ಮುಂದಿನ ದಾರಿಗೆ ಕೈಮರ
ಸರ್ಕಾರವೊಂದರ ವೈಚಾರಿಕ ಜಾಡನ್ನು ಗುರುತಿಸಬೇಕಾದರೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣವನ್ನು ಕೂಲಂಕಷವಾಗಿ ಪರಾಮರ್ಶಿಸುವುದು ಯೋಗ್ಯವಾದ ಮತ್ತು ವಿಶ್ವಾಸಾರ್ಹವಾದ ಮಾರ್ಗ. ಏಕೆಂದರೆ, ಸರ್ಕಾರದ ಭವಿಷ್ಯದ ಕನಸುಗಳನ್ನು ಬಹಿರಂಗ ಸಭೆಗಳಲ್ಲಾಗಲೀ ಇಲ್ಲವೇ ಪತ್ರಿಕಾಗೋಷ್ಠಿಗಳಲ್ಲಾಗಲೀ ನಿಖರವಾಗಿ ವಿವರಿಸುವುದು ಆಗದ ಕೆಲಸ. ಬಹಿರಂಗ ಸಭೆಗಳಲ್ಲಿ ಜನಪ್ರಿಯ ಸಂಗತಿಗಳನ್ನಷ್ಟೆ ಜನರಿಗೆ ಮುಟ್ಟಿಸಬಹುದು. ಪತ್ರಿಕಾಗೋಷ್ಠಿಗಳಲ್ಲಿ ಮುಖ್ಯವಾದ ಸಂಗತಿಗಳ ಪ್ರಕಟಣೆಗೆ ಅವಕಾಶವಿದ್ದರೂ ಸಂವಾದದ ನಡುವೆ ಅದು ಜಾಡುಬಿಡುವ ಅಪಾಯಗಳು ಹೆಚ್ಚು. ಆದರೆ, ರಾಜ್ಯಪಾಲರ ಭಾಷಣ ಹಾಗಲ್ಲ. ಸಂಪುಟ ಸಭೆಯಲ್ಲಿ ರಾಜ್ಯಪಾಲರ ಭಾಷಣದ ಸ್ವರೂಪದ ಕರಡನ್ನು ಚರ್ಚಿಸಿ ನಂತರ ರಾಜಭವನಕ್ಕೆ ಮುದ್ರಿತ ಪ್ರತಿಯನ್ನು ಕಳುಹಿಸುವ ಪದ್ಧತಿಯ ಪರಿಣಾಮವಾಗಿ ಏಕಾಗ್ರತೆಯಿಂದ ಮುಂದಿನ ದಾರಿಯನ್ನು ಗುರುತಿಸಲು ಹಿಂದೆ ಕ್ರಮಿಸಿರುವ ದಾರಿಯ ಬೆಳಕನ್ನು ವಿಸ್ತರಿಸಿ ಹೇಳಲು ರಾಜ್ಯಪಾಲರ ಭಾಷಣದಲ್ಲಿ ಮುಕ್ತ ಅವಕಾಶ. ಈ ಹಿನ್ನೆಲೆಯನ್ನು ಗುರುತಿಸಿಕೊಂಡು ಈ ಬಾರಿ ೨೦೨೪ರ ಸಾಲಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನದ ಮೂಲಕ ಪ್ರಸ್ತುತಪಡಿಸಿರುವ ಭಾಷಣದಲ್ಲಿ ಖಚಿತ ವೈಚಾರಿಕತೆಗೆ ಇದುವರೆಗೆ ಪಾಲನೆಯಾಗಿರುವ ಆಚಾರವಂತಿಕೆ ಆಧಾರವಾಗಿರುವುದು ಎದ್ದು ಕಾಣುವ ಅಂಶ.
ಸಾಮಾನ್ಯವಾಗಿ ರಾಜ್ಯಪಾಲರ ಭಾಷಣಗಳು ಇತ್ತೀಚಿನ ವರ್ಷಗಳಲ್ಲಿ ಶುಷ್ಕ ಭಾಷಣಗಳಾಗಿ ರೂಪುಗೊಳ್ಳಲು ಮುಖ್ಯವಾದ ಕಾರಣ ಅನಿಶ್ಚಿತ ರಾಜಕೀಯ ಪರಿಸ್ಥಿತಿ ಇಲ್ಲವೇ ದೂರದೃಷ್ಟಿ ಇಲ್ಲದ ರಾಜಕೀಯ ಮುಖಂಡರ ನೇತೃತ್ವದ ಸರ್ಕಾರಗಳು. ಇದರಿಂದಾಗಿ ರಾಜ್ಯಪಾಲರ ಭಾಷಣಗಳಲ್ಲಿ ಕಳೆದ ವರ್ಷದಲ್ಲಿ ಸರ್ಕಾರಗಳು ಕೈಗೊಂಡಿರುವ ವಿವಿಧ ಅಭಿವೃದ್ಧಿ ಕ್ರಮಗಳ ಪಠಣಕ್ಕೆ ಮಾತ್ರ ಅವಕಾಶ ಇರುವುದು ಎದ್ದು ಕಾಣುತ್ತದೆ. ಇದನ್ನು ಬಿಟ್ಟರೆ ಮುಂದಿನ ನೋಟ ಕೊಡುವ ಸಂಗತಿಗಳು ಕಡಿಮೆ. ಆದರೆ, ಅಪವಾದ ಎನ್ನುವ ರೀತಿಯಲ್ಲಿ ಈ ಬಾರಿಯ ರಾಜ್ಯಪಾಲರ ಭಾಷಣ ಖಚಿತ ದೃಷ್ಟಿಕೋನದ ರಾಜಕೀಯ ವೈಚಾರಿಕತೆಯನ್ನು ಸಾದರಪಡಿಸುವ ಜೊತೆಗೆ ಆಡಳಿತದಲ್ಲಿ ನೆಮ್ಮದಿಯ ನಾಳೆಗಳನ್ನು ರೂಪಿಸಲು ಮುಂದಾಗಲು ಇರುವ ಸಕಾರಣಗಳನ್ನು ನಿರ್ದಿಷ್ಟವಾಗಿ ಪ್ರಸ್ತಾಪಿಸಿರುವುದು ನಿಜಕ್ಕೂ ಗಮನಾರ್ಹ. ಕಳೆದ ನಲವತ್ತು ವರ್ಷಗಳ ಅವಧಿಯಲ್ಲಿ ಇಂತಹ ಹೊಸ ಜಾಡನ್ನು ತುಳಿದ ರಾಜ್ಯಪಾಲರ ಭಾಷಣಗಳು ಬೆರಳಿಕೆಯಷ್ಟು ಮಾತ್ರ. ೧೯೮೩-೮೪ರ ಅವಧಿಯಲ್ಲಿ ರಾಜ್ಯಪಾಲ ಎ.ಎನ್. ಬ್ಯಾನರ್ಜಿ ಅವರು ಪ್ರಸ್ತುತಪಡಿಸಿದ ಭಾಷಣ ಹೊಸ ರಾಜಕೀಯ ವೈಚಾರಿಕತೆಯ ಜೊತೆಗೆ ಮುಂದಿನ ದಾರಿಯನ್ನು ಸೂಚಿಸುವ ರೀತಿಯಲ್ಲಿ ವಿವರಗಳನ್ನು ನೀಡಿದ್ದು ಒಂದು ಕ್ರಾಂತಿಕಾರಕ ಹೆಜ್ಜೆಯೇ. ಆಗಿನ ರಾಜ್ಯಪಾಲರ ಭಾಷಣದಲ್ಲಿ ಬಲಿಷ್ಠ ಕೇಂದ್ರ ಹಾಗೂ ಸುಭದ್ರ ರಾಜ್ಯಗಳನ್ನು ಬಲವರ್ಧನೆಗೊಳಿಸುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಹೊಸ ರೂಪುರೇಷೆ ತಂದುಕೊಡುವ ಅಗತ್ಯವನ್ನು ಪ್ರಧಾನವಾಗಿ ಪ್ರಸ್ತಾಪಿಸಲಾಗಿತ್ತು. ಈ ಅಂಶ ಆಗಿನ ರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ಗಾಳಿ ಬೀಸಲು ಗ್ರಾಸವಾಗಿ ಪರಿಣಮಿಸಿತ್ತು. ಈಗ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಸ್ತುತಪಡಿಸಿರುವ ರಾಜ್ಯಪಾಲರ ಭಾಷಣದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ತೆರಿಗೆ ಪಾಲಿನಲ್ಲಿ ನ್ಯಾಯ ದೊರಕುತ್ತಿಲ್ಲ ಎಂಬ ಆಕ್ಷೇಪದ ದನಿ ಅಡಗಿರುವುದು ಕೂಡಾ ಬಹುತೇಕ ಇದೇ ಅಂಶ. ಕೇಂದ್ರ ಹಾಗೂ ರಾಜ್ಯಗಳ ನಡುವಣ ಸಂಬಂಧ ಸುಧಾರಿಸಬೇಕು ಎಂಬ ಸದಾಶಯ ಈ ಭಾಷಣದಲ್ಲಿರುವುದು ಬಹುಶಃ ವ್ಯಾಪಕ ರೀತಿಯಲ್ಲಿ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಹೆಚ್ಚು. ಇದರ ಜೊತೆಗೆ ೩೧ ಪುಟಗಳ ರಾಜ್ಯಪಾಲರ ಭಾಷಣದಲ್ಲಿ ಮುಖ್ಯವಾಗಿರುವುದು ಮಾರ್ಗಸೂಚಿ ಅಂಶಗಳಷ್ಟೆ. ಆದರೆ, ಈ ಮಾರ್ಗಸೂಚಿಯನ್ನು ಗುರುತಿಸುವುದು ೯ ತಿಂಗಳ ಆಡಳಿತದ ಕಾರ್ಯಸೂಚಿಯ ಮೂಲಕ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯ ಮೂಲಕ ಜನರಿಗೆ ಕೊಟ್ಟಿದ್ದ ಗ್ಯಾರಂಟಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅದರ ಯಶಸ್ಸಿನ ನಾನಾ ಮುಖಗಳನ್ನು ಸರ್ಕಾರ ವಿಶ್ಲೇಷಿಸಿ ಇದರಿಂದ ರಾಜ್ಯದ ಆರ್ಥಿಕ ಚಟುವಟಿಕೆ ಪೂರಕವಾಗಿರುವ ಅಂಶವನ್ನು ಗುರುತಿಸಿರುವುದು ಅದರ ವೈಚಾರಿಕತೆಯ ಸಮರ್ಥನೆಗೆ ಒಂದು ಕನ್ನಡಿ. ಲೋಕಸಭಾ ಚುನಾವಣೆ ನೆರಳು ದಟ್ಟವಾಗಿ ಕವಿದಿರುವ ಸಂದರ್ಭದಲ್ಲಿ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಾಗಿರುವ ಕೇಂದ್ರ ಸರ್ಕಾರದ ವಿರುದ್ಧದ ಟೀಕೆ ಸಹಜವಾಗಿಯೇ ಬಿಸಿ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಂತೂ ಇದೆ. ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರದ ವಿರುದ್ಧ ಟೀಕೆಯ ಪ್ರಸ್ತಾಪಗಳು ಬಂದಾಗ ಅದನ್ನು ತೇಲಿಸಿ ಭಾಷಣ ಮಾಡಿರುವ ಪ್ರಸಂಗಗಳೂ ಉಂಟು. ಇನ್ನು ಕೆಲವರು ಆ ಪ್ರಸ್ತಾಪಗಳನ್ನು ತಿದ್ದುಪಡಿ ಮಾಡಿ ತಮ್ಮ ಮೂಗಿನ ನೇರಕ್ಕೆ ಓದಿರುವ, ಇನ್ನು ಕೆಲವು ರಾಜ್ಯಪಾಲರು ಸದನದಿಂದಲೇ ನಿರ್ಗಮಿಸಿರುವ ವಿದ್ಯಮಾನಗಳು ಜರುಗಿವೆ. ಆದರೆ, ಕರ್ನಾಟಕ ಶಾಸನ ಸಭೆಗಿರುವ ಇತಿಹಾಸ ವಿಶಿಷ್ಟ. ಹೊಸ ಸಂಪ್ರದಾಯಗಳನ್ನು ಸ್ಥಾಪಿಸುತ್ತಲೇ ಪರಂಪರೆಗಳನ್ನು ಮುಂದುವರಿಸಿಕೊಂಡು ಬರುತ್ತಿರುವ ರಾಜ್ಯದ ಶಾಸನಸಭೆ ಇನ್ನೊಂದು ರೀತಿಯ ಮೆಚ್ಚುಗೆಗೆ ಪಾತ್ರವಾಗಲು ಯಾವ ಅಂಶವನ್ನೂ ಕೈಬಿಡದೆ ಪ್ರಸ್ತುತವಾದ ರಾಜ್ಯಪಾಲರ ಭಾಷಣವೂ ಒಂದು ಕಾರಣವಾಯಿತು ಎಂಬುದು ಹೊಸ ಹೆಗ್ಗಳಿಕೆ.