ಮುರುಘಾಶ್ರೀಗೆ ಮತ್ತೆ ಸಂಕಷ್ಟ: ಜಾಮೀನು ಸಿಕ್ಕರೂ ಬಿಡುಗಡೆ ಇಲ್ಲ
ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಮೊದಲ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶರಣರಿಗೆ ಬಿಡುಗಡೆ ಭಾಗ್ಯ ಸದ್ಯಕ್ಕೆ ಸಿಗುವ ಲಕ್ಷಣಗಳು ಕಡಿಮೆಯಾಗಿವೆ. ೨ನೇ ಲೈಂಗಿಕ ಪ್ರಕರಣದಲ್ಲಿ ಬಾಡಿವಾರೆಂಟನ್ನು ನ್ಯಾಯಾಂಗ ಬಂಧನವಾಗಿ ವಿಸ್ತರಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕರು ಅರ್ಜಿ ಸಲ್ಲಿಸಿದ್ದು ಒಂದು ವೇಳೆ ನ್ಯಾಯಾಲಯ ಪರಿಗಣಿಸಿದರೆ ಮುರುಘಾಶ್ರೀಗಳು ಮತ್ತೆ ಸಂಕಷ್ಟಕ್ಕೆ ಸಿಲುಕುತ್ತಾರೆ.
ಶುಕ್ರವಾರ ಬೆಳಿಗ್ಗೆ ಮುರುಘಾಶರಣರ ಪರ ವಕೀಲರಾದ ಸಂದೀಪ್‌ಪಾಟೀಲ್ ಹೈಕೋರ್ಟ್ ಜಾಮೀನು ಪ್ರತಿಯನ್ನು ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದರು. ನ್ಯಾಯಾಧೀಶರಾದ ಬಿ.ಕೆ.ಕೋಮುಲಾ ಮಧ್ಯಾಹ್ನ ೩ ಗಂಟೆಗೆ ಮುಂದೂಡಿದರು. ಮಧ್ಯಾಹ್ನ ನಂತರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಶಾಸಕ ಕೆ.ಸಿ.ವೀರೇಂದ್ರ ಅವರ ಸಹೋದರ ಕೆ.ಸಿ.ನಾಗರಾಜ್ ಮತ್ತು ಮಧುಸೂದನ್ ಇಬ್ಬರು ಎರಡು ಲಕ್ಷ ಬಾಡ್‌ಗೆ ಸಹಿ ಹಾಕಿ ಶುರಿಟಿ ಹಾಕಿದರು. ಇವರುಗಳು ಸಲ್ಲಿಸಿರುವ ಜಮೀನು ಪತ್ರ, ಈ ಜಮೀನು ಮತ್ತೆ ಯಾರಿಗೂ ಶುರಿಟಿ ನೀಡಿಲ್ಲವೆ ಹಾಗೂ ಇದು ಅಸಲಿಯೆ ಎಂದು ಪರಿಶೀಲಿಸಿ ಅಂತಿಮ ಆದೇಶ ಹೊರಡಿಸಲು ದೀಪಾವಳಿ ಬಳಿಕ ಅಂದರೆ ನವೆಂಬರ್ ೧೫ಕ್ಕೆ ಮುಂದೂಡಿದರು.
ಇದೇ ವೇಳೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್ ಅವರು, ೨ನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುರುಘಾ ಶರಣರು ಬಾಡಿ ವಾರೆಂಟ್‌ನಲ್ಲಿದ್ದು ಇದನ್ನು ನ್ಯಾಯಾಂಗ ಬಂಧನಕ್ಕೆ ವಿಸ್ತರಿಸುವಂತೆ ಮನವಿ ಮಾಡಿ ಆಕ್ಷೇಪಣೆ ಸಲ್ಲಿಸಿದರು. ಇದಕ್ಕೆ ಸಂದೀಪ್ ಪಾಟೀಲ್ ಅವರು ೨ನೇ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಒಂದು ವೇಳೆ ನ್ಯಾಯಾಂಗ ಬಂಧನ ವಿಸ್ತರಿಸಿದರೆ ಹೈಕೋರ್ಟ್ ಆದೇಶ ಉಲ್ಲಂಘನೆಯಾಗುತ್ತದೆ ಎಂದು ವಾದ ಮಂಡಿಸಿದರು. ತಡೆಯಾಜ್ಞೆ ನೀಡಿರುವ ಬಗ್ಗೆ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಲಾಯಿತು. ಕೊನೆಗೆ ನ್ಯಾಯಾಧೀಶರು ಇದನ್ನು ನವೆಂಬರ್ ೧೫ಕ್ಕೆ ಮುಂದೂಡಿದರು.
ಒಂದುವೇಳೆ ೨ನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುರುಘಾಶರಣರನ್ನು ಬಾಡಿ ವಾರೆಂಟ್‌ನಿAದ ನ್ಯಾಯಾಂಗ ಬಂಧನಕ್ಕೆ ವಿಸ್ತರಿಸಿದರೆ ಜಾಮೀನು ಸಿಗುವುದು ಸಂದೇಹ ಎಂದು ಕಾನೂನು ತಜ್ಞರು ಹೇಳಿದ್ದಾರೆ. ವಿಸ್ತರಿಸದಿದ್ದರೆ ಹಾಗೂ ೨ನೇ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದರೆ ಮಾತ್ರ ಜಾಮೀನು ಹಾದಿ ಸುಗಮವಾಗಲಿದೆ.
ಭರವಸೆ ಇದೆ: ಹೈಕೋರ್ಟ್ ಏಳು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಚಿತ್ರದುರ್ಗ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಲಾಗಿದೆ. ೨ಲಕ್ಷ ಬಾಂಡ್, ಇಬ್ಬರಿಂದ ಜಮೀನು ಶುರಿಟಿ, ಮುರುಘಾಶ್ರೀ ಪಾಸ್ ಪೋರ್ಟ್ ಕೋರ್ಟ್ಗೆ ಸಲ್ಲಿಸಲಾಗಿದೆ. ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ೩ದಿನ ರಜೆ ಹಿನ್ನೆಲೆಯಲ್ಲಿ ನವೆಂಬರ್ ೧೫ ಕ್ಕೆ ಮುಂದೂಡಲಾಗಿದೆ. ಸರ್ಕಾರಿ ವಕೀಲರು ಬಾಡಿ ವಾರೆಂಟ್‌ನ್ನು ನ್ಯಾಯಾಂಗ ಬಂಧನವಾಗಿ ಬದಲಿಸಲು ಮನವಿ ಮಾಡಿದ್ದಾರೆ. ಹೈಕೋರ್ಟ್ಗೆ ೨ನೇ ಫೋಕ್ಸೋ ಕೇಸ್ ರದ್ದತಿಗೆ ಮನವಿ ಸಲ್ಲಿಸಿದ್ದು ವಿಚಾರಣೆಗೆ ತಡೆಯಾಜ್ಞೆ ನೀಡಿದೆ. ಈ ವೇಳೆ ಜಿಲ್ಲಾ ಕೋರ್ಟ್ಗೆ ಮನವಿ ಸಲ್ಲಿಸಲಾಗದು. ಸರ್ಕಾರಿ ವಕೀಲರು ಮನವಿ ಸಲ್ಲಿಸಿದ್ದಾರೆ, ಕೋರ್ಟ್ ಸ್ವೀಕರಿಸಿದೆ. ನಾವು ಆಕ್ಷೇಪಣೆ ಸಲ್ಲಿಸುವುದು ಹೈಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆ. ಒಂದನೇ ಕೇಸಲ್ಲಿ ಹೈಕೋರ್ಟ್ ಜಾಮೀನು ಹಿನ್ನೆಲೆ ಬಿಡುಗಡೆ ಕೋರಿದ್ದೇವೆ.ನವೆಂಬರ್ ೧೫ಕ್ಕೆ ಮುರುಘಾ ಶ್ರೀ ಬಿಡುಗಡೆಯಾಗುವ ಭರವಸೆಯಿದೆ ಎಂದು ಶರಣರ ಪರ ವಕೀಲ ಸಂದೀಪ್ ಪಾಟೀಲ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.