ಮೆಕ್ಕೆಜೋಳ ಸಂಸ್ಕರಣಾ ಘಟಕ ದುರಂತ: ಮೃತ ಕಾರ್ಮಿಕರಿಗೆ ಏಳು ಲಕ್ಷ ಪರಿಹಾರ
ವಿಜಯಪುರ: ಮೆಕ್ಕೆಜೋಳ ಸಂಸ್ಕರಣೆ ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದು, ಮೃತಪಟ್ಟ ಕಾರ್ಮಿಕರ ಕುಟುಂಬದವರಿಗೆ ತಲಾ 7 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು "ವಿಜಯಪುರ ನಗರದ ಹೊರವಲಯದ ಅಲಿಯಾಬಾದ ಕೈಗಾರಿಕೆ ಪ್ರದೇಶದಲ್ಲಿ ರಾಜಗುರು ಮೆಕ್ಕೆಜೋಳ ಸಂಸ್ಕರಣೆ ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದು, ಅವರ ಕುಟುಂಬದವರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ.
ಶೀಘ್ರ ರಕ್ಷಣಾ ಕಾರ್ಯ ಕೈಗೊಂಡರೂ ಸಹ ಬೃಹತ್ ರಾಶಿಯಡಿ ಸಿಲುಕಿದ್ದ ಪರಿಣಾಮ ಅವರನ್ನು ಬದುಕಿಸಲಾಗಲಿಲ್ಲ. ಮೃತಪಟ್ಟ ಕಾರ್ಮಿಕರ ಕುಟುಂಬದವರಿಗೆ ತಲಾ 7 ಲಕ್ಷ ರೂ ಪರಿಹಾರ ನೀಡಲಾಗುವುದು. (ಕಾರ್ಖಾನೆ ಮಾಲೀಕರಿಂದ 5 ಲಕ್ಷ ಹಾಗೂ ಸರ್ಕಾರದಿಂದ 2 ಲಕ್ಷ) ಜೊತೆಗೆ ಮೃತರೆಲ್ಲರೂ ಬಿಹಾರ ರಾಜ್ಯದವರಾಗಿದ್ದು, ಅವರ ಕುಟುಂಬದವರೊಡನೆ ಈಗಾಗಲೆ ಸಂಪರ್ಕದಲ್ಲಿದ್ದು ಮೃತದೇಹಗಳನ್ನು ವಿಮಾನದ ಮೂಲಕ ಪಾಟ್ನಾಗೆ ಸಾಗಿಸಿ ಅಲ್ಲಿಂದ ಅವರ ಮನೆಗಳಿಗೆ ತಲುಪಿಸಲಾಗುವುದು. ರಕ್ಷಣಾ ಕಾರ್ಯದ ಸಂದರ್ಭದಲ್ಲಿ ನಾನು ಸ್ವತಃ ಅಲ್ಲಿದ್ದು, ಪರಿಸ್ಥಿತಿಯು ಕ್ಲಿಷ್ಟವಾಗಿತ್ತು. ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಶ್ರಮಿಸಿದ ನಮ್ಮ ಎಲ್ಲಾ ಎಸ್.ಡಿ.ಆರ್.ಎಫ್., ಎನ್.ಡಿ.ಆರ್.ಎಫ್., ಅಗ್ನಿಶಾಮಕ, ಪೊಲೀಸ್ ಹಾಗೂ ಜಿಲ್ಲಾಡಳಿತ ತಂಡದವರಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ.