ಮೂರು ವರ್ಷಗಳಲ್ಲಿ 3 ಸಾವಿರ ಪಬ್ಲಿಕ್ ಶಾಲೆ
ಪ್ರತಿ ಎರಡು ಗ್ರಾಮ ಪಂಚಾಯಿತಿಗೆ ಒಂದರಂತೆ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುತ್ತಿದ್ದು, ಈ ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಎರಡೂ ಮಾಧ್ಯಮಗಳಲ್ಲಿ ಬೋಧನೆ ಇರಲಿದೆ
ಕಲಬುರಗಿ: ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಯ ಭಾಗವಾಗಿ ಬರುವ ಮೂರು ವರ್ಷಗಳಲ್ಲಿ ಹಂತ ಹಂತವಾಗಿ 3000 ಸರ್ಕಾರಿ ಶಾಲೆಗಳನ್ನು ಪಬ್ಲಿಕ್ ಸ್ಕೂಲ್ಗಳನ್ನಾಗಿ ಮಾರ್ಪಡಿಸುವುದಾಗಿ ರಾಜ್ಯದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಗರದ ಕೆ.ಕೆ.ಆರ್.ಡಿ.ಬಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೇವಲ 297 ಪಬ್ಲಿಕ್ ಸ್ಕೂಲ್ ಇದ್ದು, ಪಾಲಕರಿಂದ ಮತ್ತಷ್ಟು ಕೆಪಿಎಸ್ ಶಾಲೆಗಳನ್ನು ತೆರೆಯುವಂತೆ ಒತ್ತಾಯ, ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಬರುವ ಶೈಕ್ಷಣಿಕ ವರ್ಷದಲ್ಲಿ 500 ಶಾಲೆಗಳನ್ನು ಆರಂಭಿಸಲಾಗುವುದು. ಮುಂದೆ ಹಂತಹಂತವಾಗಿ ಮೂರು ವರ್ಷಗಳಲ್ಲಿ ಒಟ್ಟು 3000 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದು ಎಂದರು.
ಇದೇ ರೀತಿ ಬರುವ ಶೈಕ್ಷಣಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 137 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದು. ಬರುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾದರೂ ಆಗಬಹುದು ಎಂದರು. ಪ್ರತಿ ಎರಡು ಗ್ರಾಮ ಪಂಚಾಯಿತಿಗೆ ಒಂದರಂತೆ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುತ್ತಿದ್ದು, ಈ ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಎರಡೂ ಮಾಧ್ಯಮಗಳಲ್ಲಿ ಬೋಧನೆ ಇರಲಿದೆ ಎಂದರು.
ಆದರ್ಶ ಶಾಲೆಗಳಲ್ಲಿ ಪಿಯು ಬೋಧನೆ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇನ್ನು ಮುಂದೆ ಆದರ್ಶ ಶಾಲೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಬೋಧನೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಈ ಶಾಲೆಗಳಲ್ಲಿ 6ರಿಂದ 10ನೇ ತರಗತಿವರೆಗೆ ಮಾತ್ರ ಬೋಧನೆಗೆ ಅವಕಾಶವಿದೆ. ಪಿಯುಸಿ ಹಂತದ ಬೋಧನೆ ಆರಂಭದಿಂದಾಗಿ ಡ್ರಾಪ್ ಔಟ್ ಪ್ರಮಾಣ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬರುವ ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಹಂತಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಇದಕ್ಕೆ ಪೂರಕವಾಗಿ ಈಗಾಗಲೇ 1ರಿಂದ 8ನೇ ತರಗತಿವರೆಗೆ ಮಾತ್ರ ನೀಡುತ್ತಿದ್ದ ಮೊಟ್ಟೆ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೂ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಈಗ ವಾರಕ್ಕೆ ಎರಡು ಬಾರಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಲಾಗುತ್ತಿದೆ. ಇದರ ಜೊತೆಗೆ, ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸ್ಪೆಷಲ್ ಕ್ಲಾಸ್ ನಡೆಸಲು ಸೂಚನೆ: ಸರಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂಬ ನಿಯಮವನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಇದರಿಂದ ಶಾಲಾ ಅವಧಿ ಬಳಿಕ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳಲು ಅನುಕೂಲ ಆಗಲಿದೆ. ಶಿಕ್ಷಕರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಈಗಾಗಲೇ ಮಲೆನಾಡು ಭಾಗದ ಶಾಲೆಗಳಲ್ಲಿ ವಿಶೇಷ ತರಗತಿಗಳು ನಡೆಯುತ್ತಿವೆ ಎಂದರು. ವರ್ಷಕ್ಕೆ ಮೂರು ಬೋರ್ಡ್ ಪರೀಕ್ಷೆ ನಡೆಸುವುದರ ಹಿಂದೆ ವಿದ್ಯಾರ್ಥಿಗಳ ಆತ್ಮಬಲ ಹೆಚ್ಚಿಸುವ ಇರಾದೆಯಿದೆಯೇ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದ ಅವರು, ಫೇಲ್ ಎನ್ನುವ ಪದ ವಿದ್ಯಾರ್ಥಿ ಜೀವನದಲ್ಲಿ ಬರಬಾರದು ಎಂಬ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಸಮಜಾಯಿಷಿ ನೀಡಿದರು.
ಸರಕಾರಿ ಶಾಲಾ ಶಿಕ್ಷಕರಿಗೆ ಉನ್ನತ ಮಟ್ಟದ ತರಬೇತಿ ನೀಡುವ ನಿಟ್ಟಿನಲ್ಲಿ ಅಜೀಂ ಪ್ರೇಮ್ಜಿ ಫೌಂಡೇಷನ್, ಟೊಯೊಟಾ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಸಿಎಸ್ಆರ್ ಫಂಡ್ ಬಳಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಕೆ ಕೆ ಆರ್ ಡಿ ಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯ್ ಸಿಂಗ್, ಶಾಸಕ ಎಂ.ವೈ. ಪಾಟೀಲ್, ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿ ಸುಂದರೇಶ್ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಭವರ್ ಸಿಂಗ್ ಮೀನಾ, ಶಿಕ್ಷಣ ಇಲಾಖೆಯ ಅಪರ ಆಯುಕ್ತ ಆಕಾಶ್ ಇದ್ದರು.