ಮೆಸೆಂಜೆರ್ ಹ್ಯಾಕ್: ಆರೋಪಿಗೆ ಜಾಮೀನು
ಮಂಗಳೂರು: ಯುವತಿಯ ಮೆಸೆಂಜೆರ್ ಹ್ಯಾಕ್ ಮಾಡಿದ ಪ್ರಕರಣ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಯುವಕ ಶಾರಿಕ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಶಾರಿಕ್ ತನ್ನ ಮನೆಯ ಸಮೀಪದದಲ್ಲಿ ಅಂಗಡಿ ಹೊಂದಿದ್ದ ಯುವತಿಯ ಫೇಸ್‌ಬುಕ್ ಹ್ಯಾಕ್ ಮಾಡಿ ಆಕೆಯ ಅಣ್ಣ ಮತ್ತು ಆತನ ಸ್ನೇಹಿತನಿಗೆ ಅಶ್ಲೀಲ ಮತ್ತು ಬೆದರಿಕೆ ಸಂದೇಶವನ್ನು ರವಾನಿಸಿದ್ದ ಎಂಬ ಆರೋಪಿವಿತ್ತು. ಈ ಸಂಬಂಧ ಯುವತಿ ಅ. ೨೨ರಂದು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಳು. ದೂರು ಆಧರಿಸಿ ಯುವಕನನ್ನು ಠಾಣೆಗೆ ಕರೆಸಿದ್ದ ಪೊಲೀಸರು ವಿಚಾರಣೆ ನಡೆಸಿ ಅ. ೨೩ರಂದು ಹಿಂದೆ ಕಳುಹಿಸಿದ್ದರು. ಆ ಬಳಿಕ ಮತ್ತೆ ಅದೇ ರೀತಿಯ ಸಂದೇಶಗಳು ಬರಲಾರಂಭಿಸಿದವು ಎನ್ನಲಾಗಿದ್ದು, ಇದರಿಂದ ಆತಂಕಕ್ಕೀಡಾದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಯುವತಿ ಚೇತರಿಸಿಕೊಂಡು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ.
ಆಕೆ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಆರೋಪಿ ಶಾರಿಕ್‌ನ ವಿರುದ್ಧ ಭಾರತೀಯ ದಂಡ ಸಂಹಿತೆ ೭೮(೧)(i), ೩೫೧(೧ & ೨) ಮತ್ತು ೩(೫) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದ ಸುರತ್ಕಲ್ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿವಾರಣೆ ನಡೆಸಿದ ನ್ಯಾಯಾಲಯ ಆತನಿಗೆ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಪ್ರಕರಣ ಸಂಬಂಧ ಮಂಗಳವಾರ ವಿಚಾರಣೆ ನಡೆಸಿದ ಮಂಗಳೂರು ೨ನೇ ಜೆಎಂಎಫ್‌ಸಿ ನ್ಯಾಯಾಲಯ ಶಾರಿಕ್‌ಗೆ ಜಾಮೀನು ಮಂಜೂರು ಮಾಡಿದೆ.