ಮುಸ್ಲಿಮರ ಓಲೈಕೆಗಾಗಿ ಸಿಎಂ ರಜೆ ಘೋಷಿಸಿಲ್ಲ
ಶಿವಮೊಗ್ಗ: ಮುಸ್ಲಿಂರ ಓಲೈಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನಾ ದಿನದಂದು ರಜೆ ಘೋಷಿಸಿಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೌಕರರಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಅನೇಕ ರಾಜ್ಯ ಸರ್ಕಾರಗಳು ರಜೆ ಘೋಷಿಸಿವೆ. ನಾಳೆ ಸಂಭ್ರಮಪಡುವ ದಿನವಾಗಿದೆ ಎಂದರು.
ನಾಳಿನ ದಿನ ಶ್ರೀರಾಮಚಂದ್ರನ ಪ್ರತಿಷ್ಠಾಪನ ದಿನ ಅಜರಾಮರ ದಿನವಾಗಿ ಉಳಿಯುತ್ತದೆ. ಅದೇ ರೀತಿ ಸಿದ್ದರಾಮಯ್ಯ ಅವರ ಹೆಸರು ಕಳಂಕಿತವಾಗಿ ಉಳಿಯುತ್ತದೆ ಎಂದರು.
ರಾಮಭಕ್ತರು ಕೋಟಿ ಕೋಟಿ ಸಂಖ್ಯೆಯಲ್ಲಿ ವೀಕ್ಷಣೆಗೆ ತೆರಳುತ್ತಿದ್ದಾರೆ. ಅಲ್ಲಿಗೆ ಹೋಗಲಾಗದವರು ಟಿವಿಯಲ್ಲಿ ನೋಡುತ್ತಿದ್ದಾರೆ. ನೌಕರರು ಟಿವಿಯಲ್ಲೂ ನೋಡಲು ಆಗುವುದಿಲ್ಲ. ಹಾಗಾಗಿ ರಜೆ ಅಪೇಕ್ಷೆ ಪಟ್ಟಿದ್ದರು. ಕೋಟಾ ಶ್ರೀನಿವಾಸ್ ಪೂಜಾರಿ ಪತ್ರ ಬರೆದಿದ್ದರು, ನಾನು ರಜೆ ನೀಡುವಂತೆ ಒತ್ತಾಯಿಸಿದ್ದೆ ಎಂದರು.
ರಾಮಭಕ್ತರ ಶಾಪ ತಟ್ಟಿ ನಿಮ್ಮ ಸರ್ಕಾರ ಹೋಗುತ್ತದೆ. ಮುಂದಿನ ದಿನಗಳಲ್ಲಿ ರಾಮ ಭಕ್ತರ ಶಾಪ ಅನುಭವಿಸುತ್ತೀರಾ. ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರ ಇರಲ್ಲ ಎಂದರು.