ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮುಂಬೈನಲ್ಲಿ ಗ್ಲೋಬಲ್ ಫಿನ್‌ಟೆಕ್ ಹಬ್ಬ

02:15 AM Sep 02, 2024 IST | Samyukta Karnataka

ಭಾರತ ವಿಶ್ವಗುರು ಆಗುವುದೋ ಇಲ್ಲವೋ ಎಂಬ ಪ್ರಶ್ನೆಯನ್ನು ಬದಿಗೊತ್ತಿ, ಭಾರತ ಟೆಕ್ ಗುರು ಆಗುವುದೇ ಎಂದು ಯಾರಾದರೂ ಕೇಳಿದರೆ ಮರುಮಾತಿಲ್ಲದೆ ಉತ್ತರ ಹೌದು ಎಂಬುದೇ ಆಗಿರುತ್ತದೆ, ಅದರಲ್ಲೂ ಮುಂಬೈನ ಬಿಕೆಸಿಯಲ್ಲಿ ನಡೆದ ಮೂರು ದಿನಗಳ "ಗ್ಲೋಬಲ್ ಫಿನ್‌ಟೆಕ್ ಫೆಸ್ಟ್" ನಡೆದ ರೀತಿ ನೋಡಿದರೆ ಭಾರತದ ಮೇಲೆ ತಾಯಿ ಸರಸ್ವತಿಯ ವಿಶೇಷ ಅನುಗ್ರಹ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಮಾನ್ಯವಾಗಿ ಲೋಕ ರೂಢಿಯಾಗಿ ಹೇಳುವ ಮಾತು ಬೆಂಗಳೂರಿನ ಜನಸಂದಣಿಯಲ್ಲಿ ನಿಂತು ಒಂದು ಕಲ್ಲು ಎಸೆದರೆ ಅದು ಟೆಕ್ಕಿಯ ಮೇಲೆ ಬೀಳುವ ಸಂಭವವೇ ಹೆಚ್ಚು, ಅಂತೆಯೇ ಮೊನ್ನೆ ನಡೆದ ಫಿನ್‌ಟೆಕ್ ಉತ್ಸವದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಸುತ್ತಮುತ್ತಲಿನ ಹೋಟೆಲ್‌ನಲ್ಲಿ ಹಾಗೂ ಜನಸಂದಣಿಯಲ್ಲಿ ನೀವು ಯಾರಿಗಾದರೂ ಸುಮ್ಮನೆ ಮಾತನಾಡಿಸಿದರೆ ಅದು ದೇಶದ ವಿದೇಶದಿಂದ ಬಂದ CEO, CTO, ಪ್ರಾಡಕ್ಟ್ ಹೆಡ್, ಸ್ಟಾರ್ಟ್ -ಅಪ್‌ಗಳ ಉದ್ಯೋಗಿಗಳು, ಮಾರ್ಕೆಟಿಂಗ್ ಮ್ಯಾನೇಜರ್‌ಗಳು, ಐಟಿ ಸಲಹೆಗಾರರು, ಆರ್ಕಿಟೆಕ್ಟ್ಗಳು ಹಾಗೂ ನಾನಾ ವಿಭಾಗಗಳಲ್ಲಿ ಪರಿಣಿತಿ ಹೊಂದಿದ್ದ ಪ್ರತಿನಿಧಿಗಳಾಗಿದ್ದರು. ಅದರಲ್ಲೂ ಮಾತನಾಡಿಸಿದವರಲ್ಲಿ ಸಿಂಹ ಪಾಲಿನಷ್ಟು ಜನ ಹೇಳಿದ್ದು ನಾವು ಬೆಂಗಳೂರಿನಲ್ಲಿ ಡೆವಲಪ್ಮೆಂಟ್ ಸೆಂಟರ್ ಹೊಂದಿದ್ದೇವೆ ಎಂದು ಹಾಗೂ ಬಹಳಷ್ಟು ಕಂಪನಿಗಳು ಬೆಂಗಳೂರಿನವೇ ಆಗಿದ್ದವು. ಅಷ್ಟರಮಟ್ಟಿಗೆ ಬೆಂಗಳೂರಿಗೆ ಬೆಂಗಳೂರೇ ಸಾಟಿ.
ಪಿಸಿಐ (ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾ), ಎನ್‌ಪಿಸಿಐ (ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ) ಹಾಗೂ ಎಫ್‌ಸಿಸಿ(ಫಿನ್‌ಟೆಕ್ ಕನ್ವರ್ಜೆನ್ಸ್ ಕೌನ್ಸಿಲ್ ಆಫ್ ಇಂಡಿಯಾ) ಸಹಭಾಗಿತ್ವದಲ್ಲಿ ನಡೆದ ಫಿನ್‌ಟೆಕ್ ಉತ್ಸವದಲ್ಲಿ ಬರೋಬ್ಬರಿ ೮೦೦೦೦ ಜನ ಮೂರು ದಿನಗಳ ಕಾಲ ಪಾಲ್ಗೊಂಡಿದ್ದರು. ಇದೆಲ್ಲದರ ಶ್ರೇಯಸ್ಸು ಪಿಸಿಐ, ಎನ್‌ಪಿಸಿಐ ಹಾಗೂ ಎಫ್‌ಸಿಸಿಯೊಂದಿಗೆ ಆರ್‌ಬಿಐಗೂ ಸೇರಬೇಕು, ಸಾಮಾನ್ಯವಾಗಿ ಯಾವುದೇ ದೇಶದ ಸೆಂಟ್ರಲ್ ಬ್ಯಾಂಕ್‌ಗಳೊಂದಿಗೆ ಮುಕ್ತವಾಗಿ ವ್ಯವಹರಿಸುವುದು ತುಸು ಕಷ್ಟ, ಆದರೆ ಆರ್‌ಬಿಐ ಹಾಗಲ್ಲ ಭಾರತದ ಸಮಗ್ರ ಆರ್ಥಿಕತೆಯನ್ನು ನಿಯಂತ್ರಿಸುವುದಲ್ಲದೆ ಕಾಲದಿಂದ ಕಾಲಕ್ಕೆ ನವ ನವೀನ ಆವಿಷ್ಕಾರಗಳನ್ನು ಬಳಸಿಕೊಂಡು ಅದನ್ನು ಆರ್ಥಿಕತೆಯ ಅವಿಭಾಜ್ಯ ಅಂಗವಾಗಿ ಪೋಣಿಸುವ ಹಾಗೂ ಪ್ರೋತ್ಸಾಹಿಸುವ ಕೀರ್ತಿಯೂ ಸಹ ಆರ್‌ಬಿಐಗೆ ಸಲ್ಲಬೇಕು. ಅಂತಹ ಪ್ರಯತ್ನದ ಭಾಗವೇ ಎನ್‌ಪಿಸಿಐ. ಎನ್‌ಪಿಸಿಐ ಅಂದರೆ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಹಾಗಂದರೆ ಪಕ್ಕನೆ ಗೊತ್ತಾಗಲಿಕ್ಕಿಲ್ಲ. ಆದರೆ ಯುಪಿಐ ಅಥವಾ ಭೀಮ್ ಅಪ್ಲಿಕೇಶನ್ ಅಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಈ ಯುಪಿಐ ಪೇಮೆಂಟ್ ಸಿಸ್ಟಮ್ ಎಂಬುವುದು ಎನ್‌ಪಿಸಿಐ ಕೊಡುಗೆ, ಹಾಗೆ ನೋಡಿದರೆ ಎನ್‌ಪಿಸಿಐ ಎಂಬ ಸಂಸ್ಥೆ ೨೦೦೭ರಲ್ಲಿಯೇ ಅಸ್ತಿತ್ವಕ್ಕೆ ಬಂದಿತ್ತು. ಮೊದಲು ಈ ಸಂಸ್ಥೆ ಆರ್‌ಬಿಐನ ಅಂಗ ಸಂಸ್ಥೆ ಐಡಿಆರ್‌ಬಿಟಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ೨೦೦೯ರಲ್ಲಿ ಆರ್‌ಬಿಐನ ನೇರ ಅಂಗ ಸಂಸ್ಥೆಯಾಗಿ ಮಾರ್ಪಾಡಾದ ನಂತರ ಪೇಮೆಂಟ್ ಲೋಕದಲ್ಲಿ ಅಚ್ಚರಿಗಳ ಮೇಲೆ ಅಚ್ಚರಿಯನ್ನು ಸೃಷ್ಟಿಸುತ್ತ ಬಂದಿತು. ಅದರಲ್ಲೂ ೨೦೧೬ರಲ್ಲಿ ಪರಿಚಯಿಸಿದ ಯುಪಿಐ ಪೇಮೆಂಟ್ಸ್ ಸಿಸ್ಟಮ್ ಭಾರತದಲ್ಲಿ ಫಿನ್‌ಟೆಕ್ ಕ್ರಾಂತಿಗೆ ನಾಂದಿ ಹಾಡಿತು ಎಂದರೆ ತಪ್ಪಲ್ಲ. ಪರಿಣಾಮವಾಗಿ ಇಂದು ಭಾರತದ ಯುಪಿಐ ಪೇಮೆಂಟ್ಸ್ ಸಿಸ್ಟಮ್ ದೇಶ ವಿದೇಶಗಳಲ್ಲಿ ಡಿಂಡಿಮ ಬಾರಿಸಿದೆ. ಇದೀಗ ಮೊನ್ನೆ ನಡೆದ ಮೂರು ದಿನಗಳ ಗ್ಲೋಬಲ್ ಫಿನ್‌ಟೆಕ್ ಫೆಸ್ಟಿವಲ್‌ನಲ್ಲಿ ಭಾರತ್ ಬಿಲ್ ಪೆ ಫಾರ್ ಬಿಸಿನೆಸ್ ಹಾಗೂ ಯುಪಿಐ ಸರ್ಕಲ್ ಎಂಬ ಎರಡು ಉತ್ಪನ್ನಗಳ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ಯುಪಿಐನಂತೆಯೇ ವ್ಯಾಪಾರಸ್ಥರಿಗೂ ಹತ್ತು ಹಲವು ಅನುಕೂಲವನ್ನು ಹಾಗೂ ಇದರ ಸುತ್ತಲೇ ಈ ವ್ಯವಹಾರಗಳಿಗೆ ಸಂಬಂಧ ಪಟ್ಟ ಪೆಟಿಎಂ, ಫೋನ್ ಪೇ, ಭಾರತ್ ಪೇ ಅಂತೆಯೇ ಇನ್ನಷ್ಟು ವ್ಯಾಪಾರ ವ್ಯವಹಾರ ಕೇಂದ್ರಿತ ಫಿನ್‌ಟೆಕ್ ಕಂಪನಿಗಳ ಉಗಮಕ್ಕೆ ನಾಂದಿ ಹಾಡಿದರೆ ಯಾರು ಆಶ್ಚರ್ಯ ಪಡಬೇಕಾಗಿಲ್ಲ.
ಯುಪಿಐ ಪರಿಚಯದಿಂದ ಆದ ಇನ್ನೊಂದು ಅತಿ ದೊಡ್ಡ ಉಪಕಾರವೆಂದರೆ, ಬೇಕೋ ಬೇಡವೋ ಬೀದಿ ಬದಿಯ ವ್ಯಾಪಾರಿಯೂ ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ಅವಶ್ಯಕತೆಯನ್ನು ಹುಟ್ಟು ಹಾಕಿದ್ದು, ಪರಿಣಾಮವಾಗಿ ಅಸಂಘಟಿತ ವ್ಯಾಪಾರಿಗಳು ಬ್ಯಾಂಕಿಂಗ್ ಪರಿಧಿಯ ಒಳಗೆ ಒಳಗೊಳ್ಳುವಂತಾಗಿ ದಳ್ಳಾಳಿಗಳಿಂದ ಸಾಲ ಪಡೆಯುವ ಪರಿಪಾಠ ಕೊಂಚ ಮಟ್ಟಕ್ಕೆ ತಗ್ಗಿದಂತಾಯಿತು. ಯುಪಿಐನ ವ್ಯಾಪಕತೆ ಎಷ್ಟರ ಮಟ್ಟಿಗಿದೆಯೆಂದರೆ ಪ್ರಪಂಚದಲ್ಲಿ ನಡೆಯುವ ಒಟ್ಟಾರೆ ರಿಯಲ್ ಟೈಮ್ ಅಂದರೆ ಆಗಿದ್ದಂಗೆ ನೈಜ ಸಮಯದಲ್ಲಿ ನಡೆಯುವ ಡಿಜಿಟಲ್ ವಹಿವಾಟಿನಲ್ಲಿ ಭಾರತದ ವಹಿವಾಟು ಅರ್ಧದಷ್ಟಿದೆಯಂತೆ, ಅಂದರೆ ಭಾರತದ ಡಿಜಿಟಲ್ ಮೂಲಭೂತ ಸೌಕರ್ಯಗಳು ಮುಂದುವರಿದ ದೇಶದ ಡಿಜಿಟಲ್ ಕ್ಷಮತೆಯನ್ನೇ ಮೀರಿಸಿದೆ. ಅಲ್ಲದೆ ಭಾರತದ ಫಿನ್‌ಟೆಕ್ ಕ್ಷೇತ್ರದ ಬೆಳವಣಿಗೆ ಕಳೆದ ಒಂದು ದಶಕದಲ್ಲಿಯೆ ಸರಿ ಸುಮಾರು ೫೦೦ ಪಟ್ಟು ಬೆಳೆದಿದೆ ಹಾಗೂ $೩೧ ಶತಕೋಟಿ ಹೂಡಿಕೆಗಳನ್ನು ಫಿನ್‌ಟೆಕ್ ಕ್ಷೇತ್ರ ಆಕರ್ಷಿಸಿದೆ. ಇದೆಲ್ಲವನ್ನು ಗಮನಿಸಿದರೆ ಅತೀ ಶೀಘ್ರದಲ್ಲಿ ಭಾರತ ಜಾಗತಿಕ ಫಿನ್‌ಟೆಕ್ ಕ್ಷೇತ್ರದ ಪವರ್‌ಹೌಸ್ ಆಗುವುದರಲ್ಲಿ ಯಾವುದೇ ಅನುಮಾನ ಬೇಡ.
ಒಟ್ಟಾರೆಯಾಗಿ ಆಗಸ್ಟ್ ೨೮, ೨೯ ಹಾಗೂ ೩೦ರಂದು ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಫಿನ್‌ಟೆಕ್ ಹಬ್ಬ ಹಲವಾರು ಭರವಸೆಗಳನ್ನು ಹುಟ್ಟು ಹಾಕಿದೆ. ಕಾರ್ಯಕ್ರಮದಲ್ಲಿ ನಂದನ್ ನೀಲಕೇಣಿ ಮಾತನಾಡಿ ಫಿಂಟೆರ್ನೆಟ್ ಎಂಬ ಪರಿಕಲ್ಪನೆಯನ್ನು ಎಳೆಎಳೆಯಾಗಿ ವಿವರಿಸಿದರು. ಈ ಫಿಂಟೆರ್ನೆಟ್ ಪರಿಕಲ್ಪನೆ ಯಶಸ್ವಿಯಾಗಿ ಅಳವಡಿಸಿದ್ದೆ ಆದರೆ ಮುಂಬರುವ ದಿನಗಳಲ್ಲಿ ಹಣಕಾಸು ವ್ಯವಸ್ಥೆಯ ಭವಿಷ್ಯವನ್ನೇ ಬದಲಾಯಿಸಲಿದೆ. ಹಾಗಾದರೆ ಏನಿದು ಫಿಂಟೆರ್ನೆಟ್ ಅಂದರೆ ನೀವು ಒಂದು ಬ್ಯಾಂಕಿನಲ್ಲಿ ಹಣವನ್ನು ಡೆಪಾಸಿಟ್ ಮಾಡಿರುತ್ತೀರಿ ಎಂದಿಟ್ಟುಕೊಳ್ಳಿ, ಅದಕ್ಕೊಂದು ಡಿಜಿಟಲ್ ಟೋಕನ್ ಅಳವಡಿಸುವುದು ಅಂದರೆ ನಾಳೆ ಆ ಟೋಕನ್ ಅನ್ನು ನೀವು ಎಲ್ಲಿ ಬೇಕಾದರೂ ವಿನಿಮಯ ಮಾಡಿಕೊಳ್ಳಬಹುದು. ಅಂತೆಯೇ ನಿಮ್ಮ ಆಸ್ತಿ ಪಾಸ್ತಿಗಳಿಗೂ ಒಂದು ಡಿಜಿಟಲ್ ಟೋಕನ್ ಮಾಡುವುದು, ಆ ಮೂಲಕ ಕೊಡುಕೊಳ್ಳುವಿಕೆಯನ್ನು ಸರಳ ಮಾಡಿ ಯಾವುದೇ ರೀತಿಯ ಆಸ್ತಿ ಪಾಸ್ತಿ ಇರಲಿ ಅದನ್ನು ಟೋಕನೈಸ್ ಮಾಡಿ ಅದನ್ನು ಡಿಜಿಟಲ್ ವ್ಯಾಪ್ತಿಗೆ ಒಳಪಡಿಸುವುದು. ಮೇಲ್ನೋಟಕ್ಕೆ ಇದು ಸಾಧ್ಯವೇ ಎಂದು ಹಲವಾರು ಪ್ರಶ್ನೆಗಳು ಎಳಬಹುದು. ಆದರೆ ಯುಪಿಐ ಪ್ರಾರಂಭವಾದಗಲೂ ಇದೇ ರೀತಿಯ ಪ್ರಶ್ನೆಗಳೆದ್ದಿದ್ದವು, ಆಶ್ಚರ್ಯವೆಂದರೆ ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್‌ನ ಕನಸಿನ ಕೂಸಾಗಿದ್ದ ಆಧಾರ ವ್ಯವಸ್ಥೆಯನ್ನು ಬಿಜೆಪಿ ವಿರೋಧಿಸಿತ್ತು. ಆದರೆ ಅದೇ ಆಧಾರ ಸೌಕರ್ಯವನ್ನು ಬಳಸಿ ಬಿಜೆಪಿ ಡಿಜಿಟಲ್ ಇಂಡಿಯಾ ಸೃಷ್ಟಿಸಲು ಮುಂದಾದಾಗ ಸಂಸತ್ತಿನಲ್ಲಿ ಅಂದಿನ ಮಾಜಿ ವಿತ್ತ ಸಚಿವ ಚಿದಂಬರಂ ಹಳ್ಳಿಗಳಲ್ಲಿ ವಿದ್ಯುತ್ ಸೌಕರ್ಯವೇ ಇರುವುದಿಲ್ಲ ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನೆ ಎತ್ತಿದ್ದರು. ಆದರೆ ಇಂದು ಅದು ಸಾಧ್ಯವಾಗಿದೆ. ಅಷ್ಟೇ ಅಲ್ಲ, ಇಡೀ ಜಗತ್ತೇ ಬೆರಗಾಗಿ ಭಾರತದತ್ತ ನೋಡುತ್ತಿದೆ, ಇಂದು ಜನರಿಗೆ ಆಧಾರ ಕಾಂಗ್ರೆಸ್‌ನ ಕೂಸು ಎಂಬುದು ಮರೆತು ಹೋಗಿದೆ, ಕಾರಣ ವಿರೋಧ ಮಾಡಲೆಂದೇ ವಿರೋಧ ಮಾಡಿದರೆ ಅದು ಹೀಗೆ ಆಗುವುದು.
ಫಿನ್‌ಟೆಕ್ ಹಬ್ಬದ ಕೊನೆಯ ದಿನ ಪ್ರಧಾನ ಮಂತ್ರಿಗಳು ಮಾತನಾಡಿ ನೆರೆದಿದ್ದ ಟೆಕ್ಕಿಗಳ ಕೆಲಸವನ್ನು ಕೊಂಡಾಡಿ ಟೆಕ್ಕಿಗಳಲ್ಲಿ ಇನ್ನಷ್ಟು ಉತ್ಸಾಹ ತುಂಬಿದ್ದು ವಿಶೇಷವಾಗಿತ್ತು.

Next Article