ಡಿ. 10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ
ಅನ್ನ ಕೊಡುವ ಅಮಾಯಕ ರೈತರ ಭೂಮಿ ಕಸಿಯುವ ಹುನ್ನಾರ ಮಾಡಬೇಡಿ. ಅನ್ಯಾಯದ ಅಕ್ರಮ ಭೂಮಿ ಒಡೆತನಕ್ಕೆ ವಿರೋಧವಿದೆ
ವಿಜಯನಗರ (ಹೊಸಪೇಟೆ):- ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಡಿ. 10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕೋಣ ಎಂದು ಜಯ ಮೃತ್ಯುಂಜಯ ಶ್ರೀ ಕರೆ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ನಮ್ಮ ಸಮಾಜದ ಋಣ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರದ ಮೇಲಿದೆ. ಹೀಗಾಗಿ ಆ ಋಣ ತೀರಿಸಲು ಮೀಸಲಾತಿ ಜಾರಿ ಮಾಡಲಿ ಎಂದರು. ವಿಜಯನಗರದ ರಾಜಧಾನಿ ಹೊಸಪೇಟೆಯಿಂದಲೇ ನಮ್ಮಸಮಾಜಕ್ಕೆ ನಾನು ಕರೆ ನೀಡುವೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೋರಾಟಕ್ಕೆ ಕೈ ಜೋಡಿಸಿ. ಡಿ. 10ರಂದು ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕೋಣ. ಲಕ್ಷ, ಲಕ್ಷ ಪಂಚಮಸಾಲಿಗಳು ಬೆಳಗಾವಿಗೆ ಬರ್ತಾರೆ, 5 ಸಾವಿರ ಟ್ರಾಕ್ಟರ್ ಗಳು ಸೌಧಕ್ಕೆ ತರ್ತಾರೆ. ಹೀಗಾಗಿ ನೀವು ಬೆಂಬಲಿಸಿ ಎಂದು ಶ್ರೀಗಳು ಮನವಿ ಮಾಡಿದ್ದಾರೆ.
ಮೀಸಲಾತಿಗಾಗಿ ನಾವು 7ನೇ ಹಂತದ ಹೋರಾಟ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೀಸಲಾತಿ ಜಾರಿ ಮಾಡುತ್ತದೆ ಎಂಬ ನಂಬಿಕೆ ಇತ್ತು. ಅದು ಹುಸಿಯಾಗಿದೆ. ಈ ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಅವರ ಕಾಲದಲ್ಲಿಯೂ ಮುತ್ತಿಗೆ ಹಾಕಿದ್ದೇವೆ, ಸರ್ಕಾರ ಈಗಲಾದರೂ ಮೀಸಲಾತಿ ಭರವಸೆ ನೀಡಬೇಕು, ಈ ಹಿಂದಿನ ಸಭೆಯಲ್ಲಿ ನೀತಿ ಸಂಹಿತೆ ನೆಪ ಮಾಡಿ ಬೇಸರವಾಗುವಂತೆ ಮಾಡಿದರು. ಆದರೆ ಹೋರಾಟ ನಿಲ್ಲುವುದಿಲ್ಲ. ಮುಖ್ಯಮಂತ್ರಿ ಅವರು ಮೀಸಲಾತಿ ಕುರಿತು ಸ್ಪಷ್ಟ ಭರವಸೆ ಕೊಡುವವರೆಗೆ ಈ ಹೋರಾಟ ನಿರಂತರ ಮುಂದುವರಿಯಲಿದೆ. ಯಾರೂ ಕುತಂತ್ರಕ್ಕೆ ಮಣಿಯಬಾರದು, ಪಕ್ಷಾತೀತವಾಗಿ ಸಮಾಜದ ಪರವಾಗಿ ಹೋರಾಟ ಮಾಡಿ. ನಮ್ಮಜೊತೆ ಬಂದರೆ ನಿಮ್ಮ ಅಧಿಕಾರಕ್ಕೆ ಕುತ್ತು ಬರುವುದಾದರೆ ಬಹಿರಂಗವಾಗಿ ಬರದೆ ಅಧಿವೇಶನದಲ್ಲಿ ಸಮಾಜದ ಪರವಾಗಿ ಧ್ವನಿ ಎತ್ತಿ ಎಂದರು.
ವಕ್ಸ್ ಆಸ್ತಿ ವಿವಾದ: ವಕ್ಸ್ ವಿಚಾರ- ಆಯಾ ಧರ್ಮದ ಅಭಿವೃದ್ಧಿ ಮಂಡಳಿ. ಆ ಧರ್ಮಕ್ಕೆ ಸಂಬಂಧಿಸಿದ ಅಭಿವೃದ್ಧಿ ಕೆಲಸ ಮಾಡಲಿ. ಅನ್ನ ಕೊಡುವ ಅಮಾಯಕ ರೈತರ ಭೂಮಿ ಕಸಿಯುವ ಹುನ್ನಾರ ಮಾಡಬೇಡಿ. ಅನ್ಯಾಯದ ಅಕ್ರಮ ಭೂಮಿ ಒಡೆತನಕ್ಕೆ ವಿರೋಧವಿದೆ. ರೈತರಿಗೆ ಅನ್ಯಾಯವಾದಾಗ ಅವರ ಪರವಾಗಿಯೇ ಇರುತ್ತೇವೆ.