ಮುಲಾಜಿನ ಬೇಡಿಗೆ ಒಳಗಾಗದ ಸ್ಪಿನ್ ಮಾಂತ್ರಿಕ
ಸ್ಪಿನ್ ಮಾಂತ್ರಿಕ ಬಿಷನ್ ಸಿಂಗ್ ಬೇಡಿ ಅದ್ಭುತ ಫ್ಲೈಟರ್ ಹಾಗೂ ಫೈಟರ್ ಆಗಿದ್ದರು. ಕ್ರಿಕೆಟ್ ಆಟದ ರೀತಿ ರಿವಾಜುಗಳ ಕ್ರೀಸ್ ಅನ್ನು ಎಂದೂ ದಾಟುತ್ತಿರಲಿಲ್ಲ. ಅನ್ಯಾಯ, ಅಪಚಾರಗಳನ್ನು ಮುಲಾಜಿಲ್ಲದೆ ಸಿಕ್ಸರ್‌ಗೆ ಎತ್ತುತ್ತಿದ್ದ ಧೈರ್ಯವಂತ. ಕ್ರೀಡಾಸ್ಫೂರ್ತಿಯ ಅದಮ್ಯ ಚೇತನರಾಗಿದ್ದರು.
ಕ್ರಿಕೆಟ್‌ನಲ್ಲಿ ಕೊನೆಯ ಎಸೆತದವರೆಗೂ ಸೊಲೊಪ್ಪಿಕೊಳ್ಳಬಾರದು ಎಂಬ ನೀತಿಯನ್ನು ಬೇಡಿ ನಿಜ ಜೀವನದಲ್ಲೂ ಅಳವಡಿಸಿಕೊಂಡಿದ್ದರು. ಆರೋಗ್ಯ ಸರಿ ಇರಲಿಲ್ಲ. ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗಾಲಿಕುರ್ಚಿಗೆ ಅಂಟಿಕೊಂಡಿದ್ದರಿಂದ ಇತ್ತೀಚೆಗೆ ಸಕ್ರಿಯರಾಗಿರಲಿಲ್ಲ. ಆದರೂ ಜೀವನೋತ್ಸಾಹ ಕುಗ್ಗಿರಲಿಲ್ಲ. ಇದನ್ನೇ ಅವರು 'ಬೇಡಿ' ಬಂದಿದ್ದರು. ಅದರಂತೆ ಬಾಳಿ ಬದುಕಿದರು ಕೂಡ. ಇದೇ ಕಾರಣಕ್ಕೆ ಬಿಷನ್ ಸಿಂಗ್ ಬೇಡಿ ಇತರರಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿ ನಿಲ್ಲುತ್ತಾರೆ.
ಅದು ೧೯೭೪-೭೫ರ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ. ಬೆಂಗಳೂರು ಟೆಸ್ಟ್‌ನಲ್ಲಿ ಖ್ಯಾತ ಲೆಗ್ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ಗೆ ನಾಯಕ ಪಟೌಡಿ ಹಾಗೂ ಸುನೀಲ್ ಗವಾಸ್ಕರ್ ಲಭ್ಯರಿರಲಿಲ್ಲ. ಸ್ಪಿನ್ನರ್ ವೆಂಕಟರಾಘವನ್ ನಾಯಕತ್ವ. ಏತನ್ಮಧ್ಯೆ, 'ನೋ ಬೇಡಿ, ನೋ ಟೆಸ್ಟ್ (ಬೇಡಿ ಇಲ್ಲದಿದ್ದರೆ ಟೆಸ್ಟ್ ಬೇಡ)' ಎಂಬ ಕೂಗೆದ್ದಿತು. ಒತ್ತಡಕ್ಕೆ ಮಣಿದು ತಂಡದಲ್ಲಿ ಬೇಡಿಗೆ ಸ್ಥಾನ ನೀಡಲಾಯಿತು.
ಬಿಷನ್ ಸಿಂಗ್ ಬೇಡಿ ಅವರ ಜನಪ್ರಿಯತೆ, ತಾಕತ್ತಿಗೆ ಈ ಪ್ರಕರಣವೊಂದೇ ಸಾಕು. ಕೊನೆಯವರೆಗೂ ಅವರು ಇದೇ ರೀತಿ ಬದುಕಿದರು. ಟೆಸ್ಟ್ ಕ್ರಿಕೆಟ್ ಮಹತ್ವ ಕಳೆದುಕೊಂಡು ಮರೆಯಾಗುತ್ತಿರುವ ಸಮಯದಲ್ಲಿ, ಇಂದಿನ ಕ್ರಿಕೆಟ್ ಪ್ರೇಮಿಗಳಿಗೆ ಬಿಷನ್ ಸಿಂಗ್ ಬೇಡಿ ಅವರ ಸಾಧನೆಯ ಅರಿವು ಅಷ್ಟಾಗಿ ಇರಲಿಕ್ಕಿಲ್ಲ. ಆದರೆ ಶ್ರೇಷ್ಠ ಸ್ಪಿನ್ ಮಾಂತ್ರಿಕರಲ್ಲೊಬ್ಬರಾಗಿ, ಭಾರತೀಯ ಕ್ರಿಕೆಟ್ ಕ್ಷಿತಿಜದಲ್ಲಿ ಬೆಳಗಿದ ಈ ಮಹಾನ್ ಪ್ರತಿಭೆ ತಮ್ಮದೇ ಆದ ಛಾಪು ಮೂಡಿಸಿದ್ದಂತೂ ಹೌದು.
ಈಚೆಗೆ ೭೭ನೇ ವಯಸ್ಸಿನಲ್ಲಿ ನಿಧನರಾದ ಬೇಡಿ ಅದ್ಭುತ ಫ್ಲೈಟರ್ ಮತ್ತು ಫೈಟರ್. ಅವರ ಸ್ಪಿನ್ ದಾಳಿ ಎಷ್ಟು ಮೊನಚಾಗಿತ್ತು ಎಂದರೆ ಬ್ಯಾಟ್ಸ್ಮನ್‌ಗಳಿಗೆ ಚೆಂಡಿನ ತಿರುಗುವಿಕೆಯ ಗತಿ ಗುರುತಿಸುವುದು ಕಡುಕಷ್ಟವೆನಿಸಿತ್ತು.
೧೯೬೬-೧೯೭೮ರ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದ್ ಬಿಷನ್ ಸಿಂಗ್ ಬೇಡಿ ಸಾಧನೆಯನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ- ಆಡಿದ ೬೭ ಟೆಸ್ಟ್ಗಳಲ್ಲಿ ಒಟ್ಟು ೨೬೬ ವಿಕೆಟ್ ಪಡೆದಿದ್ದಾರೆ. ೧೪ ಬಾರಿ ೫ ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ ಹೆಗ್ಗಳಿಕೆ. ಒಮ್ಮೆ ಪಂದ್ಯದಲ್ಲಿ ೧೦ ವಿಕೆಟ್ ಪಡೆದಿದ್ದಾರೆ. ೯೮ಕ್ಕೆ ೭ ವಿಕೆಟ್ - ಅವರ ಅತ್ಯುತ್ತಮ ಬೌಲಿಂಗ್ ಸಾಧನೆ. ೧೦ ಏಕದಿನ ಪಂದ್ಯಗಳನ್ನೂ ಆಡಿದ್ದು ೭ ವಿಕೆಟ್ ಪಡೆದಿದ್ದಾರೆ. ೧೯೭೫ರ ವಿಶ್ವಕಪ್ ಟೂರ್ನಿಯಲ್ಲಿ ೧೨-೦೮-೬-೧ ಇದು ಅತ್ಯಂತ ಮಿತವ್ಯಯದ ಬೌಲಿಂಗ್ ಎಂಬ ಹೆಗ್ಗಳಿಕೆ ಪಡೆದಿದೆ. ಅತಿ ಹೆಚ್ಚು ಮೇಡನ್ ಓವರ್‌ಗಳಲ್ಲಿ ಗಿಬ್ಸ್ ಮೊದಲಿಗರು. ಬೇಡಿಗೆ ಎರಡನೇ ಸ್ಥಾನ.
ಆಗೆಲ್ಲ ಭಾರತದಲ್ಲಿ ಸ್ಪಿನ್ ಬೌಲರ್‌ಗಳದ್ದೇ ದರ್ಬಾರು. ತಂಡದಲ್ಲಿ ಸ್ಪಿನ್ ಚತುರ್ವಳಿಗಳಿದ್ದರು. ರಾಜ್ಯದವರೇ ಆದ ಪ್ರಸನ್ನ ಮತ್ತು ಚಂದ್ರಶೇಖರ್, ಬಿಷನ್ ಸಿಂಗ್ ಬೇಡಿ ಮತ್ತು ವೆಂಕಟರಾಘವನ್. ೧೯೬೭ ರಲ್ಲಿ ಒಮ್ಮೆ ಮಾತ್ರ ಎಲ್ಲ ನಾಲ್ವರೂ ಒಟ್ಟಿಗೇ ತಂಡದಲ್ಲಿದ್ದರು.
೧೯೪೬ ರಲ್ಲಿ ಅಮೃತಸರ್‌ನಲ್ಲಿ ಜನಿಸಿದ ಬಿಷನ್‌ಸಿಂಗ್ ಬೇಡಿ ಕ್ರಿಕೆಟ್ ಆಟಗಾರರಾದ ಮೇಲೆ ದೆಹಲಿಯೇ ತವರುಮನೆ. ಆಗೆಲ್ಲ ಕ್ರಿಕೆಟ್‌ನಲ್ಲಿ ಮುಂಬೈ ತಂಡದ್ದೇ ಆಧಿಪತ್ಯ ಮತ್ತು ಪಾರುಪತ್ಯ. ಆ ಏಕಚಕ್ರಾಧಿಪತ್ಯವು ಬೇಡಿಗೆ ಕಸಿವಿಸಿ ಉಂಟುಮಾಡುತ್ತಿತ್ತು. ಅದನ್ನು ಮುರಿದು ದೆಹಲಿಗೆ ಕ್ರಿಕೆಟ್‌ನಲ್ಲಿ ಅದರದೇ ಆದ ಸ್ಥಾನಮಾನ ಕಲ್ಪಿಸಲು ಬಹುವಾಗಿ ಶ್ರಮಿಸಿ ಯಶಸ್ವಿಯಾದರು ಕೂಡ. ಪಟೌಡಿ ಉತ್ತರಾಧಿಕಾರಿಯಾಗಿ ೨೨ ಟೆಸ್ಟ್‌ಗಳಲ್ಲಿ ಭಾರತದ ನಾಯಕತ್ವ ವಹಿಸಿಕೊಂಡರು. ಕ್ರಿಕೆಟ್‌ನಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದರ ಹೊರತಾಗಿ ಇತರ ವಿಚಾರಗಳಲ್ಲೂ ತಮ್ಮ ಹೆಜ್ಜೆಗುರುತು ಮೂಡಿಸಿರುವುದು ಬೇಡಿ ಹೆಚ್ಚುಗಾರಿಕೆ ಮತ್ತು ವೈಶಿಷ್ಟ್ಯ. ಆಟದ ಮಟ್ಟಿಗೆ ಹೇಳುವುದಾದರೆ ಅವರು ಸೊಗಸು ಮತ್ತು ಮಾರಕದಾಳಿಯ ಮಿಶ್ರಣದಂತಿದ್ದರು. ಸತತ ಮೂರು ಬೌಂಡರಿ ಚಚ್ಚಿದರೂ ಚಪ್ಪಾಳೆ ತಟ್ಟಿ ಶ್ಲಾಘಿಸುವ ಔದಾರ್ಯ. ಆದರೆ ಮುಂದಿನ ಚೆಂಡು ಅದು ಹೇಗೋ ಬ್ಯಾಟ್ಸ್ಮನ್‌ಗೇ ಗೊತ್ತಿಲ್ಲದಂತೆ ಒಳನುಗ್ಗಿ ಬೇಲ್ಸ್ ಎಗರಿಸುತ್ತಿತ್ತು. ಒಂದು ರೀತಿ ನಯವಂಚಕನಾತ. ಸದಾ ಬಣ್ಣಬಣ್ಣದ ಪಟ್ಕಾದಲ್ಲಿ ಕಂಗೊಳಿಸುತ್ತಿದ್ದ ಬೇಡಿ ಜೋಕ್ ಮಾಡುತ್ತ, ಎಲ್ಲರನ್ನು ನಗಿಸುತ್ತ ಖುಷಿಯಾಗಿರುತ್ತಿದ್ದರು. ಬೌಲಿಂಗ್ ಶೈಲಿ ನಿಧಾನಗತಿ ಹಾಗೂ ಸ್ಪಿನ್ ಶೈಲಿಯಾದರೂ ನಡೆ ನುಡಿಯಲ್ಲಿ ಮಾತ್ರ ವಿಪರೀತ ವೇಗ ಮತ್ತು ಆವೇಗ. ಆಟದ ನಿಯಮಗಳಲ್ಲಿ ಬಲು ಪ್ರಾಮಾಣಿಕ ಆದರೆ ಅಷ್ಟೇ ನಿರ್ಭಾವುಕ.
ಮೂರು ಪ್ರಕರಣಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ೧೯೭೬ ರಲ್ಲಿ ವೆಸ್ಟ್ ಇಂಡೀಸ್‌ನ ಸಬೀನಾ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಭಾರತ ತಂಡ, ಒಂದು ಹಂತದಲ್ಲಿ ೫ ವಿಕೆಟ್ ಕಳೆದುಕೊಂಡು ೩೦೬ ರನ್ ಗಳಿಸಿತ್ತು. ತಂಡದ ನಾಯಕರಾಗಿದ್ದ್ ಬೇಡಿ, ಆ ಹಂತದಲ್ಲಿ ಹಠಾತ್ ಡಿಕ್ಲೇರ್ ಘೋಷಿಸಿದ್ದರು. ಕಾರಣ ವೆಸ್ಟ್ ಇಂಡೀಸ್ ಬೌಲರ್‌ಗಳು ಪದೇ ಪದೆ ಬೌನ್ಸ್ರ್ ಹಾಕುತ್ತಿದ್ದರು. ಮೊದಲ ಇನಿಂಗ್ಸ್ನಲ್ಲಿ ಮೂವರು ಬ್ಯಾಟ್ಸ್ ಮೆನ್ ಅದಾಗಲೇ ಗಾಯಗೊಂಡಿದ್ದರು. ಬೇಡಿ ಮತ್ತು ಚಂದ್ರು ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರು. ಹೀಗಾಗಿ ಈ ದಿಟ್ಟ ಕ್ರಮ. ನೈತಿಕತೆಯ ವಿಷಯದಲ್ಲಿ ಬೇಡಿ ಎಂದಿಗೂ ರಾಜಿಯಾಗದ ಗಟ್ಟಿ ಮನುಷ್ಯ ಎಂದು ಮೈಕೆಲ್ ಹೋಲ್ಡಿಂಗ್ ನೆನಪಿಸಿಕೊಂಡಿದ್ದಾರೆ.
೧೯೭೭ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನೈನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ವೇಗಿಗಳಾದ ಜಾನ್ ಲಿವರ್ ಹಾಗೂ ಬಾಬ್ ವಿಲ್ಸ್ ಅಲ್ಲಿನ ಬಿಸಿಲು ತಡೆಯಲಾಗದೆ ಬೆವರುತ್ತಿದ್ದರು. ಇದಕ್ಕೆ ಪರಿಹಾರವಾಗಿ ಹಣೆಯ ಮೇಲೆ ವ್ಯಾಸಲೀನ್ ಹಚ್ಚಿಕೊಳ್ಳುವ ಸಲಹೆ ಬಂತು. ಆದರೆ ಭಾರತದ ಕ್ಯಾಪ್ಟನ್ ಬೇಡಿ ಇದಕ್ಕೆ ತಕರಾರು ತೆಗೆದರು. ಇದರಿಂದ ಬಾಲ್‌ಗೆ ಹೊಳಪು ದೊರೆತು ಸ್ವಿಂಗ್‌ಗೆ ನೆರವಾಗುತ್ತದೆ, ಮೋಸ ಎಂದರು. ಇದು ಕ್ರಿಕೆಟ್ ಇತಿಹಾಸದಲ್ಲಿ 'ಜಾನ್ ಲಿವರ್' ವ್ಯಾಸಲೀನ್ ಪ್ರಕರಣ ಎಂದೇ ಕುಖ್ಯಾತಿ ಪಡೆಯಿತು. ಬೇಡಿ ಅವರ ನ್ಯಾಯಪರ ನಿಲುವಿಗೆ ಮತ್ತೊಂದು ಸಾಕ್ಷಿಯಾಗಿ ನಿಂತಿತು.
೧೯೭೮ ರಲ್ಲಿ ಭಾರತ-ಪಾಕ್ ನಡುವೆ ಸಾಹಿಲ್‌ನಲ್ಲಿ ಮೂರನೇ ಏಕದಿನ ಪಂದ್ಯ. ಮೊದಲೆರಡು ಪಂದ್ಯ ೧-೧ ರಲ್ಲಿ ಸಮವಾಗಿ ಇದು ನಿರ್ಣಾಯಕವೆನಿಸಿತ್ತು. ಪಾಕಿಸ್ತಾನವು ೪೦ ಓವರ್‌ಗಳಲ್ಲಿ ೭ಕ್ಕೆ ೨೦೫ ರನ್ ಗಳಿಸಿ ತನ್ನ ಸರದಿ ಮುಗಿಸಿತ್ತು. ಭಾರತ ೩೭ ಓವರ್‌ಗಳಲ್ಲಿ ೨ ವಿಕೆಟ್‌ಗೆ ೧೮೩ ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಗೆಲುವಿಗೆ ೧೮ ಎಸೆತಗಳಲ್ಲಿ ೨೩ ರನ್ ಮಾತ್ರ ಬೇಕಾಗಿದ್ದವು. ಈ ಹಂತದಲ್ಲಿ ಪಾಕಿಸ್ತಾನದ ಕಳ್ಳಾಟ ಶುರುವಾಯಿತು. ಸತತ ನಾಲ್ಕು ಬಾಲ್‌ಗಳು ಬ್ಯಾಟಿಗೆ ನಿಲುಕದಷ್ಟು ದೂರ ಬಿದ್ದವು. ಅದರೂ ಅಂಪೈರ್ ವೈಡ್ ಘೋಷಿಸಲಿಲ್ಲ. ವಿಶ್ವನಾಥ್ ಮತ್ತು ಗಾಯಕ್ವಾಡ್ ಅಸಹಾಯಕರಾಗಿ ನೋಡಿದರು. ನಾಯಕ ಬೇಡಿ ಮಾತ್ರ ಹಿಂದೆ ಮುಂದೆ ನೋಡದೆ ಬ್ಯಾಟ್ಸ್ಮನ್‌ಗಳನ್ನು ಕರೆಸಿಕೊಂಡರು. ಪಂದ್ಯ ಬಿಟ್ಟುಕೊಟ್ಟು ಸರಣಿ ಸೋತರೂ ಪರವಾಗಿಲ್ಲ, ಮೋಸದಾಟ ಸಹಿಸುವುದಿಲ್ಲ ಎಂಬ ಸಂದೇಶವನ್ನು ಸಾರಿದರು. ಇದು ಬೇಡಿಯ ಛಾತಿ.
ಸಿಖ್ ಧರ್ಮೀಯರಾಗಿದ್ದರೂ ನಿಜವಾದ ಜಾತ್ಯತೀತ ಮತ್ತು ದೇಶಾತೀತ ಮನೋಭಾವವನ್ನು ಬೇಡಿ ಹೊಂದಿದ್ದರು. ಪಾಕಿಸ್ತಾನದ ಮುಷ್ತಾಕ್ ಮೊಹಮ್ಮದ್ ಅವರೊಟ್ಟಿಗೆ ಬೇಡಿಗೆ ವಿಶೇಷ ನಂಟು. ಭಾರತ-ಪಾಕ್ ನಡುವೆ ರಾಜಕೀಯ ಹಗೆತನ ಇಂದು ನಿನ್ನೆಯದಲ್ಲ. ಇಬ್ಬರೂ ಆಯಾ ತಂಡದ ಕ್ಯಾಪ್ಟನ್ ಆಗಿದ್ದರಲ್ಲ. 'ಚಾಂಪಿಯನ್ (ಮುಷ್ತಾಕ್‌ರನ್ನು ಬೇಡಿ ಹಾಗೇ ಕರೆಯುತ್ತಿದ್ದರು) - ಇದು ಕೇವಲ ಆಟ. ಚೆನ್ನಾಗಿ ಆಡು. ಗೆಲ್ಲು. ಆದರೆ ಸಂಜೆ ೬.೩೦ಕ್ಕೆ ರೂಮಿಗೆ ಮರೆಯದೇ ಡ್ರಿಂಕ್ಸ್ಗೆ ಬಾ' ಎನ್ನುತ್ತಿದ್ದರು. ನಾವೆಲ್ಲ ಸಾಮಾನ್ಯ ಜನರು, ನಮಗ್ಯಾಕೆ ರಾಜಕೀಯದ ಗೊಡವೆ ಎನ್ನುತ್ತಿದ್ದರು.
ಬೇಡಿ ಅವರ ನೇರ ನಡೆ ನುಡಿ ಇಷ್ಟಕ್ಕೇ ಮುಗಿಯುವುದಿಲ್ಲ. ಬಿಸಿಸಿಐ ಜತೆ ಅವರು ಮುಲಾಜಿಲ್ಲದೆ ಜಗಳಕ್ಕೆ ನಿಲ್ಲುತ್ತಿದ್ದರು. ಪದಾಧಿಕಾರಿಗಳಿಗೆ ಕೋಲ್ಕತಾದಲ್ಲಿ ವಂದಿಸಲಿಲ್ಲ ಎಂಬ ಕಾರಣಕ್ಕೆ ಸಲೀಮ್ ದುರಾನಿ ಅವರನ್ನು ಮುಂದಿನ ಟೆಸ್ಟ್‌ನಲ್ಲಿ ಕೈಬಿಡಲಾಯಿತು. ಇದನ್ನು ಬೇಡಿ ಪ್ರತಿಭಟಿಸಿದರು. ಮುಂದೆ ನಾಗ್ಪುರ ಟೆಸ್ಟ್‌ನಲ್ಲಿ ಭಾರತ ತಂಡದ ಸದಸ್ಯರನ್ನು ಹೋಟೆಲ್ ಬದಲು ಎಂಎಲ್‌ಎ ಹಾಸ್ಟೆಲ್‌ನಲ್ಲಿ ಇರಿಸಲಾಗಿತ್ತು. ಅಲ್ಲಿ ನೀರಿನ ಅನುಕೂಲ ಇರಲಿಲ್ಲ. ಇದನ್ನು ಬೇಡಿ ಆಕ್ಷೇಪಿಸಿ ಪ್ರತಿಭಟಿಸಿದರು. ಇದಕ್ಕಾಗಿ ಭಾರಿ ಬೆಲೆಯನ್ನೇ ತೆರಬೇಕಾಯಿತು. ಮುಂದೆ ಚಂಡೀಗಢಕ್ಕೆ ಕ್ರಿಕೆಟ್ ಪಂದ್ಯಕ್ಕಾಗಿ ಹೋಗಬೇಕಿತ್ತು. ಅವರಿಗೆ ರೈಲಿನಲ್ಲಿ ರಿಸರ್ವೇಶನ್ ಮಾಡಿಸಲಿಲ್ಲ. ಉಪಾಯಗಾಣದೆ ಸರಕು ಸಾಗಿಸುವ ಬೋಗಿಯಲ್ಲೇ ಸಾವಿರಾರು ಕಿಮೀ ಪ್ರಯಾಣ ಮಾಡಬೇಕಾಯಿತು. ಆದರೂ ಬೇಡಿ ಯಾವತ್ತೂ ಸಲಾಮು ಹೊಡೆಯುತ್ತಿರಲಿಲ್ಲ.
ದೆಹಲಿ ಕ್ರಿಕೆಟ್ ಅಸೋಶಿಯನ್ ಜತೆಗೆ ಕಿರಿಕ್ ಇದ್ದೇ ಇರುತ್ತಿತ್ತು. ಅಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಸರಿಮಾಡಿ ಎಂಬುದು ಅವರ ಬೇಡಿಕೆ. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಸ್ಟ್ಯಾಂಡ್‌ಗೆ ಬೇಡಿ ಹೆಸರು ಇಡಲಾಗಿದೆ. ಕ್ರೀಡಾಂಗಣಕ್ಕೆ ಅರುಣ್ ಜೇಟ್ಲಿ ಕೋಟ್ಲಾ ಸ್ಟೆಡಿಯಂ ಎಂದು ನಾಮಕರಣ ಮಾಡಲು ಮುಂದಾದಾಗ ಇದೇ ಬೇಡಿ ಪ್ರತಿಭಟಿಸಿದರು. ಹಾಗೆ ಮಾಡುವುದದರೆ ಸ್ಟ್ಯಾಂಡಿಗೆ ಇಟ್ಟಿರುವ ನನ್ನ ಹೆಸರು ತೆಗೆದುಹಾಕಿ ಎಂದು ಪಟ್ಟು ಹಿಡಿದರು.
ಬೇಡಿ ಎಂದರೆ ಪಟ್ಟು ಬಿಡದ ಹಠಗಾರ. ಹಾಗೆಂದು ಕ್ರಿಕೆಟ್ ಸೇವೆಗೆ ಸದಾ ಸಿದ್ಧರಾಗಿದ್ದರು. ಭಾರತ ತಂಡದ ಕೋಚ್ ಆಗಿ, ಮ್ಯಾನೇಜರ್ ಆಗಿ, ಆಯ್ಕೆಮಂಡಳಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇವರ ಕ್ರಿಕೆಟ್ ಸೇವೆಗೆ ಪದ್ಮಶ್ರೀ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳು ಒಲಿದು ಬಂದಿವೆ.
ಇಷ್ಟಲ್ಲದೆ ಬೇಡಿ ಸಾಕಷ್ಟು ಓದಿಕೊಂಡಿದ್ದರು. ರಾಜಕೀಯ ಪ್ರಜ್ಞೆ ಹೊಂದಿದ್ದರು. ತಮಗೆ ಅನಿಸಿದ್ದನ್ನು ನೇರ ಮತ್ತು ನಿಷ್ಠುರವಾಗಿ ಹೇಳಿಬಿಡುತ್ತಿದ್ದರು. 'ಮುತ್ತಯ್ಯ ಮುರಳೀಧರನ್ ಬೌಲರೇ ಅಲ್ಲ, ಜಾವೆಲಿನ್ ಎಸೆತಗಾರ' ಎಂದು ನೇರವಾಗಿ ಟೀಕಿಸುತ್ತಿದ್ದರು. 'ಅವರು ಮಾಡಿದ್ದೆಲ್ಲ ಬರಿ ರನ್ ಔಟ್' ಎಂದು ಲೇವಡಿ ಮಾಡುತ್ತಿದ್ದರು. ವಿಕ್ಷಿಪ್ತವಾಗಿ ಬೌಲಿಂಗ್ ಮಾಡುವವವರ ಮೇಲೆ ಕೆಂಗಣ್ಣು ಬೀರುತ್ತಿದ್ದರು. ಇಂದಿನ ದಿನಮಾನದ ಟಿ-೨೦ ಕ್ರಿಕೆಟ್ ಹಾಗೂ ಫ್ರಾಂಚೈಸಿ ಶೈಲಿಯ ಕ್ರಿಕೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.