ಮುಖ ನೋಡಿ ಮಣೆ
ಸಾಮಾಜಿಕ ಅನಿಷ್ಟಗಳ ನಿವಾರಣೆ ಶಾಸನಗಳ ಮೂಲಕ ಅಸಾಧ್ಯ; ಆದರೆ, ತಿಳಿವಳಿಕೆಯ ಜೊತೆ ಒಂದು ರೀತಿಯ ಸಾಮಾಜಿಕ ನೀತಿಸಂಹಿತೆಯಿಂದ ಇಂತಹ ಅನಿಷ್ಟಗಳ ನಿವಾರಣೆಗೆ ಮುಂದಾಗಿ ಅಂತಿಮವಾಗಿ ಶಾಸನಪರ್ವಕ್ಕೆ ಹೆಜ್ಜೆ ಇಟ್ಟರಷ್ಟೇ ಅದರಿಂದ ಪರಿಣಾಮಕಾರಿ ಯಶಸ್ಸು ಸಾಧ್ಯ. ಹಾಗಿಲ್ಲದೆ ಕೇವಲ ಶಾಸನಗಳ ಮೂಲಕವೇ ಇದರ ನಿವಾರಣೆ ಯತ್ನವನ್ನು ಕೈಗೊಂಡರೆ `ಹೇಳುವುದೊಂದು ಮಾಡುವುದು ಇನ್ನೊಂದು' ಎಂಬಂತಾಗುತ್ತದೆ ಎನ್ನಲು ಬೆಂಗಳೂರಿನ ರಾಜಾಜಿನಗರ ಮೆಟ್ರೋ ರೈಲಿನ ನಿಲ್ದಾಣದಲ್ಲಿ ಅಮಾಯಕ ರೈತನಿಗೆ ಪ್ರವೇಶ ನೀಡಲು ನಿರಾಕರಿಸಿದ ಸಿಬ್ಬಂದಿಯ ವರ್ತನೆಯೇ ಸಾಕ್ಷಿ. ಯಾವುದೋ ಹಳ್ಳಿಯಿಂದ ಸಾಮಗ್ರಿಗಳ ಮೂಟೆಯನ್ನು ತಲೆಯ ಮೇಲೆ ಇಟ್ಟುಕೊಂಡು ನಿಲ್ದಾಣದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಸಿಬ್ಬಂದಿ ವರ್ಗಕ್ಕೆ ಅನಗತ್ಯ ಗಾಬರಿ ಉಂಟಾಗಿ ಪ್ರವೇಶ ನಿರಾಕರಿಸಿದ್ದಂತೂ ನಾಗರಿಕತೆಯ ಸಮಾಜಕ್ಕೆ ಒಂದು ದೊಡ್ಡ ಅಪಚಾರ.
ಮೆಟ್ರೋ ರೈಲಿನ ಸಂಚಾರಕ್ಕೆ ವಸ್ತ್ರಸಂಹಿತೆ ಇಲ್ಲ. ನಿಲ್ದಾಣದ ಒಳಗೆ ಹೋಗಲು ಯಾರ ಅಭ್ಯಂತರವೂ ಇಲ್ಲ. ಇಂತಹವರಿಗೆ ಮಾತ್ರ ಪವೇಶ ಎಂಬ ನೀತಿಯೂ ಇಲ್ಲ. ಇಂತಹ ಎಲ್ಲ ಇಲ್ಲಗಳನ್ನು ನಿರಾಕರಿಸುವ ರೀತಿಯಲ್ಲಿ ಬೆವರು ಹರಿಸುತ್ತಾ ಕೊಳಕು ಬಟ್ಟೆ ಧರಿಸಿದ ಈ ರೈತನಿಗೆ ಪ್ರವೇಶ ಯಾವ ಆಧಾರದ ಮೇಲೆ ನಿರಾಕರಿಸಲಾಯಿತು ಎಂಬುದನ್ನು ಹೇಳಲು ಮೆಟ್ರೋ ಆಡಳಿತ ವರ್ಗದ ಬಳಿ ಯಾವುದೇ ಸಾಧಾರವಿಲ್ಲ. ಮೆಟ್ರೋ ರೈಲಿನ ಸಂಚಾರಕ್ಕೆ ಹಣ ಕೊಟ್ಟು ಟಿಕೆಟ್ ಖರೀದಿಸಬೇಕು. ಅದನ್ನು ಬಿಟ್ಟರೆ ಮಿತಿಮೀರಿದ ಮದ್ಯಪಾನ ಹಾಗೂ ಸಾಮಗ್ರಿ ಸರಂಜಾಮುಗಳ ಸಾಗಣೆಗೆ ಅವಕಾಶವಿಲ್ಲ ಎಂಬುದು ಒಪ್ಪಿಕೊಳ್ಳುವ ಮಾತೆ. ರೈತನ ಬಳಿಯ ಸಾಮಗ್ರಿಗಳ ಮೂಟೆಯನ್ನು ಪರಿಶೀಲಿಸಿ ಅದರಲ್ಲಿ ಏನಾದರೂ ಘಾತುಕಕ್ಕೆ ಕಾರಣವಾಗುವ ಅಂಶಗಳಿದ್ದರೆ ಪ್ರವೇಶವನ್ನೇ ನಿರಾಕರಿಸುವುದು ಕೂಡಾ ಸಮರ್ಥನೀಯವೇ. ಆದರೆ, ಇದ್ಯಾವುದೂ ಇಲ್ಲದೆ ಕೇವಲ ಹಳ್ಳಿಗಾಡಿನ ರೈತ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದಂತೂ ದೊಡ್ಡ ಅಪರಾಧವೇ ಸರಿ.
ಹಾಗೆ ನೋಡಿದರೆ, ಮೆಟ್ರೋ ಸಿಬ್ಬಂದಿಯ ವರ್ತನೆ ಕಾನೂನಿನ ಪ್ರಕಾರ ಸರಿ ಇದ್ದರೂ ಇರಬಹುದು. ಆದರೆ, ನಾಗರಿಕ ಸಮಾಜದಲ್ಲಿ ಇಂತಹ ವರ್ತನೆಯನ್ನು ಸಹಿಸಿಕೊಳ್ಳಬೇಕೆ ಎಂಬುದು ಮೂಲಭೂತ ಪ್ರಶ್ನೆ. ಸಾಮಾನ್ಯವಾಗಿ ಸಾರ್ವಜನಿಕರ ಪ್ರವೇಶವಿರುವ ಸ್ಥಳಗಳಲ್ಲಿ ಇಂತಹವರಿಗೇ ಮಾತ್ರ ಪ್ರವೇಶ ಎಂಬ ಷರತ್ತು ಇರುವುದಿಲ್ಲ. ಹಿಂದಿನ ಕಾಲದಲ್ಲಿ ತೊನ್ನು ಹಾಗೂ ಕುಷ್ಠ ರೋಗಿಗಳಿಗೆ ಪ್ರವೇಶವಿಲ್ಲ ಎಂಬ ಫಲಕಗಳು ಹೋಟೆಲ್‌ಗಳ ಮುಂದೆ ಇರುತ್ತಿದ್ದವು. ಆದರೆ, ಈಗ ಕಾಲ ಬದಲಾದಂತೆ ಫಲಕಗಳೂ ಮಾಯವಾಗಿವೆ. ಫಲಕಗಳು ಮಾಯವಾಗಿದ್ದರೂ ಅದರ ಹಿಂದಿರುವ ಬುದ್ಧಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಮೆಟ್ರೋ ಸಿಬ್ಬಂದಿಯ ವರ್ತನೆಯೇ ಹೆಗ್ಗುರುತು. ಮೆಟ್ರೋ ಸಿಬ್ಬಂದಿಗೂ ಕೂಡಾ ಸಾಮಾಜಿಕವಾಗಿ ಚಾಲ್ತಿಯಲ್ಲಿರುವ ಮುಖ ನೋಡಿ ಮಣೆ ಹಾಕುವ ಜಾಯಮಾನವೇ ಇಂತಹ ಪ್ರವೇಶ ನಿರಾಕರಣೆಗೆ ಕಾರಣವಾಗಿರಬೇಕು. ಗುಣ ನೋಡಿ ಗೌರವಿಸುವುದು ಬೇರೆ. ಎಲ್ಲರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ಬಂದವರಿಗೆಲ್ಲ ಸ್ವಾಗತ ಕೋರುವುದು ಕೂಡಾ ನಾಗರಿಕ ವರ್ತನೆಯ ಔದಾರ್ಯವೇ ಕಾರಣ.
ಬೆಂಗಳೂರು ನಗರದಲ್ಲಿ ಸಂಚಾರ ಸಮಸ್ಯೆಯ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡಿರುವ ಮೆಟ್ರೋ ರೈಲ್ವೆಯ ಸಾಧನೆಯನ್ನು ಹೊಗಳುವುದು ಬೇರೆ ಆದರೆ, ಇಂತಹ ಜನವಿರೋಧಿ ಹಾಗೂ ಜೀವವಿರೋಧಿ ವರ್ತನೆಯನ್ನು ಖಂಡಿಸುವುದು ಬೇರೆ. ಇಂತಹ ಅಮಾಯಕರನ್ನು ನಿಲ್ದಾಣದ ದ್ವಾರಗಳ ಹೊರಗೇ ನಿಲ್ಲಿಸುವ ಸಿಬ್ಬಂದಿ ವರ್ಗ ಭೂಗತ ಲೋಕದ ಪಾತಕಿಗಳು ಹಾಗೂ ಜನಪೀಡಕರು ಬಂದಾಗ ಯಾವುದೇ ಪರಿಶೀಲನೆ ಇಲ್ಲದೆ ಒಳಗೆ ಬಿಟ್ಟು ಎಂತಹ ಅನಾಹುತಗಳಿಗೆ ಕಾರಣವಾಗಿದ್ದಾರೆ ಎಂಬುದನ್ನು ಕಳೆದ ಒಂದೆರಡು ವರ್ಷಗಳ ಇತಿಹಾಸ ಎತ್ತಿತೋರಿಸುತ್ತದೆ. ಎಲ್ಲವೂ ನೆಟ್ಟಗಿದ್ದರೆ ಮಹಿಳೆಯರಿಗೆ ಮೆಟ್ರೋ ರೈಲಿನ ಸಂಚಾರದಲ್ಲಿ ಸುರಕ್ಷತೆ ಇರಬೇಕಾಗಿತ್ತು. ಆದರೆ, ಅದಕ್ಕೆ ತದ್ವಿರುದ್ಧವಾದ ಪ್ರಸಂಗಗಳು ಎಷ್ಟು ಬಾರಿ ನಡೆದಿವೆ ಎಂಬುದನ್ನ ಒಮ್ಮೆ ಕಣ್ಣಾಡಿಸಿದರೆ ಪರಿಸ್ಥಿತಿ ಏನೆಂಬುದು ಗೊತ್ತಾಗುತ್ತದೆ.
ರೈತನಿಗೆ ಪ್ರವೇಶ ನಿರಾಕರಿಸಿರುವ ಪ್ರಸಂಗ ಮೆಟ್ರೋ ಆಡಳಿತಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು. ಹಾಗೆಂದಾಕ್ಷಣ ಬಂದವರಿಗೆಲ್ಲಾ ಮುಕ್ತಪ್ರವೇಶ ಇರಬೇಕು ಎಂದಲ್ಲ. ಪ್ರತಿಯೊಂದು ಪ್ರವೇಶಕ್ಕೂ ಕೂಡಾ ಷರತ್ತುಗಳು ಅನ್ವಯ. ಆದರೆ, ಗಿಲೀಟು ಸಂಸ್ಕೃತಿಯವರಿಗೆ ಮಣೆಹಾಕಿ ಅಮಾಯಕರಿಗೆ ಹಾಕಿದ ಮಣೆಯನ್ನು ಎಳೆದುಹಾಕುವ ನೀತಿ ಇರಬಾರದು ಎಂಬ ಎಚ್ಚರವನ್ನು ಸಿಬ್ಬಂದಿ ವರ್ಗಕ್ಕೆ ನೀಡಿದರೆ ಮೆಟ್ರೋ ರೈಲ್ವೆ ಆಡಳಿತ ಮಂಡಳಿ ನಾಗರಿಕರಿಗೆ ಸಲ್ಲಿಸುವ ಸೇವೆಗೂ ಇನ್ನಷ್ಟು-ಮತ್ತಷ್ಟು ಗೌರವ ಬರುತ್ತದೆ.