ಮುಳ್ಳಯ್ಯನಗಿರಿಗೆ ವಾಹನ ಸಂಚಾರ ನಿಷೇಧ
ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಮತ್ತೆ ಒಂದು ವಾರ ಪ್ರವಾಸಿ ವಾಹನಗಳನ್ನ ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್ ಮೀನಾ ನಾಗರಾಜ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿ ರಸ್ತೆಯಲ್ಲಿ ಹಲವು ಕಡೆ ಭೂ ಕುಸಿತ ಉಂಟಾಗಿದ್ದು ಲೋಕೋಪಯೋಗಿ ಇಲಾಖೆ ಇನ್ನೂ ಒಂದು ವಾರ ರಸ್ತೆ ದುರಸ್ಥಿಗೆ ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಮುಂದಿನ ವಾರದ ವರೆಗೂ ಅಂದರೆ ಜುಲೈ 29 ರವರೆಗೆ ಗಿರಿ ಪ್ರದೇಶಕ್ಕೆ ಪ್ರವಾಸಿಗರ ವಾಹನಗಳನ್ನು ನಿಷೇಧಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ವಾಡಿಕೆಗಿಂತ 166 ಪ್ರತಿಶತ ಮಳೆ ಬಿದ್ದಿದ್ದು 100 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದರು. ಇದುವರೆಗೂ 192 ಮನೆಗಳು ಬಿದ್ದಿದ್ದು 77 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದರು. ಬಹುತೇಕ ರಸ್ತೆಗಳು ಹಾಳಾಗಿದ್ದು 41 ಸೇತುವೆಗಳಿಗೆ ಹಾನಿಯಾಗಿದೆ ಎಂದು ಡಿ.ಸಿ ಮಾಹಿತಿ ನೀಡಿದರು. 1849 ವಿದ್ಯುತ್ ಕಂಬಗಳು ಮುರಿದಿದ್ದು ದುರಸ್ಥಿ ಬರದಿಂದ ಸಾಗಿದೆ ಎನ್.ಡಿ ಆರ್.ಎಫ್, ಎಸ್.ಡಿ.ಆರ್.ಎಫ್ ತಂಡಗಳು ಸಹಾ ಸನ್ನದ್ದವಾಗಿವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿ ಯಲ್ಲಿ ಎಸ್ಪಿ ವಿಕ್ರಮ್ ಅಮಟೆ ಜಿಲ್ಲಾ ಪಂಚಾಯ್ತಿ ಸಿಇಓ ಕೀರ್ತನಾ ಹಾಜರಿದ್ದರು.