ಮೂರು ಕ್ಷೇತ್ರದಲ್ಲಿ ನಾವು ಗೆದ್ದರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ?
ಹಾವೇರಿ(ಶಿಗ್ಗಾವಿ): ಉಪ ಚುನಾವಣೆಯಲ್ಲಿ ಶಿಗ್ಗಾವಿ ಸೇರಿದಂತೆ ಮೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರವಾದ ಗಾಳಿ ಇದೆ. ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ಇಂದು ಹುಲಗೂರು, ತಡಸ್ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಚುನಾವಣಾ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ 50,000 ಮತಗಳ ಅಂತರದಿಂದ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವವೋ ಭರತ್ ಬೊಮ್ಮಾಯಿ ಗೆಲುವು ಅಷ್ಟೇ ಸತ್ಯ ಎಂದರು.
ಈ ಉಪ ಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರದಲ್ಲಿ ಗೆಲ್ಲಲಿದೆ. ಮೂರು ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ ಎಂದು ಪ್ರಶ್ನಿಸಿದರು. ಮೂರು ಕ್ಷೇತ್ರದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಎಲ್ಲ ಕಡೆ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಗಾಳಿ ಬೀಸುತ್ತಿದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಕೇಂದ್ರದ ಕಿಸಾನ್ ಸಮ್ಮಾನ ಯೋಜನೆ ಜೊತೆಯಲ್ಲಿ ನಾನು 4,000 ರೂ. ಕೊಡುತ್ತಿದ್ದೆ. ಅದನ್ನು ಯಾಕೆ ನಿಲ್ಲಿಸಿದ್ದೀರಿ ಹೇಳಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಯಿತು. ಇದುವರೆಗೂ ಒಂದು ಕಿಲೋ ಮೀಟರ್ ರಸ್ತೆ ಮಾಡಿದ್ದೀರಾ, ಒಂದೇ ಒಂದು ಗುಂಡಿ ಮುಚ್ಚಿಲ್ಲ. ನಿಮ್ಮ ರಾಜಕೀಯ ದೊಂಬರಾಟ ಉಪ ಚುನಾವಣೆ ಮುಗಿದ ಮೇಲೆ ಕೊನೆಯಾಗಲಿದೆ ಎಂದರು.