ಮೂಡಾ ಹಗರಣ ತಮ್ಮ ಕಾಲದಲ್ಲೇ ನಡೆದಿದ್ದು ಎಂದು ಬಿಜೆಪಿ ಒಪ್ಪಿಕೊಳ್ಳಲಿ
ಹುಬ್ಬಳ್ಳಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದಲ್ಲಿ ಹಗರಣ ನಡೆದಿರುವುದು ತಮ್ಮ ಕಾಲದಲ್ಲೇ ಅಂತ ಬಿಜೆಪಿ ಮೊದಲು ಒಪ್ಪಿಕೊಳ್ಳಲಿ. ನಂತರ ಬೇಕಿದ್ದರೆ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡಲಿ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಸವಾಲು ಹಾಕಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ೧೯೩೬ರಿಂದ ಈವರೆಗಿನ ಎಲ್ಲಾ ದಾಖಲೆಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಡಿನೋಟಿಫಿಕೇಶನ್ ಯಾವಾಗ ಆಗಿದೆ. ಹಸ್ತಾಂತರ ಯಾರಿಗೆ, ಯಾವಾಗ ನಡೆದಿದೆ. ಯಾವ ರೀತಿ ಭೂಮಿ ಖರೀದಿ ಆಗಿದೆ ಎಂಬ ವಿವರ ನೀಡಿದ್ದಾರೆ. ಇಷ್ಟೆಲ್ಲ ಆದರೂ ಮತ್ತೆ ಯಾಕೆ ಪಾದಯಾತ್ರೆ ಮಾಡಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡಲು ಹೊರಟಿರುವುದು ಅರ್ಥಹೀನವಾದುದು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರೇ ಅಧಿಕಾರದಲ್ಲಿದ್ದಾಗಲೇ ಸೈಟ್‌ಗಳನ್ನು ನೀಡಿ. ಈಗ ಅವರೇ ಪಾದಯಾತ್ರೆ ಮಾಡುತ್ತಾರೆ. ಇದು ಯಾವ ಧರ್ಮ. ಬಸವರಾಜ ಬೊಮ್ಮಾಯಿ ಅವರೇ ನಮ್ಮ ಕಾಲದಲ್ಲಿ ಹಗರಣ ಆಗಿದೆ ಎಂದು ಒಪ್ಪಿಕೊಳ್ಳಲಿ. ಜನಕ್ಕೆ ಮೋಸ ಮಾಡಿದ್ದೇವೆ ಅಂತ ಹೇಳಲಿ. ಇದನ್ನೆಲ್ಲ ಜನ ನೋಡ್ತಾನೆ ಇದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಗ್ಯಾರಂಟಿಗಳಿಗಾಗಿ ೬೩ ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ ಹಿಂದುಳಿದ ನಾಯಕರೊಬ್ಬರು ಈ ರೀತಿ ಬೆಳೆಯುತ್ತಿರುವುದನ್ನು ಬಿಜೆಪಿ ಮತ್ತು ಜೆಡಿಎಸ್‌ಗೆ ನೋಡುವುದಕ್ಕೆ ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಡಬೇಕು ಅನ್ನೋ ಕುತಂತ್ರ ಬಿಟ್ಟರೆ ಬೇರೆ ಯಾವ ಉದ್ದೇಶವೂ ಕಾಣುತಿಲ್ಲ ಎಂದು ಟೀಕಿಸಿದರು.