ಮೂರು ಕಾಲಘಟ್ಟಗಳ ಹಾದಿ…
-ಗಣೇಶ್ ರಾಣೆಬೆನ್ನೂರು
ಚಿತ್ರ: ಹೆಜ್ಜಾರು
ನಿರ್ದೇಶನ: ಹರ್ಷಪ್ರಿಯ
ನಿರ್ಮಾಣ: ಗಗನ ಎಂಟರ್‌ಪ್ರೈಸಸ್
ತಾರಾಗಣ: ಭಗತ್ ಆಳ್ವ, ಶ್ವೇತಾ, ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಕೃಷ್ಣ, ಅರುಣಾ ಬಾಲರಾಜ್ ಇತರರು.
ರೇಟಿಂಗ್ಸ್: 3
ಮೂರು ಕಾಲಘಟ್ಟ… ಸರಣಿ ಸಾವು… ಪೊಲೀಸರ ತನಿಖೆ, ಒಂದಷ್ಟು ಕುತೂಹಲಕಾರಿ ಸನ್ನಿವೇಶಗಳು. ಇವೆಲ್ಲವೂ ‘ಹೆಜ್ಜಾರಿ’ನಲ್ಲಿ ಕಾಣಸಿಗುತ್ತದೆ. ಹೊಸಬರು ವಿಭಿನ್ನ ರೀತಿಯಲ್ಲಿ ಕಥೆ ಕಟ್ಟಿಕೊಡುತ್ತಾರೆ ಎಂಬ ನಂಬಿಕೆಯಲ್ಲಿ ಥಿಯೇಟರ್ ಒಳ ಹೊಕ್ಕವರಿಗೆ ಕೆಲವೊಂದು ಅಚ್ಚರಿ, ಸಿನಿಮಾದ ಪ್ರೆಸೆಂಟೇಷನ್, ಕಲಾವಿದರ ಸಮಾಗಮ, ಪರಿಸರ, ಸಂಗೀತ… ಹೀಗೆ ಅನೇಕ ವಿಷಯಗಳು ಕಣ್ಣಿಗೆ ಬೀಳುತ್ತವೆ. ಕಿವಿಗೆ ಕೇಳಿಸುತ್ತವೆ. ಚೊಚ್ಚಲ ಸಿನಿಮಾ ಆಗಿರುವುದರಿಂದ ಸಾಕಷ್ಟು ಶ್ರಮ-ಶ್ರದ್ಧೆ ವಹಿಸಿರುವುದು ಪ್ರತಿ ಫ್ರೇಮ್‌ನಲ್ಲೂ ಕಾಣಸಿಗುವಂತೆ ಮಾಡಿದ್ದಾರೆ ಯುವ ನಿರ್ದೇಶಕ ಹರ್ಷಪ್ರಿಯ.
ಒಂದು ಸಿನಿಮಾದಲ್ಲೇ ಎಲ್ಲ ಅಂಶಗಳನ್ನೂ ದಾಖಲಿಸಬೇಕು ಎಂಬ ತುಡಿತ ಎದ್ದು ಕಾಣುತ್ತದೆ. ಹೀಗಾಗಿ ಸಸ್ಪೆನ್ಸ್-ಥ್ರಿಲ್ಲರ್, ಪ್ರೀತಿ, ಮಮತೆ… ಸಕಲವೂ ಉಂಟು. ಕಿರುತೆರೆಯಲ್ಲಿ ಸಾಕಷ್ಟು ಅನುಭವವಿರುವ ಹರ್ಷಪ್ರಿಯ, ಸಿನಿಮಾ ಶೈಲಿಗೆ ಒಗ್ಗಿಸುವಲ್ಲಿ ಕೊಂಚ ತಡವರಿಸಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ಇಡೀ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬರಲು ಸಾಕಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಗಮನಿಸಬಹುದು.
ಪ್ಯಾರಲಲ್ ಲೈಫ್, ಡಿಐಡಿ (ಡಿಸೋಸಿಯೇಟಿವ್ ಐಡೆಂಟಿಟಿ ಡಿಸಾರ್ಡರ್) ಎಂಬ ವಿರಳ ಕಥೆಗೆ ಸರಳವಾಗಿ ತೆರೆಯ ದಾಟಿಸಲು ಯತ್ನಿಸಿದ್ದಾರೆ ನಿರ್ದೇಶಕ. ಚಿತ್ರಕಥೆಯ ಮೇಲೆ ಮತ್ತಷ್ಟು ಕಾರ್ಯ ನಿರ್ವಹಿಸಿದ್ದರೆ ಹಾಗೂ ಕಥೆಯ ಓಘದ ಬಗ್ಗೆ ಚಿಂತಿಸಿದ್ದರೆ ‘ಹೆಜ್ಜಾರು’ ಹಾದಿಯ ಪಯಣ ಮತ್ತಷ್ಟು ಸುಖಕರವಾಗಿರುವ ಸಾಧ್ಯತೆಗಳಿದ್ದವು. ಅದಾಗ್ಯೂ ‘ನೋಡಿಸಿಕೊಂಡು’ ಹೋಗುವಂಥ ಅಂಶಗಳು ಚಿತ್ರದಲ್ಲಿ ಸಾಕಷ್ಟಿವೆ.
೧೯೬೫ ರಿಂದ ಶುರುವಾಗುವ ಮೊದಲ ಕಥೆಯಿಂದ ಹಿಡಿದು ಪ್ರಸ್ತುತ ಕಾಲಘಟ್ಟದವರೆಗೂ ಸಿನಿಮಾ ಸಾಗುತ್ತದೆ. ಅದನ್ನು ಮೂರು ವಿಭಾಗವಾಗಿ ವಿಂಗಡಿಸಲಾಗಿದ್ದು, ಕೊಲೆ, ಅಪಘಾತ, ತನಿಖೆ, ಪ್ರೀತಿ, ಸಸ್ಪೆನ್ಸ್… ಹೀಗೆ ಚಿತ್ರಕಥೆಯಲ್ಲಿ ಆಗಾಗ ಟ್ವಿಸ್ಟ್ ಕೊಡುತ್ತಾ ಸಾಗುವಂತೆ ಮಾಡಲಾಗಿದೆ.
ಭಗತ್ ಆಳ್ವ, ಶ್ವೇತಾ ಲಿಯೋನಿಲ್ಲಾ, ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಕೃಷ್ಣ, ಅರುಣಾ ಬಾಲರಾಜ್ ಸೇರಿದಂತೆ ಅನೇಕ ಪಾತ್ರಧಾರಿಗಳು ತಮ್ಮ ನಟನೆಯ ಮೂಲಕವೇ ಹಿಡಿದಿಟ್ಟುಕೊಳ್ಳುತ್ತಾರೆ.
ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಮರ್ ಗೌಡ ಕ್ಯಾಮೆರಾ ಕೈಚಳಕ ಸೇರಿದಂತೆ ತಾಂತ್ರಿಕವಾಗಿಯೂ ‘ಹೆಜ್ಜಾರು’ ಗಮನ ಸೆಳೆಯುತ್ತದೆ.