For the best experience, open
https://m.samyuktakarnataka.in
on your mobile browser.

ಮುರಿದ ಸ್ನೇಹ: ಇರಾನ್-ಇಸ್ರೇಲ್ ಕದನದ ಇತಿಹಾಸ

03:30 AM Oct 05, 2024 IST | Samyukta Karnataka
ಮುರಿದ ಸ್ನೇಹ  ಇರಾನ್ ಇಸ್ರೇಲ್ ಕದನದ ಇತಿಹಾಸ

ಇರಾನ್ ಇಸ್ರೇಲ್ ಮೇಲೆ ಅಕ್ಟೋಬರ್ ೧ರ ಮಂಗಳವಾರದಂದು ಅಪಾರ ಸಂಖ್ಯೆಯ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿತು. ಇದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುವುದಾಗಿ ಇಸ್ರೇಲ್ ಹೇಳಿದ್ದು, ಮಧ್ಯ ಪೂರ್ವ ನಿಧಾನವಾಗಿ ಒಂದು ಪ್ರಮುಖ ಪ್ರಾದೇಶಿಕ ಯುದ್ಧಕ್ಕೆ ಹತ್ತಿರಾಗುತ್ತಿದೆ. ಇರಾನ್ ಇಸ್ರೇಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ, ಅಂದಾಜು ೨೦೦ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು, ಇದು ಇಸ್ರೇಲ್ ಮೇಲೆ ಈ ರೀತಿಯ ಅತಿದೊಡ್ಡ ದಾಳಿಯಾಗಿದೆ. ದಾಳಿಯ ಪರಿಣಾಮವಾಗಿ ಇಸ್ರೇಲಿನಾದ್ಯಂತ ಎಚ್ಚರಿಕೆಯ ಸೈರನ್‌ಗಳು ಮೊಳಗಿ, ದೇಶದ ಆಧುನಿಕ ರಕ್ಷಣಾ ವ್ಯವಸ್ಥೆಗಳನ್ನು ಚಾಲ್ತಿಗೊಳಿಸಿದವು.
ಪ್ರಸ್ತುತ ಕ್ಷಿಪಣಿ ದಾಳಿ ಇನ್ನೊಮ್ಮೆ ನಮ್ಮೊಡನೆ ನೇರ ತಂಟೆಗೆ ಬರದಂತೆ ಇಸ್ರೇಲಿಗೆ ನೀಡಿರುವ ಮುನ್ನೆಚ್ಚರಿಕೆ ಎಂದು ಇರಾನ್ ನಾಯಕರು ಹೇಳಿದ್ದಾರೆ. ಒಂದು ವೇಳೆ ಇಸ್ರೇಲ್ ಏನಾದರೂ ಇದಕ್ಕೆ ಪ್ರತೀಕಾರದ ದಾಳಿ ನಡೆಸಿದರೆ, ಇನ್ನಷ್ಟು ಬಲವಾದ, ಆಘಾತಕಾರಿಯಾದ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದೆ. ಇರಾನ್ ಬೆಂಬಲ ಹೊಂದಿರುವ, ಲೆಬನಾನ್‌ನ ಹೆಜ್ಬೊಲ್ಲಾ ಸಂಘಟನೆಯ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಕಾರ್ಯಾಚರಣೆ ಆರಂಭಿಸಿದ ೨೪ ಗಂಟೆಗಳ ಬಳಿಕ ಇರಾನ್ ಆಕ್ರಮಣ ನಡೆಸಿದೆ. ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ದಾಳಿ ನಡೆಸಿ, ಹೆಜ್ಬೊಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ ನಡೆಸಿದ ಕೆಲ ದಿನಗಳ ಬಳಿಕ ಇರಾನ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ.
ಇಷ್ಟು ದಿನ ಇಸ್ರೇಲ್ ಇರಾನಿನ ಪ್ರಾಕ್ಸಿಗಳೊಡನೆ ಸೆಣಸುತ್ತಿತ್ತು. ಆದರೆ, ಅಕ್ಟೋಬರ್ ೧ರ ದಾಳಿ ಯುದ್ಧವನ್ನು ನೇರವಾಗಿ ಇಸ್ರೇಲ್ ಮತ್ತು ಇರಾನ್ ನಡುವೆ ಆಗುವಂತೆ ಮಾಡಿದೆ. ಇಸ್ರೇಲಿ ಮಿಲಿಟರಿ ಮೂಲಗಳ ಪ್ರಕಾರ, ಕೆಲವು ಕ್ಷಿಪಣಿಗಳು ಇಸ್ರೇಲಿ ಮಿಲಿಟರಿ ನೆಲೆಗಳಿಗೆ ಅಪ್ಪಳಿಸಿದ್ದರೂ, ಹೇಳಿಕೊಳ್ಳುವಂತಹ ಹಾನಿಯೇನೂ ಸಂಭವಿಸಿಲ್ಲ.
ಇದು ೨೦೨೪ರಲ್ಲಿ ಇಸ್ರೇಲ್ ಮೇಲೆ ಇರಾನ್ ನಡೆಸಿದ ಎರಡನೇ ದಾಳಿಯಾಗಿದ್ದರೂ, ಮಂಗಳವಾರದ ದಾಳಿಯ ಪ್ರಮಾಣ ಅತ್ಯಂತ ಹೆಚ್ಚಿನದಾಗಿದೆ. ಏಪ್ರಿಲ್ ೧೩ರಂದು, ಇರಾನ್ ಇಸ್ರೇಲ್ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ಅದು ಇಸ್ರೇಲ್ ಮೇಲೆ ಇರಾನಿನ ಪ್ರಥಮ ದಾಳಿಯಾಗಿತ್ತು. ಇದು ಸಿರಿಯಾದಲ್ಲಿರುವ ಇರಾನ್ ದೂತಾವಾಸದ ಮೇಲೆ ಇಸ್ರೇಲ್ ನಡೆಸಿದೆ ಎನ್ನಲಾದ ದಾಳಿಗೆ ಪ್ರತೀಕಾರವಾಗಿತ್ತು. ಆ ದಾಳಿಗೆ ಮುನ್ನ ಇರಾನ್ ೭೨ ಗಂಟೆಗಳ ಮುನ್ನೆಚ್ಚರಿಕೆ ನೀಡಿತ್ತು. ಇದು ದೊಡ್ಡದಾದ ದಾಳಿ ನಡೆಸುತ್ತೇನೆ ಎಂದು ಕೊಚ್ಚಿಕೊಂಡರೂ, ಸಾವುನೋವುಗಳ ಸಂಖ್ಯೆ ಕಡಿಮೆಯಾಗಿಸುವ ಪ್ರಯತ್ನ ಎನ್ನಲಾಗಿತ್ತು. ಬಹುತೇಕ ೩೦೦ ಕ್ಷಿಪಣಿ, ಡ್ರೋನ್‌ಗಳನ್ನು ಇಸ್ರೇಲಿನ ರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸಿದ್ದವು.
ಇರಾನ್ ಮತ್ತು ಇಸ್ರೇಲ್‌ಗಳು ಸುದೀರ್ಘ ಕಾಲದಿಂದ ಶತ್ರುಗಳಾಗಿದ್ದು, ಇರಾನ್ ಇಸ್ರೇಲನ್ನು ನಾಶಪಡಿಸಿ, ಅದನ್ನು ಭೂಪಟದಲ್ಲೇ ಇಲ್ಲವಾಗಿಸುತ್ತೇನೆ ಎಂದು ಬೆದರಿಕೆ ಒಡ್ಡಿತ್ತು. ಇಸ್ರೇಲ್ ಸಹ ಇರಾನನ್ನು ತನ್ನ ಅತಿದೊಡ್ಡ ಶತ್ರು ಎಂದು ಪರಿಗಣಿಸಿದೆ.
ನೇರ ಯುದ್ಧದ ತೀವ್ರತೆ
ಮಧ್ಯ ಪೂರ್ವದಲ್ಲಿ ತನ್ನ ಗುರಿಗಳನ್ನು ಸಾಧಿಸಲು, ಇಸ್ರೇಲ್ ಮತ್ತು ಅದರ ಮಿತ್ರ ರಾಷ್ಟ್ರವಾದ ಅಮೆರಿಕಾ ವಿರುದ್ಧ ಸೆಣಸಲು ಇರಾನ್ ಹೆಜ್ಬೊಲ್ಲಾ, ಹಮಾಸ್, ಹೌತಿ, ಹಾಗೂ ಇರಾಕ್ ಮತ್ತು ಸಿರಿಯಾಗಳ ಷಿಯಾ ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲ ಒದಗಿಸುತ್ತಾ ಬಂದಿದೆ. ಇಂತಹ ಸಂಘಟನೆಗಳ ಪೈಕಿ ಹೆಜ್ಬೊಲ್ಲಾ ಅತ್ಯಂತ ದೊಡ್ಡದು, ಶಕ್ತಿಶಾಲಿಯಾಗಿದ್ದು, ಇರಾನ್‌ಗೆ ಅತ್ಯಂತ ಆಪ್ತವಾಗಿದೆ. ಈ ಸಶಸ್ತ್ರ ಸಂಘಟನೆಗಳು ಜೊತೆಯಾಗಿ 'ಆಯಕ್ಸಿಸ್ ಆಫ್ ರೆಸಿಸ್ಟೆನ್ಸ್' ಎಂಬ ಹೆಸರು ಹೊಂದಿದ್ದು, ಇರಾನಿನ ಸುದೀರ್ಘ ಕಾರ್ಯತಂತ್ರ ಮತ್ತು ಇಸ್ರೇಲ್ ವಿರುದ್ಧದ ಪರೋಕ್ಷ ಸಮರದಲ್ಲಿ ಮುಖ್ಯ ಪಾತ್ರ ವಹಿಸಿವೆ.
ಈ ವರ್ಷ ಇಸ್ರೇಲ್ ಮೇಲೆ ಎರಡನೇ ಬಾರಿಗೆ ಇರಾನ್ ಆಕ್ರಮಣ ನಡೆಸಿದೆ. ಆ ಮೂಲಕ ತನ್ನ ಸಹಯೋಗಿಗಳನ್ನು ಅವಲಂಬಿಸುವ ಬದಲು, ತಾನೇ ನೇರವಾಗಿ ರಣರಂಗಕ್ಕೆ ಕಾಲಿಟ್ಟಿದೆ. ತನ್ನ ಕ್ಷಿಪಣಿ ದಾಳಿ ಇಸ್ರೇಲನ್ನು ತಡೆಗಟ್ಟಲು ಯಶಸ್ವಿಯಾದೀತು ಎಂದು ಇರಾನ್ ಆಶಿಸಿದ್ದರೂ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಥಿರವಾಗಿ ನಿಂತಿದ್ದಾರೆ. ಈ ಹಿಂದೆ ಜುಲೈ ೧೩ರಂದು ಸಾವಿಗೀಡಾದ ಹಮಾಸ್‌ನ ಮೊಹಮದ್ ದಾಯಿಫ್, ಹಾಗೂ ಹಸನ್ ನಸ್ರಲ್ಲಾ ಅವರಂತೆ ಟೆಹರಾನ್ ಮುಖ್ಯಸ್ಥನೂ ಒಂದು ದೊಡ್ಡ ತಪ್ಪು ಮಾಡಿದ್ದು, ಅದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಲಿದ್ದಾರೆ ಎಂದು ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಏಪ್ರಿಲ್ ದಾಳಿಗೆ ಹೋಲಿಸಿದರೆ, ಇಸ್ರೇಲ್ ಈ ಬಾರಿ ಇನ್ನಷ್ಟು ಆಕ್ರಮಣಕಾರಿಯಾಗಿ ಪ್ರತಿದಾಳಿ ನಡೆಸುವ ನಿರೀಕ್ಷೆಗಳಿವೆ. ಈ ವಾರದ ದಾಳಿಯ ಬಳಿಕ ಇರಾನ್ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಸಂದೇಶಗಳನ್ನು ರವಾನಿಸಿದ್ದು, ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರು ಇರಾನ್ ಕೇವಲ ಇಸ್ರೇಲಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಚಕಮಕಿಯನ್ನು ಇನ್ನಷ್ಟು ತೀವ್ರಗೊಳಿಸುವ ಉದ್ದೇಶ ಹೊಂದಿಲ್ಲ ಎಂದಿದ್ದಾರೆ. ಆದರೆ, ಇಸ್ರೇಲ್ ಎಷ್ಟರಮಟ್ಟಿಗೆ ಅಪಾಯ ಮೈಗೆಳೆದುಕೊಳ್ಳಬಲ್ಲದು ಎಂಬ ಕುರಿತು ಇರಾನ್ ತಪ್ಪಾಗಿ ಅಂದಾಜಿಸಿರುವಂತೆ ಕಾಣುತ್ತಿದೆ. ಏಕೆಂದರೆ, ಇಂತಹ ದಾಳಿಗಳ ಕುರಿತು ಇರಾನ್ ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ತೀವ್ರವಾಗಿ ಇಸ್ರೇಲ್ ಪ್ರತಿಕ್ರಿಯಿಸುತ್ತದೆ. ಅದು ಇಂತಹ ದಾಳಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಆದರೆ, ಇರಾನ್ ಇಸ್ರೇಲ್ ಸಂಬಂಧ ಹಿಂದೆಯೂ ಹೀಗಿರಲಿಲ್ಲ!
ಇರಾನ್ ಮತ್ತು ಇಸ್ರೇಲ್ ನಡುವೆ ಸ್ನೇಹವಿತ್ತೇ?
ಇರಾನಿನಲ್ಲಿ ೧೯೭೯ರಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಗೆ ಮುನ್ನ ಇರಾನ್ ಮತ್ತು ಇಸ್ರೇಲ್‌ಗಳು ಮಿತ್ರ ರಾಷ್ಟ್ರಗಳಾಗಿದ್ದವು. ೧೯೪೮ರಲ್ಲಿ, ಇಸ್ರೇಲ್ ಸ್ಥಾಪನೆಯಾದ ಬಳಿಕ, ಅದನ್ನು ಮೊದಲಿಗೆ ಗುರುತಿಸಿದ ರಾಷ್ಟ್ರಗಳಲ್ಲಿ ಇರಾನ್ ಸಹ ಒಂದಾಗಿತ್ತು. ಇಸ್ರೇಲ್ ಅರಬ್ ರಾಷ್ಟ್ರಗಳ ವಿರುದ್ಧ ಇರಾನನ್ನು ಒಂದು ಸಹಯೋಗಿಯಾಗಿ ಪರಿಗಣಿಸಿತ್ತು. ಇರಾನ್ ಸಹ ಅಮೆರಿಕಾ ಬೆಂಬಲಿತ ಇಸ್ರೇಲ್, ಮಧ್ಯ ಪೂರ್ವದ ಅರಬ್ ರಾಷ್ಟ್ರಗಳಲ್ಲಿ ಸಮತೋಲನ ತರಬಲ್ಲದು ಎಂದು ಭಾವಿಸಿತ್ತು.
ಆ ಸಮಯದಲ್ಲಿ ಇಸ್ರೇಲ್ ಇರಾನಿನ ಕೃಷಿ ತಜ್ಞರಿಗೆ ತರಬೇತಿ ನೀಡಿ, ಇರಾನಿನ ಮಿಲಿಟರಿಗೆ ತಾಂತ್ರಿಕ ಜ್ಞಾನ ಒದಗಿಸಿ, ಅವರಿಗೆ ತರಬೇತಿ ಒದಗಿಸಿತ್ತು. ಇಸ್ರೇಲಿನ ಬೆಳೆಯುತ್ತಿದ್ದ ಆರ್ಥಿಕತೆಗೆ ಇಂಧನದ ಅಗತ್ಯವಿದ್ದುದರಿಂದ, ಇರಾನಿನ ಅರಸ ಶಾ ಇಸ್ರೇಲಿಗೆ ತೈಲ ಪೂರೈಕೆ ಮಾಡುತ್ತಿದ್ದರು. ಅದರೊಡನೆ, ಇಸ್ರೇಲ್ ಹೊರಗಿನ ಅತಿದೊಡ್ಡ ಯಹೂದಿ ಸಮುದಾಯ ಇರಾನಿನಲ್ಲಿದ್ದು, ಇಂದಿಗೂ ಅಲ್ಲಿ ೨೦,೦೦೦ ಯಹೂದಿಗಳಿದ್ದಾರೆ.
ಸಂಬಂಧ ಹದಗೆಟ್ಟಿದ್ದು ಯಾವಾಗ?
ಇರಾನಿಯನ್ ಇಸ್ಲಾಮಿಕ್ ಕ್ರಾಂತಿಯ ಬಳಿಕ, ಅಯತೊಲ್ಲಾ ರುಹೊಲ್ಲಾ ಖೊಮೇನಿ ಮತ್ತು ಆತನ ಬೆಂಬಲಿಗರು ಇರಾನಿನ ಮೇಲೆ ನಿಯಂತ್ರಣ ಸಾಧಿಸಿದರು. ಆ ಬಳಿಕ, ಇರಾನ್ ಇಸ್ರೇಲ್ ಜೊತೆಗಿನ ಹಿಂದಿನ ಎಲ್ಲ ಒಪ್ಪಂದಗಳನ್ನು ರದ್ದುಗೊಳಿಸಿತು. ಇಸ್ರೇಲ್ ಪ್ಯಾಲೆಸ್ತೀನಿಯನ್ ನೆಲವನ್ನು ಅತಿಕ್ರಮಿಸಿದೆ ಎಂದು ಖೊಮೇನಿ ಬಲವಾಗಿ ಟೀಕಿಸತೊಡಗಿದ್ದರು. ಕಾಲ ಕಳೆದಂತೆ, ಇರಾನ್ ಇಸ್ರೇಲ್ ವಿರುದ್ಧ ಕಠಿಣವಾದ ಭಾಷೆಯನ್ನು ಬಳಸತೊಡಗಿತು. ಆ ಮೂಲಕ ಅರಬ್ ರಾಷ್ಟ್ರಗಳ, ಅಥವಾ ಅವುಗಳ ಜನರ ಬೆಂಬಲ ಗಳಿಸುವ ಪ್ರಯತ್ನ ನಡೆಸಿತು.
ಇರಾನಿಯನ್ ಸರ್ಕಾರ ಮಧ್ಯ ಪೂರ್ವದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಆಸಕ್ತಿ ಹೊಂದಿತ್ತು. ೧೯೮೨ರ ಲೆಬನಾನ್ ಆಂತರಿಕ ಯುದ್ಧದ ಸಂದರ್ಭದಲ್ಲಿ, ಇಸ್ರೇಲ್ ಲೆಬನಾನ್‌ಗೆ ಸೈನಿಕರನ್ನು ಕಳುಹಿಸಿತ್ತು. ಆಗ ಖೊಮೇನಿ ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಪಡೆಯನ್ನು ಬೈರುತ್‌ಗೆ ಕಳುಹಿಸಿ, ಸ್ಥಳೀಯ ಷಿಯಾ ಪಡೆಗಳಿಗೆ ಬೆಂಬಲ ಒದಗಿಸಿದ್ದರು. ಹೀಗೆ ಇರಾನ್ ಬೆಂಬಲದಿಂದ ರೂಪುಗೊಂಡ ಹೆಜ್ಬೊಲ್ಲಾ ಪಡೆ ಇಂದು ಲೆಬನಾನ್‌ನಲ್ಲಿ ಇರಾನಿನ ನೇರ ಪ್ರತಿನಿಧಿಯಾಗಿದೆ.
ಇರಾನಿನ ಇಂದಿನ ಸರ್ವೋಚ್ಚ ನಾಯಕ, ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ವಿರುದ್ಧ ಭಾರೀ ದ್ವೇಷ ಭಾವನೆ ಹೊಂದಿದ್ದಾರೆ. ಖಮೇನಿ ಮತ್ತು ಇರಾನಿನ ನಾಯಕರು ಎರಡನೇ ಮಹಾಯುದ್ಧದ ವೇಳೆ ಲಕ್ಷಾಂತರ ಯಹೂದಿಗಳ ಸಾವಿಗೆ ಕಾರಣವಾದ, ನಾಜಿ ಜರ್ಮನಿ ಮತ್ತಿತರರು ನಡೆಸಿದ ಯಹೂದಿ ನರಮೇಧ ಎಂಬುದು ಸುಳ್ಳು ಕತೆ ಎಂದೇ ವಾದಿಸಿದ್ದಾರೆ.
ಇರಾನ್ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕೇ?
ಬಹಳಷ್ಟು ಇರಾನಿ ನಾಗರಿಕರು ಇಸ್ರೇಲ್ ವಿರುದ್ಧ ತಮ್ಮ ದೇಶದ ದ್ವೇಷ ಸರಿಯಲ್ಲ ಎಂದಿದ್ದಾರೆ. ೨೦೨೧ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಇರಾನಿನ ಮಾಜಿ ಅಧ್ಯಕ್ಷ ಅಲಿ ಅಕ್ಬರ್ ಹಶೇಮಿ ರಫ್ಸಂಜಾನಿ ಅವರ ಪುತ್ರಿ, ಫಾಯ್ಜೆ ಹಶೇಮಿ ರಫ್ಸಂಜಾನಿ ಅವರು "ಇಸ್ರೇಲ್ ಜೊತೆಗಿನ ತನ್ನ ಸಂಬಂಧದ ಕುರಿತು ಇರಾನ್ ಮತ್ತೊಮ್ಮೆ ಆಲೋಚಿಸುವ ಅಗತ್ಯವಿದೆ. ಯಾಕೆಂದರೆ, ಇರಾನಿನ ಇಂದಿನ ನಿರ್ಣಯ ಪ್ರಸ್ತುತತೆ ಹೊಂದಿಲ್ಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇರಾನ್ ಸಂಸತ್ತಿನ ಮಾಜಿ ಸದಸ್ಯೆಯೂ ಆಗಿರುವ ಫಾಯ್ಜೆ, ಚೀನಾದಲ್ಲಿ ಉಯ್ಘರ್ ಮುಸ್ಲಿಮರು, ರಷ್ಯಾದಲ್ಲಿ ಚೆಚೆನ್ ಮುಸ್ಲಿಮರು ದಮನಿಸಲ್ಪಟ್ಟಿದ್ದಾರೆ ಎಂಸಿದ್ದು, ಆದರೆ ಆ ದೇಶಗಳೊಡನೆ ಇರಾನ್ ಬಲವಾದ ಸ್ನೇಹ ಹೊಂದಿದೆ ಎಂದು ವಿವರಿಸಿದ್ದಾರೆ.
ಟೆಹರಾನ್ ವಿಶ್ವವಿದ್ಯಾಲಯದ ಉಪನ್ಯಾಸಕರು, ಪ್ರಸಿದ್ಧ ರಾಜಕೀಯ ವಿಜ್ಞಾನಿಯೂ ಆಗಿರುವ ಸದೇಘ್ ಜಿಬಕಲಾಮ್ ಅವರು ಇಸ್ರೇಲ್ ಕುರಿತಂತೆ ಇರಾನಿನ ನಿಲುವನ್ನು ನಿರಂತರವಾಗಿ ಟೀಕಿಸಿದ್ದಾರೆ. ೨೦೨೨ರ ಸಂದರ್ಶನದಲ್ಲಿ, ಇರಾನಿನ ಇಂತಹ ನಿಲುವೇ ಅದನ್ನು ಜಾಗತಿಕವಾಗಿ ಏಕಾಂಗಿಯಾಗಿಸಿದೆ ಎಂದಿದ್ದರು.
ಇರಾನಿನ ಇಸ್ಲಾಮಿಕ್ ರಿಪಬ್ಲಿಕ್‌ನ ಬೆಂಬಲಿಗರು ಇಸ್ರೇಲ್ ವಿರುದ್ಧ ಅದರ ಕಠಿಣ ನಿಲುವನ್ನು ಬೆಂಬಲಿಸಿದ್ದು, ಪ್ರಮುಖ ಜಾಗತಿಕ ಶಕ್ತಿಗಳ ವಿರುದ್ಧ ಇರಾನ್ ನಿಲ್ಲುವುದನ್ನು ನೋಡಲು ಉತ್ಸುಕರಾಗಿದ್ದಾರೆ. ವಿಶ್ಲೇಷಕ ಅಲಿ ಫತೊಲ್ಲಾ ನೆಜಾದ್ ಅವರ ಪ್ರಕಾರ, ಇರಾನ್ ಆಡಳಿತ ಮತ್ತು ಆಯಕ್ಸಿಸ್ ಆಫ್ ರೆಸಿಸ್ಟೆನ್ಸ್ ಬೆಂಬಲಿಗರು ಗಾಜಾ ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸಲು ಮತ್ತು ತನ್ನ ಮೇಲಿನ ದಾಳಿಗೆ ಪ್ರತಿದಾಳಿ ನಡೆಸಲು ಇರಾನ್ ಹಿಂದೇಟು ಹಾಕಿದ್ದಕ್ಕೆ ಅಸಮಾಧಾನಗೊಂಡಿದ್ದರು. ಇರಾನಿನ ರಾಯಭಾರ ಕಚೇರಿಯ ಮೇಲೆ ದಾಳಿಯಾದ ಬಳಿಕ ಈ ಮನೋಭಾವ ಇನ್ನಷ್ಟು ತೀವ್ರವಾಯಿತು.
ಬರ್ಲಿನ್ ಮೂಲದ ಸೆಂಟರ್ ಫಾರ್ ಮಿಡಲ್ ಈಸ್ಟ್ ಆಯಂಡ್ ಗ್ಲೋಬಲ್ ಆರ್ಡರ್ ಸಂಸ್ಥೆಯ ಪ್ರಕಾರ, ಇಸ್ರೇಲ್ ವಿರುದ್ಧ ನೇರವಾಗಿ ಕದನಕ್ಕೆ ಇಳಿಯಲು ಇರಾನ್ ಹಿಂದೇಟು ಹಾಕುತ್ತಿದ್ದರಿಂದ, ಪ್ಯಾಲೆಸ್ತೀನಿನ ಪ್ರಮುಖ ಬೆಂಬಲಿಗ ಎಂಬ ಇರಾನಿನ ನಂಬಿಕಾರ್ಹತೆ ಕುಸಿಯತೊಡಗಿತ್ತು. ಇದೆಲ್ಲ ಕಾರಣಗಳು ಇರಾನ್ ತೀವ್ರವಾಗಿ ಪ್ರತಿಕ್ರಿಯಿಸುವಂತೆ ಮಾಡಿವೆ.