ಮೂರನೇ ಬಾರಿಗೂ ಮೋದಿಯೇ ಪ್ರಧಾನಿ
ವಿಜಯಪುರ: ದಣಿವರಿಯದೆ ದೇಶಕ್ಕಾಗಿ ದುಡಿಯುತ್ತಿರುವ ವಿಶ್ವ ನಾಯಕರಾಗಿ ಹೊರಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವುದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದ್ದು, ಕಾರ್ಯಕರ್ತರು ಸನ್ನದ್ಧರಾಗಿಬೇಕು ಎಂದು ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ಬಿ.ವೈ ವಿಜಯೇಂದ್ರ ಕರೆ ನೀಡಿದರು.
ಶನಿವಾರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಶನಿವಾರ ನಗರಕ್ಕೆ ಆಗಮಿಸಿದ್ದ ತಮಗೆ ವಿಜಯಪುರ ಜಿಲ್ಲಾ ಘಟಕ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಛತ್ತೀಸಘಡ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ಬೂಟಾಟಿಕೆ ಬಯಲು ಮಾಡಿರುವ ಅಲ್ಲಿನ ಮತದಾರ, ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು.
ವಿಶ್ವಕ್ಕೆ ನಾಯಕತ್ವ ವಹಿಸುವ ಶಕ್ತಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಮತ್ತೊಮ್ಮೆ ಪ್ರತಿಷ್ಠಾಪಿಸುವುದಷ್ಟೇ ನಮ್ಮ ಮುಂದಿರುವ ಗುರಿ. ಹೀಗಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಜ್ಯದ ನಾಯಕರು ಸೇರಿ ನನಗೆ ಪಕ್ಷ ಕಟ್ಟುವ ರಾಜ್ಯದ ಜವಾಬ್ದಾರಿ ನೀಡಿದ್ದು, ಸಮರ್ಥವಾಗಿ ನಿಭಾಯಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.