For the best experience, open
https://m.samyuktakarnataka.in
on your mobile browser.

ಮುಳುಗಿದ ಬೋಟ್: ಆರು ಮಂದಿ ಮೀನುಗಾರರ ರಕ್ಷಣೆ

05:51 PM Feb 02, 2024 IST | Samyukta Karnataka
ಮುಳುಗಿದ ಬೋಟ್  ಆರು ಮಂದಿ ಮೀನುಗಾರರ ರಕ್ಷಣೆ

ಮಂಗಳೂರು: ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಟ್ರಾಲ್ ಬೋಟೊಂದು ಸಮುದ್ರದಲ್ಲಿ ಕಲ್ಲೊಂದಕ್ಕೆ ಢಿಕ್ಕಿ ಹೊಡೆದು ಮುಳುಗಿದ ಘಟನೆ ಇಂದು ಮುಂeನೆ ಸಂಭವಿಸಿದ್ದು, ಬೋಟ್‌ನಲ್ಲಿದ್ದ ಆರು ಮಂದಿಯನ್ನು ಇತರ ಎರಡು ಬೋಟ್ ನವರು ರಕ್ಷಿಸಿದ್ದಾರೆ. ಮುಳುಗಡೆಯಾಗಿರುವ ಬೋಟ್ ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದೆ.. ಲಕ್ಷಾಂತರ ರೂ. ಮೌಲ್ಯದ ಬೋಟ್ ಗೆ ಹಾನಿಯಾಗಿದೆ.
ದುರಂತಕ್ಕೀಡಾಗಿರುವ ಬೋಟ್ ಉಳ್ಳಾಲದ ನಯನಾ ಪಿ. ಸುವರ್ಣ ಎಂಬವರಿಗೆ ಸೇರಿದ್ದಾಗಿದೆ. ನಯನಾರ ಪತಿ ಪ್ರವೀಣ್ ಸುವರ್ಣ ಬೋಟ್ ಚಲಾಯಿಸುತ್ತಿದ್ದರೆ, ಉತ್ತರ ಪ್ರದೇಶ ಮೂಲದ ಮೀನುಗಾರರಾದ ಸಮರ ಬಹಾದ್ದೂರ್, ರಾಮ್ ಮನೋಜ್, ರೋಹಿತ್, ಪ್ರಕಾಶ ಮತ್ತು ವಾಸು ಎಂಬವರು ರಕ್ಷಿಸಲ್ಪಟ್ಟವರು.
ಪ್ರವೀಣ್ ಸುವರ್ಣ ಹಾಗೂ ಐವರು ಮೀನುಗಾರರು ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ಇಂದು ಮುಂಜಾವ ನಾಲ್ಕು ಗಂಟೆ ಸುಮಾರಿಗೆ ಉಳ್ಳಾಲ ಸಮುದ್ರ ತೀರದ ಮೂಲಕ ದಡಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಬೋಟ್‌ನ ಪ್ರೊಫೈಲರ್‌ಗೆ ಸಮುದ್ರದಲ್ಲಿ ಯಾವುದೋ ವಸ್ತು ತಾಗಿ ಅದು ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ನಿಂತಿದ್ದ ಬೋಟ್ ಸಮುದ್ರದ ತೆರೆಗಳ ಅಬ್ಬರಕ್ಕೆ ಸಿಲುಕಿ ಕಡಲ್ಕೊರೆತದ ಶಾಶ್ವತ ಕಾಮಗಾರಿಯಾದ ರೀಫ್ ಬಳಿ ಹಾಕಿದ್ದ ಸರ್ವೇ ಕಲ್ಲಿಗೆ ಬಡಿದಿದೆ. ಇದರಿಂದ ಹಾನಿಗೊಳಗಾದ ಬೋಟ್ ಮುಳುಗಿದೆ.
ಟ್ರಾಲ್ ಬೋಟ್ ಮುಳುಗುತ್ತಿರುವ ವಿಚಾರ ತಿಳಿದ ಮೀನುಗಾರಿಕೆಗೆ ತೆರಳಿದ್ದ ದುರ್ಗಾಲಕ್ಷ್ಮೀ ಮತ್ತು ಶ್ರೀ ಗೌರಿ ಬೋಟ್ ಹಾಗೂ ನಾಡದೋಣಿಯಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ಮುಳುಗಿದ ಬೋಟನ್ನು ಅಶ್ವಿನ್ ಕೋಟ್ಯಾನ್ ಮಾಲಕತ್ವದ ಜೈ ಮಾರುತಿ ಸ್ಪೀಡ್ ಬೋಟ್ ಮೂಲಕ ಹಳೆ ಬಂದರು ದಕ್ಕೆಗೆ ಎಳೆದೊಯ್ಯಲಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.