ಮೀನುಗಾರರ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್
ಮಂಗಳೂರು: ಕರಾವಳಿಯಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡು ಸಾವಿರಾರು ಮೀನುಗಾರರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಸಮುದ್ರದಲ್ಲಿ ಮೀನುಗಾರರಿಗೆ ಆರೋಗ್ಯ ಸಮಸ್ಯೆ ಎದುರಾದರೆ ತಕ್ಷಣ ಚಿಕಿತ್ಸೆ ನೀಡುವುದಾಗಲಿ ಅಥವಾ ಅವರ ರಕ್ಷಣೆಗಾಗಲಿ ಯಾವುದೇ ವ್ಯವಸ್ಥೆಯಿರಲಿಲ್ಲ.
ವಿಧಾನಸಭಾ ಚುನಾವಣೆ ಸಂದರ್ಭ ಎರಡು ರಾಷ್ಟ್ರೀಯ ಪಕ್ಷಗಳು ಮೀನುಗಾರರ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ಒದಗಿಸುವ ಭರವಸೆ ನೀಡಿದರು, ಅದು ಕೇವಲ ಭರವಸೆಯಾಗಿಯೇ ಉಳಿದಿತ್ತು. ಆದರೆ ಇದೀಗ ಸರ್ಕಾರದ ಸಹಾಯ ನಿರೀಕ್ಷಿಸದೆ ಉಳ್ಳಾಲ ವಲಯದ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದವರು ತಾವೇ ಆಂಬ್ಯುಲೆನ್ಸ್ ಬೋಟ್ ನಿರ್ಮಾಣದ ಕಾರ್ಯವನ್ನು ಮಾಡುತ್ತಿದ್ದಾರೆ.
ಉಳ್ಳಾಲ ಜೆಟ್ಟಿಯನ್ನು ಕೇಂದ್ರವಾಗಿರಿಸಿ ಈ ತುರ್ತು ಬೋಟ್ ಕಾರ್ಯಚರಣೆ ನಡೆಸಲಿದೆ. ಈ ಬೋಟ್ ಆಂಬುಲೆನ್ಸ್ ಗೆ ಒಟ್ಟು ೧೫ ಲಕ್ಷ ಖರ್ಚಾಗಲಿದ್ದು, ಇದನ್ನು ಮೀನುಗಾರರೇ ಭರಿಸಲಿದ್ದಾರೆ. ಕಾರ್ಯಾಚರಣೆ ನಡೆಸುವುದಕ್ಕೆ ೧೫ ಜನರ ತಂಡ ಸಿದ್ಧವಾಗಿದ್ದು, ಇದರಲ್ಲಿ ನುರಿತ ಈಜುಗಾರರು ಸೇರಿದಂತೆ ಪ್ರಾಥಮಿಕ ಚಿಕಿತ್ಸೆ ನೀಡಲು ನುರಿತ ವ್ಯಕ್ತಿಗಳು ಇರಲಿದ್ದಾರೆ. ಒಟ್ಟಿನಲ್ಲಿ ಮೀನುಗಾರರೇ ಸೇರಿ ಬೋಟ್ ಆಂಬ್ಯುಲೆನ್ಸ್ ಆಂಬುಲೆನ್ಸ್ ನಿರ್ಮಿಸುತ್ತಿದ್ದಾರೆ.
ಈಗಾಗಲೇ ಈ ತುರ್ತು ಬೋಟ್ ತಯಾರಾಗುತ್ತಿದ್ದು, ಇದರಲ್ಲಿ ಆಕ್ಸಿಜನ್ ವ್ಯವಸ್ಥೆ, ವೈದ್ಯಕೀಯ ಉಪಕರಣಗಳು, ಲೈಫ್ ಜಾಕೆಟ್ ಸಹಿತ ಜೀವ ಉಳಿಸಲು ಬೇಕಾದ ತುರ್ತು ಚಿಕಿತ್ಸಾ ವ್ಯವಸ್ಥೆ ಇರಲಿದೆ.