ್‌ಸಿ ವಿದ್ಯುತ್ ದರ ಪರಿಷ್ಕರಣೆ ಮಾಡುವಾಗ ೧೦ ಅಶ್ವಶಕ್ತಿವರೆಗೆ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸದೇ ಇರುವುದರಿಂದ ವಿದ್ಯುತ್ ನಷ್ಟ ಕಡಿಮೆ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳೇ ಹೇಳುತ್ತಾರೆ. ಇದರ ಬಗ್ಗೆ ಕೆಇಆರ್‌ಸಿ ಕೂಡ ಪ್ರಶ್ನಿಸಲು ಹೋಗಿಲ್ಲ.
ಪಂಪ್‌ಸೆಟ್ ಮಹಿಮೆ: ರಾಜ್ಯದಲ್ಲಿ ೩೪.೧೭ ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ ಎಂದು ಸರ್ಕಾರವೇ ತಿಳಿಸಿದೆ. ಒಟ್ಟು ಬಳಕೆಯಲ್ಲಿ ಶೇ.೩೩.೪ ರಷ್ಟು ವಿದ್ಯುತ್ ಪಂಪ್‌ಸೆಟ್‌ಗಳಿಗೆ ಹೋಗುತ್ತಿವೆ. ಅಂದರೆ ಈ ವಿದ್ಯುತ್ ನಿಖರವಾಗಿ ಗೊತ್ತಿಲ್ಲ.
ಇದರಲ್ಲಿ ವಿದ್ಯುತ್ ನಷ್ಟವೂ ಸೇರಿಹೋಗಿದೆ. ರೈತರ ಹೆಸರಿನಲ್ಲಿ ಸರ್ಕಾರ ಕೊಡುವ ಸಹಾಯಧನದಿಂದ ಎಲ್ಲ ಎಸ್ಕಾಂಗಳು ತಮ್ಮ ವಿದ್ಯುತ್ ನಷ್ಟವನ್ನು ಭರಿಸಿಕೊಳ್ಳುತ್ತಿವೆ. ಉಚಿತ ವಿದ್ಯುತ್‌ನಿಂದ ರೈತರಿಗೆ ಲಾಭವಾಗಿದೆಯೇ ಇಲ್ಲವೋ ತಿಳಿಯದು. ಆದರೆ ಎಸ್ಕಾಂಗಳಿಗೆ ಅನುಕೂಲವಾಗಿದೆ. ವಿದ್ಯುತ್ ನಷ್ಟವನ್ನು ಇದರಲ್ಲೇ ಸೇರಿಸುತ್ತಾರೆ.
ಅದಕ್ಕೆ ಒಂದು ವಿಧಾನವಿದೆ. ಪ್ರತಿ ಹೋಬಳಿಯಲ್ಲಿ ಎಷ್ಟು ಪಂಪ್‌ಸೆಟ್‌ಗಳಿವೆ ಎಂಬುದು ಅಲ್ಲಿಯ ಎಸ್ಕಾಂ ಅಧಿಕಾರಿಗಳಿಗೆ ತಿಳಿದಿರುತ್ತದೆ. ಅವರು ವಿತರಣ ಟ್ರಾನ್ಸ್ಫಾರ್ಮರ್‌ಗಳಲ್ಲಿ ಯಾವುದಕ್ಕೆ ಕೇವಲ ಪಂಪ್‌ಸೆಟ್ ಸಂಪರ್ಕ ಇರುತ್ತದೋ ಅಲ್ಲಿಗೆ ಮಾತ್ರ ಮೀಟರ್ ಅಳವಡಿಸಿ ರೀಡಿಂಗ್ ತೆಗೆದುಕೊಳ್ಳುತ್ತಾರೆ. ಅದನ್ನೇ ಇಡೀ ಹೋಬಳಿಗೆ ಅನ್ವಯಿಸಿ ಒಟ್ಟು ವಿದ್ಯುತ್ ಬಳಕೆಯಾಗಿದೆ ಎಂದು ಸರ್ಕಾರಕ್ಕೆ ಕಳುಹಿಸಿಕೊಡುತ್ತಾರೆ. ಹಣಕಾಸು ಇಲಾಖೆ ಪ್ರತಿ ವರ್ಷ ಇದನ್ನು ಪ್ರಶ್ನಿಸುತ್ತದೆ. ಈ ಮಾರ್ಗ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದು ಎಸ್ಕಾಂ ಅಧಿಕಾರಿಗಳು ಹೇಳುತ್ತಾರೆ.
ಕೊನೆಗೆ ಹಣಕಾಸು ಇಲಾಖೆ ಅದನ್ನು ಒಪ್ಪಿ ಸಹಾಯಧನ ಬಿಡುಗಡೆ ಮಾಡುತ್ತದೆ. ಈ ಸಹಾಯಧನ ಪ್ರತಿ ತಿಂಗಳು ನೀಡುವುದಿಲ್ಲ. ೬-೮ ತಿಂಗಳಿಗೊಮ್ಮೆ ನೀಡುತ್ತದೆ. ಅಲ್ಲಿಯವರೆಗೆ ಎಸ್ಕಾಂಗಳು ಬ್ಯಾಂಕ್ ಸಾಲ ಪಡೆಯುತ್ತವೆ. ಬ್ಯಾಂಕ್‌ಗಳೂ ಬಡ್ಡಿ ಆಸೆಯಿಂದ ಸಾಲ ನೀಡುತ್ತವೆ. ಈ ಬಡ್ಡಿ ದರವೇ ವಿದ್ಯುತ್ ದರ ಏರಿಕೆಗೆ ಕಾರಣವಾಗುತ್ತದೆ. ಇದಕ್ಕೆಲ್ಲ ಪ್ರಮುಖ ಕಾರಣ ಎಲ್ಲ ಕಡೆ ಮೀಟರ್ ಅಳವಡಿಸದೇ ಇರುವುದು. ರೈತರು ತಮ್ಮ ಪಂಪ್‌ಸೆಟ್‌ಗೆ ಮೀಟರ್ ಇಲ್ಲ ಎಂದು ಸಂತೋಷಪಡಬಹುದು.
ಆದರೆ ಅವರ ಮಕ್ಕಳೇ ನಗರದಲ್ಲಿ ಕೆಲಸ ಮಾಡುತ್ತ ಹೆಚ್ಚಿನ ವಿದ್ಯುತ್ ದರ ನೀಡುತ್ತ ಇರುತ್ತಾರೆ. ನಿಜವಾಗಿ ಲಾಭವಾಗಿರುವುದು ಎಸ್ಕಾಂಗಳಿಗೆ ಮತ್ತು ಆಡಳಿತದಲ್ಲಿರುವವರಿಗೆ ಮಾತ್ರ ಎಂಬುದು ಕಟು ಸತ್ಯ. ಇದಕ್ಕೆ ಕೆಇಆರ್‌ಸಿ ಕೂಡ ಮೌನವಹಿಸಿರುವುದು ಆಶ್ಚರ್ಯ.
ರೈತರು ಪಂಪ್‌ಸೆಟ್‌ಗೆ ಬೇಡ ಟಿಸಿಗಳಿಗೆ ಮೀಟರ್ ಅಳವಡಿಸಿ ಪ್ರತಿ ತಿಂಗಳು ರೀಡಿಂಗ್ ಮಾಡಿ ಎಂದರೆ ನಿಜವಾದ ಬಂಡವಾಳ ಹೊರಬರುತ್ತದೆ. ರೈತರು ತಮ್ಮ ಮಕ್ಕಳ ಮೇಲೆ ವಿದ್ಯುತ್ ಹೆಚ್ಚುವರಿ ಹೊರೆ ಹೇರುತ್ತಿರುವುದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಇದೇ ಅಧಿಕಾರಿಗಳಿಗೆ ಹೆಚ್ಚಿನ ಹಣ ಕಬಳಿಸಲು ಅನುಕೂಲ ಮಾಡಿಕೊಟ್ಟಿದೆ.
ಸ್ಮಾರ್ಟ್ ಮೀಟರ್: ಸ್ಮಾರ್ಟ್ ಮೀಟರ್ ರಾಜ್ಯದಲ್ಲಿ ಹೆಚ್ಚು ಜನಪ್ರಿಯವಾಗದಿರಲು ಕಾರಣ ಮೀಟರ್ ಖರೀದಿಯಲ್ಲಿರುವ ಕಿಕ್ ಬ್ಯಾಕ್ ಕಾರಣ. ಹೊಸ ಮೀಟರ್ ಬಳಕೆಗೆ ಬರಬೇಕು ಎಂದರೆ ಶೇ. ೩೫ ರಷ್ಟು ಕಮಿಷನ್ ನೀಡಬೇಕು. ಇದು ಕೇಂದ್ರದಿಂದ ಹಿಡಿದು ರಾಜ್ಯದವರೆಗೂ ಇದೆ. ಸ್ಮಾರ್ಟ್ ಮೀಟರ್ ಬಂದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ. ಅಧಿಕಾರಿಗಳಿಗೆ ಉಪಯೋಗವಲ್ಲ. ವಿದ್ಯುತ್ ನಷ್ಟವನ್ನು ಇದು ತಪ್ಪಿಸುತ್ತದೆ. ಅಲ್ಲದೆ ಗ್ರಾಹಕ ತನಗೆ ಎಷ್ಟು ಬೇಕೋ ಅಷ್ಟು ವಿದ್ಯುತ್ ಬಳಸಬಹುದು. ವಿಚಿತ್ರ ಎಂದರೆ ಹಳೆ ಮೀಟರ್ ಕೆಟ್ಟರೆ ಅಲ್ಲೂ ಸ್ಮಾರ್ಟ್ ಮೀಟರ್ ಬರೋಲ್ಲ. ದೇಶದ ಇತರ ರಾಜ್ಯಗಳಲ್ಲಿ ೧೧೧೯೨೭೨೮ ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ. ನಮ್ಮಲ್ಲಿ ಇದನ್ನು ಪ್ರಾಯೋಗಿಕವಾಗಿ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.