ಮೃತ ಮಗನ ಸ್ವತ್ತಿನಲ್ಲಿ ತಾಯಿಯ ಪಾಲು
ಕಾರವಾರ ಕಡಲು ಕಿನಾರೆಯ ಪ್ರಕೃತಿಯ ಮಡಿಲಲ್ಲಿರುವ ಸುಂದರ ನಗರ. ಒಂದು ಕಡೆ ಕಾಳಿ ನದಿ. ಇನ್ನೊಂದು ಕಡೆ ಸುಂದರವಾದ ಪರ್ವತ ಶ್ರೇಣಿ. ನಾನು ಹುಟ್ಟಿ ಬೆಳೆದಿದ್ದು ನಗರದ ಪುಟ್ಟ ಬಡಾವಣೆಯಲ್ಲಿ. ನನ್ನ ತಂದೆ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಮನೆಗೆ ಬೇಕಾಗುವ ದಿನಸಿ ಜೊತೆ ವಿದ್ಯಾರ್ಥಿಗಳಿಗೆ ಪುಸ್ತಕ ನೋಟ್‌ಬುಕ್, ಹುಡುಗಿಯರಿಗೆ, ಮಹಿಳೆಯರಿಗೆ ಬೇಕಾದ ಶೃಂಗಾರ, ಅಲಂಕಾರ ಸ್ಟೇಷನರಿ ವಸ್ತು ಮಾರಾಟ ಮಾಡುತ್ತಾರೆ, ನಾನು ಹುಟ್ಟಿ ಬೆಳೆದಿದ್ದು ಇದೇ ನಗರದಲ್ಲಿ. ಕನ್ನಡ ಮಾಧ್ಯಮದಲ್ಲಿ ೧೦ನೆಯ ತರಗತಿಯವರಿಗೆ ಓದಿದ್ದೇನೆ. ಮನೆಯ ಸುತ್ತಮುತ್ತ ಕೊಂಕಣಿ ಭಾಷಿಕರು ಬಹಳ ಜನ ವಾಸಿಸುತ್ತಾರೆ. ಹೀಗಾಗಿ ಕೊಂಕಣಿ ಭಾಷೆ ನನಗೆ ಪರಿಚಿತ. ತಂದೆ ತಾಯಿ ಕಷ್ಟಪಟ್ಟು ದುಡಿದು ಓದಿಸಿ ನಮಗೆ ಒಳ್ಳೆಯ ಸಂಸ್ಕಾರ ನೀಡಿ ಬೆಳೆಸಿದ್ದಾರೆ. ನನಗೆ ಒಬ್ಬಳು ಅಕ್ಕನಿದ್ದು ಇಲ್ಲೆ ನೆಲೆಸಿರುವ ನಮ್ಮ ಕಡೆಯ ವರನಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ತಮ್ಮನಿಗೆ ಮದುವೆಯಾದ ಹುಡುಗಿಯೂ ನಮ್ಮ ಹಳ್ಳಿಯವಳು. ತಂದೆ ಹಲವಾರು ಕನಸುಗಳನ್ನು ಹೊತ್ತು ಹಲವು ವರ್ಷಗಳ ಹಿಂದೆ ಕಾರವಾರಕ್ಕೆ ಬಂದಿದ್ದಾರೆ. ಕಷ್ಟ ಪಟ್ಟು ಸುಸ್ಥಿತಿಯ ಜೀವನ ನಡೆಸುತ್ತಿದ್ದಾರೆ. ನಮಗೆ ತಂದೆ ಬಿಟ್ಟು ಬಂದ ಹಳ್ಳಿಗೆ ಊರ ದೇವತೆಯ ಜಾತ್ರೆ, ಸಂಬಂಧಿಕರ ಮದುವೆ, ಅಂತ್ಯಕ್ರಿಯೆ ಹೀಗೆ ಹೋಗಿ ಬರುವ ಪ್ರಸಂಗಗಳು ಅನೇಕ. ದೂರದಲ್ಲಿ ನಾವು ಬದುಕುತ್ತಿದ್ದರೂ ನಮ್ಮ ಬೇರುಗಳು ನಮ್ಮ ಹಳ್ಳಿಯ ಸೊಗಡಿನಲ್ಲಿಯೇ ಇವೆ.
ಒಂದು ದಿನ ನಮ್ಮ ತಂದೆ ಒಬ್ಬ ಯುವಕನನ್ನು ಕರೆದುಕೊಂಡು ಮನೆಗೆ ಬಂದನು. ಇವನು ನಮ್ಮ ಊರಿನ ಪಕ್ಕದ ಊರಿನವನು, ನಮ್ಮದೇ ಸಮಾಜದವನು ಎಂದು ಪರಿಚಯಿಸಿದ. ಸ್ಫುರದ್ರೂಪಿ ಅಲ್ಲದಿದ್ದರೂ, ಸದೃಢವಾದ ಗೋದಿ ಬಣ್ಣ ದೇಹದ ಲಕ್ಷಣವಾದ ಮುಖದವನು. ಮೊದಲ ನೋಟಕ್ಕೆ ಅವನಿಗೆ ಫಿದಾ ಆದೆ. ದಿನಕಳೆದಂತೆ ಅವನು ತನ್ನ ತಂದೆ ತಾಯಿಯ ಜೊತೆಗೆ ಜಗಳ ಮಾಡಿಕೊಂಡು ಸುಮಾರು ಐದಾರು ವರ್ಷಗಳ ಹಿಂದೆ ಮನೆ ಬಿಟ್ಟು ಹೊರಟವನು ಕೊನೆಗೆ ಇಲ್ಲಿಗೆ ಬಂದಿದ್ದಾನೆ. ನಮ್ಮ ಅಂಗಡಿಯ ಬೋರ್ಡನ್ನು ನೋಡಿ, ಪ್ರೊಪ್ರೆಟರ್ ನಮ್ಮ ಕಡೆಯವನು ಎಂದು ನಮ್ಮ ತಂದೆಯನ್ನು ಮಾತನಾಡಿಸಿ ಕೆಲಸ ಪಡೆದುಕೊಂಡನು. ಅಂಗಡಿಯಲ್ಲಿ ನಿಷ್ಠೆಯಿಂದ ದುಡಿದನು. ದಿನಕಳೆದಂತೆ ನನಗೆ ಹತ್ತಿರವಾದ. ತಂದೆಯ ಗಮನಕ್ಕೆ ಬಂದು ನಮ್ಮಿಬ್ಬರನ್ನು ವಿಚಾರಿಸಿದ. ಮದುವೆಗೆ ಒಪ್ಪಿಕೊಂಡೆವು. ಪರದೇಶಿಯ ಜೊತೆಗೆ ಲಗ್ನವಾಗಬಾರದು ಎನ್ನುವ ಉದ್ದೇಶದಿಂದ ತಂದೆ ಅವನನ್ನು ಕರೆದುಕೊಂಡು ಅವನ ಊರಿಗೆ ಹೋಗಿ ತಂದೆ ತಾಯಿಯನ್ನು ವಿಚಾರಿಸಿದ. ಹೇಳದೆ ಕೇಳದೆ ಹಲವಾರು ವರ್ಷಗಳ ಹಿಂದೆ ಊರು, ಮನೆ ಬಿಟ್ಟವನು ನಮ್ಮ ಪಾಲಿಗೆ ಸತ್ತು ಹೋಗಿದ್ದಾನೆ ಎಂದು ರಂಪ ಮಾಡಿದರು. ತಂದೆಯೇ ಅವರ ಮನವೊಲಿಸಿದನು. ಅವರ ತೋಟದ ಮನೆಯ ಮುಂದೆ ಕೆಲವೇ ಅತಿಥಿಗಳ ಸಮ್ಮುಖದಲ್ಲಿ ಸರಳವಾಗಿ ಲಗ್ನವಾಯಿತು. ಕಾರವಾರದ ಮನೆಯಲ್ಲಿ ಪುಟ್ಟ ರಿಸೆಪ್ಷನ್ ಮಾಡಿದರು.
ತಂದೆ ನಮಗೆ ಬೇರೆ ಕಡೆ ಮನೆ ಮಾಡಿಕೊಟ್ಟರು. ಗಂಡನಿಗೆ ಬೇರೆ ಖಾಸಗಿ ಸಂಸ್ಥೆಯಲ್ಲಿ ನೌಕರಿ ಹಚ್ಚಿದರು. ಸುಖವಾಗಿ ದಾಂಪತ್ಯ ನಡೆದಿತ್ತು. ನಮ್ಮ ದಾಂಪತ್ಯ ಬಹಳ ದಿನ ಮುಂದುವರಿಯಲಿಲ್ಲ. ಗಂಡ ಹೃದಯಾಘಾತದಿಂದ ಮರಣ ಹೊಂದಿದ. ಅಂತ್ಯಸಂಸ್ಕಾರವನ್ನು ಅವನ ಹಳ್ಳಿಯಲ್ಲಿ ಮಾಡಿದೆವು. ಅತ್ತೆ ಮಾವ ನನ್ನನ್ನು ಮನೆಯಲ್ಲಿ ಇಟ್ಟುಕೊಳ್ಳಲು ಒಪ್ಪಿಕೊಳ್ಳಲಿಲ್ಲ. ನನ್ನ ಒಂಟಿ ಬದುಕು ಕಾರವಾರದ ನನ್ನ ತಂದೆ ಮಾಡಿಕೊಟ್ಟ ಮನೆಯಲ್ಲಿ ಮುಂದುವರಿಯಿತು. ನಮಗೆ ಮಕ್ಕಳು ಆಗಿರಲಿಲ್ಲ. ತಂದೆಗೆ ಹೊರೆ ಆಗದೆ ಸೂಪರ್ ಮಾರ್ಕೆಟ್ ಒಂದರಲ್ಲಿ ನೌಕರಿ ಹಿಡಿದೆ. ನನ್ನ ಗಂಡನ ಮನೆಯವರು ನಾನು ಬದುಕಿದ್ದೇನೆಯೋ, ಸತ್ತಿದ್ದೇನೆಯೋ ಏನೂ ವಿಚಾರಿಸಲಿಲ್ಲ. ಗಂಡನ ಮನೆತನಕ್ಕೆ ಸುಮಾರು ೧೦ ಎಕರೆ ಜಮೀನು, ಮನೆ ಪಿತ್ರಾರ್ಜಿತ ಆಸ್ತಿಗಳಿದ್ದವು. ಇತ್ತೀಚೆಗೆ ನನ್ನ ಮಾವ ನಾನು ಆಸ್ತಿ ಕೇಳಬಹುದು ಎಂದು ತನ್ನ ಇನ್ನೊಬ್ಬ ಮಗನಿಗೆ, ಒಬ್ಬಳೇ ಮಗಳಿಗೆ ಭಾಗ ಮಾಡಿಕೊಡುತ್ತಿರುವುದು ತಿಳಿಯಿತು. ತಂದೆ ನನ್ನನ್ನು ಕರೆದುಕೊಂಡು ಹೋಗಿ ವಿಚಾರಿಸಿದರು. ನೀನು ಯಾರು ನನಗೆ ಗೊತ್ತಿಲ್ಲ ನನಗೆ ಇರುವವನು ಒಬ್ಬನೇ ಮಗ, ನೀನು ನಮ್ಮ ಸೊಸೆಯಲ್ಲ ಅಂತ ದೊಡ್ಡ ರಂಪ ಮಾಡಿದರು. ಮೃತ ಗಂಡನ ಹಿಸ್ಸೆ ಹಕ್ಕಿಗೆ ವಾರಸುದಳು ನಾನೇ. ನನಗೆ ನ್ಯಾಯ ಕೊಡಿಸಿ ಎನ್ನುತ್ತ ತನ್ನ ಬದುಕಿನ ಬುತ್ತಿ ಬಿಚ್ಚಿಟ್ಟಳು.
ತಂದೆ ಮಗಳು ನಮ್ಮ ಹೋಂ ಆಫೀಸಿನಲ್ಲಿ ನನ್ನ ಎದುರಿಗೆ ಕುಳಿತಿದ್ದರು. ಅವಳು ಹೇಳುವ ಸಂಗತಿಗಳನ್ನು ನೋಟ್ ಮಾಡಿದೆ. ದಾಖಲಾತಿಗಳನ್ನು ಪರಿಶೀಲಿಸಿದೆ. ನಿಸ್ಸಂಶಯವಾಗಿ ಆಸ್ತಿಗಳು ಪಿತ್ರಾರ್ಜಿತ ಆಸ್ತಿಗಳು, ಆಸ್ತಿಗಳಲ್ಲಿ ಇವಳ ಗಂಡ ಹಿಸ್ಸೆ ಹೊಂದಿದ್ದಾನೆ. ಗಂಡನ ಹಿಸೆಯಲ್ಲಿ ಹೆಂಡತಿಗೆ ಮಾತ್ರವೇ ಪಾಲು ಇದೇನಾ ಅತ್ತೆಗೂ ಇದೆಯೋ ಅನ್ನುವ ಸೂಕ್ಷ್ಮ ಜಿಜ್ಞಾಸೆಯನ್ನು ಅರುಹಿದೆ. ಪ್ರಯತ್ನಿಸಿ ಅನ್ನುವ ಬೆಂಬಲ ಅಸ್ತçವಾಯಿತು. ಅತ್ತೆ ಮಾವ ಮೈದುನ ನಾದಿನಿಯರ ಮೇಲೆ ಸಮಪಾಲು ವಿಭಾಗ ಮತ್ತು ಪ್ರತ್ಯೇಕ ಸ್ವಾಧೀನ ಕೇಳಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದೆ.
ನ್ಯಾಯಾಲಯದಿಂದ ಪ್ರತಿವಾದಿಯಾರಿಗೆ ಸಮನ್ಸ್ ತಲುಪಿದವು. ವಕೀಲರ ಮುಖಾಂತರ ಹಾಜರಾಗಿ ತಮ್ಮ ತಕರಾರು/ಕೈಫಿಯತ್ ಸಲ್ಲಿಸಿದರು. ವಾದಿ ತಮ್ಮ ಸೊಸೆ ಅಲ್ಲ, ವಾದಿಯ ಗಂಡನೆಂಬುವನು ತಮ್ಮ ಮಗನೇ ಅಲ್ಲ ಎಂದು ಪ್ರತಿವಾದಿಸಿ ದಾವೆಯನ್ನು ವಜಾಗೊಳಿಸಲು ಕೇಳಿಕೊಂಡರು.
ನ್ಯಾಯಾಧೀಶರು ವಾದಿ, ಪ್ರತಿವಾದಿಯರ ಸಂಧಾನಕ್ಕೆ ಪ್ರಯತ್ನಿಸಿದರು. ಪ್ರತಿವಾದಿ ಸಂಧಾನಕ್ಕೆ ಒಪ್ಪಲಿಲ್ಲ.
ಕೇಸಿನ ವಿಚಾರಣೆ ಪ್ರಾರಂಭವಾಯಿತು. ವಾದಿಯ ಮೃತ ಗಂಡ ಪ್ರತಿವಾದಿಯರ ಮನೆತನದ ಮಗನು ಮತ್ತು ತಾನು ಅವನ ಹೆಂಡತಿ ಎಂದು ರುಜುವಾತುಪಡಿಸುವ ಭಾರ ವಾದಿಯ ಹೆಗಲು ಏರಿತು. ವಾದಿಯ ಮೃತ ಗಂಡನ ಶಾಲಾ ದಾಖಲಾತಿ, ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್, ವೋಟರ್ ಕಾರ್ಡ್ ಇತರೆ ದಾಖಲಾತಿಗಳು ದೊರಕಿದವು. ವಾದಿಯ ಸರಕಾರಿ ದಾಖಲಾತಿಗಳು, ಗಂಡ ಮಾಡಿಸಿದ ಇನ್ಸೂರೆನ್ಸ್ನಲ್ಲಿ ಹೆಂಡತಿ ನಾಮಿನಿ ಅಂತ ನಮೂದಿಸಿದ್ದು, ಮದುವೆ, ರಿಸೆಪ್ಷನ್ ಫೋಟೋಗಳು, ಕಾರ್ಡ್ಗಳು ಹೀಗೆ ಲಿಖಿತ ಸಾಕ್ಷಿಗಳು ಸಾಲು ಸಾಲಾಗಿ ದೊರಕಿದವು. ವಾದಿಯ ಮುಖ್ಯ ಪ್ರಮಾಣ ಮುಖ್ಯ ವಿಚಾರಣಾ ಪ್ರಮಾಣ ಪತ್ರವನ್ನು ದಾಖಲೆಗಳೊಂದಿಗೆ ಮಾಡಿಸಿದೆ. ಮದುವೆ, ರಿಸೆಪ್ಷನ್, ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ ಇಬ್ಬರು ಸಾಕ್ಷಿದಾರರನ್ನು ಸಾಕ್ಷೀಕರಿಸಿದೆ. ಪ್ರತಿವಾದಿ ಪರ ವಕೀಲರು ವಾದಿ, ಸಾಕ್ಷಿದಾರರನ್ನು ಸುದೀರ್ಘವಾಗಿ ಪಾಟೀ ಸವಾಲು ಮಾಡಿದರು. ಪ್ರತಿವಾದಿಯರ ಪರವಾಗಿ ವಾದಿಯ ಅತ್ತೆ ಸಾಕ್ಷಿ ನುಡಿದಳು. ಅವಳನ್ನು ಸುದೀರ್ಘವಾಗಿ ಪಾಟೀ ಸವಾಲು ಮಾಡಿದೆ. ಅಲ್ಲಮ್ಮಾ ಒಂಬತ್ತು ತಿಂಗಳು ಹೆತ್ತು ಹೊತ್ತ ಮಗನಿಗೆ ಮಗನು ಅಲ್ಲ ಅಂತಿಯಲ್ಲ ಅನ್ನುವ ಪ್ರಶ್ನೆಗೆ, ಹೇಳದೆ ಕೇಳದೆ ಮನೆ ಬಿಟ್ಟು ಹೋಗಿ ಇವಳನ್ನು ಲಗ್ನವಾಗಿದ್ದಾನೆ ಅದಕ್ಕಾಗಿ ಹೀಗೆ ಹೇಳಿದ್ದೇನೆ ಎಂದು ಒಪ್ಪಿಕೊಂಡಳು. ಮದುವೆಯ, ರಿಸೆಪ್ಷನ್ ಫೋಟೋಗಳಲ್ಲಿ ತನ್ನನ್ನು ಸಂಬಂಧಿಕರನ್ನು ಗುರುತಿಸಿದಳು. ಸಾಕ್ಷಿದಾರರು ಮದುವೆ, ರಿಸೆಪ್ಷನ್ ಫೋಟೋ ಇತರೆ ದಾಖಲೆ ಒಪ್ಪಿಕೊಂಡರು.
ವಾದ ವಿವಾದ: ವಾದಿಯ ಗಂಡ ಪ್ರತಿವಾದಿಯರ ಮಗನು ಮತ್ತು ವಾದಿ ಅವನ ಹೆಂಡತಿ ಎನ್ನುವುದನ್ನು ದಾಖಲೆ ಸಮೇತ ರುಜುವಾತುಪಡಿಸಿದೆ. ತಾಯಿ, ವಾದಿಯ ಗಂಡ ಮಗನೆಂದು ಮತ್ತು ಸಾಕ್ಷಿದಾರರು ಕೂಡ ಒಪ್ಪಿಕೊಂಡ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ಸ್ವತ್ತಿನಲ್ಲಿ ಸಮಪಾಲಿಗೆ ವಾದ ಮಂಡಿಸಿದೆ. ಪ್ರತಿ ವಾದಿ ಪರ ವಕೀಲರು ವಾದ ಮಂಡಿಸಿದೆ.
ನ್ಯಾಯಾಲಯ ತೀರ್ಪು: ನ್ಯಾಯಾಲಯವು ವಾದಿಯರು ಹಾಜರುಪಡಿಸಿದ ಮೌಖಿಕ ಮತ್ತು ಲಿಖಿತ ಸರಕಾರಿ ದಾಖಲಾತಿಗಳು ಮತ್ತು ಪ್ರತಿವಾದಿ ಹಾಗೂ ಸಾಕ್ಷಿದಾರರು ಒಪ್ಪಿಕೊಂಡ ಸಂಗತಿಗಳನ್ನು ಅವಲೋಕಿಸಿ, ವಾದಿಯ ಮೃತ ಗಂಡ ಪ್ರತಿವಾದಿ ಮನೆತನದ ಮಗನು ಇರುತ್ತಾನೆಂದು ವಾದಿಯು ರುಜುವಾತುಪಡಿಸಿದ್ದಾಳೆ ಎಂದು ಅಭಿಪ್ರಾಯ ಪಟ್ಟಿದೆ. ಮೃತ ಗಂಡನಿಗೆ ಅವಿಭಜಿತ ಕುಟುಂಬದಲ್ಲಿ ೧/೫ ಹಿಸ್ಸೆ ಮತ್ತು ತಂದೆ, ತಾಯಿ, ಇನ್ನೊಬ್ಬ ಮಗ, ಮಗಳಿಗೆ ತಲಾ ೧/೫ ಹಿಸ್ಸೆ ಇರುತ್ತದೆ. ಹಿಂದು ಉತ್ತರಾಧಿಕಾರ ಕಾನೂನು ಪ್ರಕಾರ ಯಾವುದೇ ವ್ಯಕ್ತಿ ಮೃತನಾದರೆ ಅವನ ಹೆಂಡತಿ ಮಕ್ಕಳು ಮತ್ತು ತಾಯಿ ಮೊದಲ ದರ್ಜೆ ವಾರಸುದಾರರು ಇರುತ್ತಾರೆ. ಈ ಕೇಸಿನಲ್ಲಿ ವಾದಿ/ಹೆಂಡತಿ ಮತ್ತು ತಾಯಿ ಸಮನಾಗಿ ಮೃತನ ೧/೫ ಹಿಸ್ಸೆಯಲ್ಲಿ ತಲಾ ೧/೨ ಹಿಸ್ಸೆ ಪಾಲು ಹೊಂದಿರುತ್ತಾರೆ ಎಂದು ಅಭಿಪ್ರಾಯಪಟ್ಟು ವಾದಿಗೆ ಮೃತ ಗಂಡನ ೧/೫ ರಲ್ಲಿ ೧/೨ ಹಿಸ್ಸೆ ನೀಡಿ ಡಿಕ್ರಿ ಮತ್ತು ಜಡ್ಜ್ಮೆಂಟ್ ಆದೇಶ ಮಾಡಿತು.
ಹಿಂದು ಉತ್ತರಾಧಿಕಾರದ ಕಾನೂನು ತಾಯಿಯನ್ನು ಮೃತ ಮಗನ ಮೊದಲ ದರ್ಜೆಯ ವಾರಸುದಾರಳೆಂದು ಸ್ಪಷ್ಟ ಪಡಿಸಿದೆ. ಹೆಣ್ಣು ಮಕ್ಕಳಿಗೆ ತವರು ಮನೆಯ ಆಸ್ತಿಗಳಲ್ಲಿ ಸಹೋದರರ ಜೊತೆ ಸಮಪಾಲು, ಗಂಡನ ಮನೆಯಲ್ಲಿ ಮಕ್ಕಳ ಜೊತೆ ಸಮಪಾಲು, ಅದರ ಜೊತೆ ಮೃತ ಮಗನ ಪಾಲಿನಲ್ಲಿ ಅವನ ಹೆಂಡತಿ ಮಕ್ಕಳ ಜೊತೆ ಸಮಪಾಲು ಪಡೆಯುವಳು. ಈ ವಿಷಯದಲ್ಲಿ, ಕಾನೂನಿನ ಬಗ್ಗೆ ಜಿಜ್ಞಾಸೆ ಉಂಟಾಗುವದು ಸಹಜವೇ.