ಮೂರೇ ತಿಂಗಳು ಕಾಯ್ದು ನೋಡಿ…
ಬಾಗಲಕೋಟೆ: ರಾಜ್ಯ ಸರ್ಕಾರದ ಬಗ್ಗೆ ನಾವೇನು ಹೇಳಬೇಕಾಗಿಲ್ಲ ಮೂರು ತಿಂಗಳು ತಡೆದು ನೋಡಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿಯನ್ನು ಖಜ್ಜಿಡೋಣಿ ರೈಲು ನಿಲ್ದಾಣದಲ್ಲಿ ವೀಕ್ಷಿಸಿದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾರ್ಯಕ್ರಮವೊಂದರಲ್ಲಿ ವಿಜಯನಗರ ಜಿಲ್ಲಾಧಿಕಾರಿಯನ್ನು ಸಿಎಂ ಸಿದ್ದರಾಮಯ್ಯ ಅವರು ಕುರ್ಚಿಯಿಂದ ಎಬ್ಬಿಸಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಸರ್ಕಾರದ ಬಗ್ಗೆ ನಾನೇನೂ ಹೇಳಲಾರೆ ಇನ್ನು ಮೂರೇ ತಿಂಗಳು ಕಾಯ್ದು ನೋಡಿ, ನಾನು ಎಲ್ಲರಂತೆ ಮಾತನಾಡುವನಲ್ಲ ಎಂದರು.
ಆಗ ಸರ್ಕಾರಕ್ಕೆ ಮೂರೇ ತಿಂಗಳು ಆಯುಷ್ಯ ಎನ್ನುತ್ತಿದ್ದೀರಾ ಎಂಬ ಮರುಪ್ರಶ್ನೆಗೆ ಉತ್ತರಿಸಿದ ಅವರು ನಾನು ಆ ರೀತಿ ಏನೂ ಹೇಳಿಲ್ಲಪ್ಪ, ನಾನು ಮೂರು ತಿಂಗಳು ಕಾದು ನೋಡಿ ಎನ್ನುತ್ತಿದ್ದೇನೆ. ಜನರೇ ಎಲ್ಲವನ್ನೂ ಹೇಳುತ್ತಿದ್ದಾರೆ ಎಂದು ಗುಟ್ಟಾಗಿ ನುಡಿದರು.
ಸಿದ್ದರಾಮಯ್ಯ ಅವರೊಂದಿಗೆ ನಾನೂ ಸಹ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ, ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಸಿಎಂ ಆಗಿ ಸರ್ಕಾರ ನಡೆಸಿದ ರೀತಿಯಲ್ಲಿ ಈಗಿಲ್ಲ. ಈ ಸರ್ಕಾರದಲ್ಲಿ ಯಾರು ಮುಖ್ಯಮಂತ್ರಿ, ಯಾರು ಮಂತ್ರಿ ಎಂಬುದೇ ಅರ್ಥವಾಗುತ್ತಿಲ್ಲ. ನೀವು ವಿಜಯನಗರ ಡಿಸಿ ಬಗ್ಗೆ ಒಂದು ಉದಾಹರಣೆ ಹೇಳುತ್ತಿದ್ದೀರಿ ಅಂಥ ಉದಾಹರಣೆಗಳು ಸಾಕಷ್ಟು ಇದೆ. ಅಧಿಕಾರಿಗಳು, ಜನರು ಯಾರಿಗೂ ಈ ಸರ್ಕಾರದಲ್ಲಿ ಬೆಲೆ ಇಲ್ಲ. ಈ ಸರ್ಕಾರದ ಬಗ್ಗೆ ಮಾತನಾಡುವುದಕ್ಕೆ ಅಸಹ್ಯವಾಗುತ್ತಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿ ಮಾಡುತ್ತಿರುವ ಅಭಿವೃದ್ಧಿ, ಬದಲಾವಣೆಗಳನ್ನು ನೋಡಿ. ಅವರಿಗೆ ದೇಶದ ಬಗ್ಗೆ ಇರುವ ಕಾಳಜಿ ಇವರಲ್ಲಿ ಶೇ.೧ರಷ್ಟೂ ಕಾಣುತ್ತಿಲ್ಲ ಎಂದು ಹರಿಹಾಯ್ದರು.