ಮುಚ್ಚುವ ಭೀತಿಯಲ್ಲಿ ಸರ್ಕಾರಿ ಶಾಲೆಗಳು
ರವಿ ನಾಯಕ್
ಬೆಂಗಳೂರು: ಖಾಸಗಿ ಶಾಲೆಗಳ ಅಬ್ಬರದಿಂದಾಗಿ ರಾಜ್ಯದ ಸುಮಾರು ೪೬ ಸಾವಿರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪೈಕಿ ಸುಮಾರು ೧೮ ಸಾವಿರ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ೩೦ ದಾಟದೆ ಇರುವುದು ಆತಂಕ ಮೂಡಿಸಿದೆ. ಅಲ್ಲದೇ ೪,೩೦೦ ಕ್ಕೂ ಹೆಚ್ಚು ಶಾಲೆಗಳಲ್ಲಿ ೧೦ಕ್ಕಿಂತ ಕಡಿಮೆ ಮಕ್ಕಳಿರುವುದು ಅಂಕಿ ಅಂಶಗಳಿಂದ ಕಂಡು ಬಂದಿದೆ.
೨೦೨೪-೨೫ನೇ ಸಾಲಿನಲ್ಲಿ ನೂರಾರು ಶೂನ್ಯ ದಾಖಲಾತಿಯ ಶಾಲೆಗಳು ಸೇರಿಕೊಂಡಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವರದಿಯಂತೆ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳು ಇಲ್ಲದೆ ಇರುವ ಒಂದೂ ಜಿಲ್ಲೆ ರಾಜ್ಯದಲ್ಲಿ ಇಲ್ಲದಂತಾಗಿದೆ. ಸುಮಾರು ೧೦ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಸಮೀಪದ ಶಾಲೆಗಳಲ್ಲಿ ವಿಲೀನ ಮಾಡುವ ಮೂಲಕ ಕೈಗೊಂಡ ಕ್ರಮಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ನಾಲ್ಕು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಅತಿ ಕಡಿಮೆ ಮಕ್ಕಳ ಸಂಖ್ಯೆ ಹೊಂದಿದ್ದಾರೆ.
ಮಕ್ಕಳ ಸಂಖ್ಯೆ ಕ್ರಮೇಣ ಕುಂಠಿತ: ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಿಗೆ ಹತ್ತು ಹಲವು ಸೌಲಭ್ಯ, ಅನುದಾನ ನೀಡುತ್ತಿದ್ದರು ಮಕ್ಕಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ನಿರ್ಲಕ್ಷ್ಯ ತೋರುತ್ತಿವೆ ಎಂಬುದು ಪೋಷಕರ ಆರೋಪವಾಗಿದೆ.
ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ನಗರ ಪ್ರದೇಶದಲ್ಲಿರುವ ಖಾಸಗಿ ಶಾಲೆಗಳತ್ತ ಪೋಷಕರು ವಿದ್ಯಾರ್ಥಿಗಳನ್ನು ಪ್ರವೇಶ ಕೊಡಿಸುತ್ತಿದ್ದಾರೆ. ಇದರಿಂದ ಮಕ್ಕಳ ಸಂಖ್ಯೆ ಸರ್ಕಾರಿ ಶಾಲೆಗಳಲ್ಲಿ ಕಡಿಮೆಯಾಗುತ್ತಿದೆ ಎನ್ನಲಾಗಿದೆ.
ಎಲ್ಲಿ? ಎಷ್ಟು ಸಂಖ್ಯೆ?: ಕಳೆದ ೨೦೨೨ನೇ ಸಾಲಿನಲ್ಲಿ ಶೂನ್ಯದಿಂದ ೧೦ ಮಕ್ಕಳಿರುವ ಶಾಲೆಗಳ ಸಂಖ್ಯೆ ೧,೮೧೦ ಇತ್ತು. ೨೦೨೩ರಲ್ಲಿ ಅದು ೩,೬೪೬ ಏರಿಕೆಯಾಗಿದೆ. ಈ ಸಂಖ್ಯೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ೪,೩೯೮ಕ್ಕೆ ಏರಿಕೆಯಾಗಿದೆ. ಅಂದರೆ ಒಂದೇ ವರ್ಷದಲ್ಲಿ ೭೦೦ಕ್ಕೂ ಹೆಚ್ಚು ಶಾಲೆಗಳಲ್ಲಿ ದಾಖಲಾತಿ ತೀವ್ರ ಕುಸಿತವಾಗಿದೆ. ಅದೇ ರೀತಿ ೧೧ ರಿಂದ ೨೦ ಮಕ್ಕಳಿರುವ ಶಾಲೆಗಳ ಸಂಖ್ಯೆ ಈ ಸಾಲಿನಲ್ಲಿ ೭,೮೧೦ಕ್ಕೆ ಏರಿಕೆಯಾಗಿದ್ದರೆ, ೧೧ ರಿಂದ ೩೦ ಮಕ್ಕಳಿರುವ ಶಾಲೆಗಳ ಸಂಖ್ಯೆ ೫, ೩೬೨ಕ್ಕೆ ಹೆಚ್ಚಾಗಿದೆ. ಇವೆಲ್ಲವೂ ಸರ್ಕಾರಿ ಪ್ರಾಥಮಿಕ ಶಾಲೆಗಳಾಗಿವೆ. ಈ ಪೈಕಿ ಹಾಸನದಲ್ಲಿ ಅತಿ ಹೆಚ್ಚು ೪೯೦ ಶಾಲೆಗಳಲ್ಲಿ ೧೦ಕ್ಕಿಂತ ಕಡಿಮೆ, ೬೯೬ ಶಾಲೆಗಳಲ್ಲಿ ೨೦ಕ್ಕಿಂತ ಕಡಿಮೆ ಮತ್ತು ೩೪೭ ಶಾಲೆಗಳಲ್ಲಿ ೩೦ಕ್ಕಿಂತ ಕಡಿಮೆ ದಾಖಲಾತಿ ಹೊಂದಿವೆ. ನಂತರದ ಸ್ಥಾನ ತುಮಕೂರಿನಲ್ಲಿ ಕಡಿಮೆ ದಾಖಲಾತಿ ಶಾಲೆಗಳ ಸಂಖ್ಯೆ ೧೩,೦೦ರಷ್ಟಿದೆ. ಸಮಾಧಾನಕರ ಸಂಗತಿ ಎಂದರೆ ಪ್ರೌಢ ಶಾಲೆಗಳ ಪೈಕಿ ಕಡಿಮೆ ದಾಖಲಾತಿ ಶಾಲೆಗಳ ಸಂಖ್ಯೆ ಬೆರಳೆಣಿಕೆಯಷ್ಟಿವೆ.
ಕಾರಣವೇನು
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಪೋಷಕರು ವಲಸೆ ಹೋಗುತ್ತಿದ್ದಾರೆ. ಇದರಿಂದ ಮಕ್ಕಳ ದಾಖಲಾಗಿ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತಿದೆ. ಸರ್ಕಾರ ಉಚಿತ ಪ್ರವೇಶ, ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಶೂ, ಸಾಕ್ಸ್, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಪ್ರತೀ ವರ್ಷ ೩೫ ರಿಂದ ೪೦ ಸಾವಿರ ಅತಿಥಿ ಶಿಕ್ಷಕರ ನೇಮಕ ಸೇರಿದಂತೆ ಹತ್ತಾರು ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರೂ ದಾಖಲಾತಿ ಪ್ರಮಾಣ ಮಾತ್ರ ಸುಧಾರಿಸುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಲಕ್ಷಾಂತರ ಪೋಷಕರು ಖಾಸಗಿ ಶಾಲೆಗಳಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ವರ್ಗಾವಣೆ ಪಡೆದಿದ್ದರಿಂದ ೨೦೨೦-೨೧ ಹಾಗೂ ೨೦೨೧-೨೨ನೇ ಕಂಡಿತ್ತು. ನಂತರ ಮತ್ತೆ ಕುಸಿಯಲಾರಂಭಿಸಿದೆ. ಅದರಲ್ಲೂ ದಾಖಲಾತಿ ಬೆರಳೆಣಿಕೆಯ ಮಟ್ಟಕ್ಕೆ ಕುಸಿಯುತ್ತಿರುವ ಶಾಲೆಗಳು ಹೆಚ್ಚುತ್ತಿದ್ದು ಅವುಗಳು ಬರುವ ದಿನಗಳಲ್ಲಿ ವಿಲೀನದ ಹೆಸರಲ್ಲಿ ಮುಚ್ಚಿಹೋಗುವ ಆತಂಕ ಎದುರಾಗಿದೆ.