For the best experience, open
https://m.samyuktakarnataka.in
on your mobile browser.

ಮೆಡಿಕಲ್ ಮಾಫಿಯಾ ಕರಿನೆರಳು

09:20 PM Aug 23, 2024 IST | Samyukta Karnataka
ಮೆಡಿಕಲ್ ಮಾಫಿಯಾ ಕರಿನೆರಳು

ಚಿತ್ರ: ಸಿ
ನಿರ್ದೇಶನ: ಕಿರಣ್ ಸುಬ್ರಮಣಿ
ನಿರ್ಮಾಣ: ಎಜಿಎಸ್ ಕ್ರಿಯೇಶನ್ಸ್
ತಾರಾಗಣ: ಕಿರಣ್ ಸುಬ್ರಮಣಿ, ಸಾನ್ವಿಕಾ, ಪ್ರಶಾಂತ್ ನಟನ, ಮಜಾಭಾರತ್ ಪಾಟೀಲ್, ಶ್ರೀಧರ ರಾಮ್, ಆರ್ಯ, ಮಧುಮಿತ, ನಿರ್ಮಲ ನಾಧನ್ ಇತರರು.
ರೇಟಿಂಗ್ಸ್: 3

ಜಿ.ಆರ್.ಬಿ

ಆರೋಗ್ಯದಲ್ಲಿ ಏನೇ ವ್ಯತ್ಯಾಸವಾದರೂ ಜನರು ಸೀದಾ ಆಸ್ಪತ್ರೆಗೆ ಧಾವಿಸುತ್ತಾರೆ. ರಸ್ತೆಯಲ್ಲಿ ಅಪಘಾತವಾದರೆ ಮುಲಾಜಿಲ್ಲದೇ ಹತ್ತಿರದ ಆಸ್ಪತ್ರೆಯತ್ತ ಮುಖ ಮಾಡುತ್ತಾರೆ. ಆದರೆ ಕೆಲವು ಆಸ್ಪತ್ರೆಗಳಲ್ಲಿ ನಡೆಯುವ ಮೆಡಿಕಲ್ ಮಾಫಿಯಾದ ಕರಾಳಮುಖವನ್ನು ‘ಸಿ’ ಸಿನಿಮಾದ ಮೂಲಕ ದರ್ಶನ ಮಾಡಿಸಿದ್ದಾರೆ ಯುವ ನಿರ್ದೇಶಕ ಕಿರಣ್ ಸುಬ್ರಮಣಿ.

‘ಸಿ’ ಸಿನಿಮಾದ ಬಹುತೇಕ ಸನ್ನಿವೇಶಗಳು ಅಪಘಾತ, ಆಸ್ಪತ್ರೆ ಹಾಗೂ ಮಧ್ಯಮ ವರ್ಗದ ಕುಟುಂಬದ ಸುತ್ತ ಸುತ್ತುತ್ತವೆ. ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳು ಚಿತ್ರದ ಮೂಲಾಧಾರ. ತಾಂತ್ರಿಕತೆ ಹಾಗೂ ಪಾತ್ರವರ್ಗದ ಕಡೆ ಮತ್ತಷ್ಟು ಗಮನ ಹರಿಸಿದ್ದರೆ ‘ಸಿ’ನಿಮಾ ಮತ್ತಷ್ಟು ಅಚ್ಚುಕಟ್ಟಾಗಿ ಮೂಡಿಬರಲು ಸಹಕಾರಿಯಾಗುತ್ತಿತ್ತು.

ಕಥೆಯ ವಿಷಯಕ್ಕೆ ಬರುವುದಾರೆ, ಕೆಳ ಮಧ್ಯಮ ವರ್ಗದ ಕುಟುಂಬದ ಗಂಡ-ಹೆಂಡತಿ, ಮಗು ಒಟ್ಟಿಗೆ ವಾಹನದಲ್ಲಿ ಹೋಗುತ್ತಿರುವಾಗ ಅಪಘಾತವಾಗುತ್ತದೆ. ಆಗ ಗಂಡ-ಹೆಂಡತಿ ಸಾವಿಗೀಡಾಗುತ್ತಾರೆ. ಅದೃಷ್ಟವಶಾತ್ ಮಗು ಬದುಕುಳಿಯುತ್ತದೆ. ಆದರೆ ತನ್ನ ದೃಷ್ಟಿ ಕಳೆದುಕೊಂಡಿರುತ್ತದೆ. ಇದ್ಯಾವುದರ ಅರಿವಿಲ್ಲದ ಮಗುವಿಗೆ ಆಸರೆಯಾಗಿ ತಂದೆ ಸ್ಥಾನ ತುಂಬುವ ಒಬ್ಬಾತ, ಆ ಮಗುವನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತಿರುತ್ತಾನೆ. ಮಗುವಿಗೆ ದೃಷ್ಟಿಯನ್ನು ಮರಳಿ ತರಲು ಹಗಲು - ರಾತ್ರಿ ಶ್ರಮಿಸುತ್ತಾನೆ. ಇಷ್ಟೆಲ್ಲಾಸಾಹಸಕ್ಕೆ ಮುಂದಾಗುವ ಆತ ಯಾರು? ಅವನಿಗೂ ಮಗುವಿಗೂ ಇರುವ ನಂಟೇನು… ಎಂಬುದೇ ‘ಸಿ’ ಚಿತ್ರದ ಪ್ರಮುಖ ಅಂಶ.

ತೆರೆಯ ಮೇಲೆ ನಾಯಕನಾಗಿ ಹಾಗೂ ತೆರೆಯ ಹಿಂದೆ ನಿರ್ದೇಶಕನಾಗಿ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ ಯುವ ಪ್ರತಿಭೆ ಕಿರಣ್ ಸುಬ್ರಮಣಿ. ಹಾಗೆ ನೋಡಿದರೆ ಮೊದಲ ಪ್ರಯತ್ನದಲ್ಲೇ ನಿರ್ದೇಶಕನಾಗಿ ಭರವಸೆ ಮೂಡಿಸಿದ್ದಾರೆ. ನಟನೆಯಲ್ಲಿ ಮತ್ತಷ್ಟು ಪಳಗಬೇಕಿದೆ. ಇನ್ನು ದೃಷ್ಟಿಯಿಲ್ಲದ ಹುಡುಗಿಯಾಗಿ ಬಾಲನಟಿ ಸಾನ್ವಿಕಾ ಗಮನ ಸೆಳೆಯುತ್ತಾರೆ. ಉಳಿದಂತೆ ಪ್ರಶಾಂತ್ ನಟನ, ಶ್ರೀಧರ್ ರಾಮ್, ಮಧುಮಿತಾ, ನಿರ್ಮಲಾ, ಆರ್ಯ ಮೊದಲಾದವರು ಪಾತ್ರಕ್ಕೆ ಜೀವ ತುಂಬಿಸಲು ಸಾಕಷ್ಟು ಶ್ರಮ ಹಾಕಿದ್ದಾರೆ. ಒಂದೆರಡು ಹಾಡುಗಳು ಅಲ್ಲಲ್ಲಿ ಗುನುಗುವಂತೆ ಮಾಡುವಲ್ಲಿ ಸಂಗೀತ ನಿರ್ದೇಶಕ ಎ.ಬಿ.ಎಂ ಸಫಲರಾಗಿದ್ದಾರೆ. ನವೀನ್ ಸೂರ್ಯ ಛಾಯಾಗ್ರಹಣ ಮತ್ತು ನವೀನ್ ಸುಂದರ್ ರಾವ್ ಸಂಕಲನ ಸಿನಿಮಾವನ್ನು ಮತ್ತಷ್ಟು ಅಂದಗೊಳಿಸಲು ಸಹಕಾರಿಯಾಗಿದೆ.

Tags :