ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೆ. ೨೫ರ ಬುಧವಾರಕ್ಕೆ ಮುಂದೂಡಿದೆ.
ರಾಮನಗರದ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಆತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಮುನಿರತ್ನ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಇಂದು ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ವಾದ ಮಂಡಿಸಿದ ಎಸ್‌ಐಟಿ ವಿಶೇಷ ಅಭಿಯೋಜಕ (ಎಸ್‌ಪಿಪಿ) ಎಸ್.ಪಿ. ಪ್ರದೀಪ್, ದೂರುದಾರ ಮಹಿಳೆಗೆ ಜಾಮೀನು ಅರ್ಜಿ ಸಿಕ್ಕಿಲ್ಲ. ಅಲ್ಲದೆ, ನನಗೂ ಇಂದು ನೋಟಿಸ್ ಪ್ರತಿ ದೊರೆತಿದೆ. ಹೀಗಾಗಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಈ ಮನವಿ ಮಾನ್ಯ ಮಾಡಿದ ಕೋರ್ಟ್, ಸೆಪ್ಟೆಂಬರ್ ೨೫ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.
ಬೆದರಿಕೆ ಆರೋಪ: ಶಾಸಕ ಮುನಿರತ್ನ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ಸಂತ್ರಸ್ತೆ ಹಾಗೂ ಅವರ ಕುಟುಂಬದವರಿಗೆ ಶಾಸಕರ ಕಡೆಯವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಂತ್ರಸ್ತೆ ಕಡೆಯವರು ಯಶವಂತಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.