For the best experience, open
https://m.samyuktakarnataka.in
on your mobile browser.

ಮುಮ್ತಾಝ್ ಅಲಿ ಆತ್ಮಹತ್ಯೆ ಪ್ರಕರಣ: ಮೂವರು ವಶಕ್ಕೆ

05:21 PM Oct 08, 2024 IST | Samyukta Karnataka
ಮುಮ್ತಾಝ್ ಅಲಿ ಆತ್ಮಹತ್ಯೆ ಪ್ರಕರಣ  ಮೂವರು ವಶಕ್ಕೆ

ಮಂಗಳೂರು: ಸಾಮಾಜಿಕ ಮುಂದಾಳು, ಉದ್ಯಮಿ, ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಝ್ ಅಲಿ ಸಾವು ಕುರಿತಂತೆ ತನಿಖೆ ಚುರುಕುಗೊಳಿಸಿರುವ ಮಂಗಳೂರು ಉತ್ತರ ಉಪವಿಭಾಗದ ಪೊಲೀಸ್ ಉಪ ಆಯುಕ್ತ ಮನೋಜ್ ಕುಮಾರ್ ನೇತೃತ್ವದ ಪೊಲೀಸರ ತಂಡ ಪ್ರಕರಣದ ಎ೧ ಆರೋಪಿ ಆಯೇಷಾ ರಹಮತ್ ಸೇರಿ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.
ಮುಮ್ತಾಝ್ ಅಲಿ ಸಾವು ಪ್ರಕರಣದಕ್ಕೆ ಸಂಬಂಧಿಸಿ ಎ೧ ಆರೋಪಿ ಸುರತ್ಕಲ್ ಕೃಷ್ಣಾಪುರ ೭ನೇ ಬ್ಲಾಕ್ ನಿವಾಸಿ ಆಯೇಷಾ ರೆಹಮತ್(೪೧) ಆಕೆಯ ಪತಿ ಎ೫ ಆರೋಪಿ ಶುಐಬ್ ಹಾಗೂ ಆರೋಪಿ ಸತ್ತಾರ್ ಎಂಬಾತನ ಕಾರು ಚಾಲಕ ಎ೬ ಆರೋಪಿ ಸಿರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.
ಆಯೇಷಾ ರೆಹಮತ್ ಮತ್ತು ಆಕೆಯ ಪತಿ ಶುಐಬ್‌ನನ್ನು ಸೋಮವಾರ ಸಂಜೆ ಕೇರಳದಲ್ಲಿ ವಶಕ್ಕೆ ಪಡೆದಿದ್ದು, ಸಿರಾಜ್‌ನನ್ನು ಕೃಷ್ಣಾಪುರದ ಆತನ ಮನೆಯಿಂದಲೇ ಸಿಸಿಬಿ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಪ್ರಕರಣದ ಮಾಸ್ಟರ್ ಮೈಂಡ್ ಸತ್ತಾರ್‌ಗಾಗಿ ತೀವ್ರ ಶೋಧ ನಡೆದಿದೆ.
ಘಟನೆಗೆ ಸಂಬಂಧಿಸಿ ಮಮ್ತಾಝ್ ಅಲಿ ಅವರ ಸಹೋದರ ಹೈದರ್ ಅಲಿ ಎಂಬವರು ರೆಹಮತ್, ಅಬ್ದುಲ್ ಸತ್ತಾರ್, ಕಲಂದರ್ ಶಾಫಿ, ಮುಸ್ತಫಾ, ಶುಐಬ್, ಸಿರಾಜ್ ಎಂಬವರು ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು. ಅವರ ದೂರು ಆಧರಿಸಿ ಐಪಿಸಿ ೩೦೮(೨), ೩೦೮(೫), ೩೫೨, ೩೫೧(೨) ೧೯೦ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಪ್ರಕರಣದಲ್ಲಿನ ಪ್ರಮುಖ ಆರೋಪಿ ಸಹಿತ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
ಘಟನೆ ಕುರಿತಂತೆ ಆರು ಮಂದಿಯ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags :