For the best experience, open
https://m.samyuktakarnataka.in
on your mobile browser.

ಮೇಕ್ ಇನ್ ಇಂಡಿಯಾಗೆ ಹತ್ತು ವರ್ಷದ ಸಂಭ್ರಮ

03:36 AM Sep 27, 2024 IST | Samyukta Karnataka
ಮೇಕ್ ಇನ್ ಇಂಡಿಯಾಗೆ ಹತ್ತು ವರ್ಷದ ಸಂಭ್ರಮ

ಮೇಕ್ ಇನ್ ಇಂಡಿಯಾ ಉಪಕ್ರಮದ ಭಾರಿ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ವಂದನೆ ಸಲ್ಲಿಸಲು ಇದೊಂದು ಅವಕಾಶವಾಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಪ್ರವರ್ತಕ, ದಾರ್ಶನಿಕ ಮತ್ತು ನವೋದ್ಯಮಿಗಳಾಗಿದ್ದು, ನಿಮ್ಮ ಅವಿರತ ಪ್ರಯತ್ನಗಳು ಮೇಕ್ ಇನ್ ಇಂಡಿಯಾ' ಯಶಸ್ಸಿಗೆ ಉತ್ತೇಜನ ನೀಡಿವೆ, ಆ ಮೂಲಕ ನಮ್ಮ ದೇಶವನ್ನು ಜಾಗತಿಕ ಗಮನ ಮತ್ತು ಕುತೂಹಲದ ಕೇಂದ್ರಬಿಂದುವನ್ನಾಗಿ ಮಾಡಿವೆ. ಅವಿಶ್ರಾಂತ ಸ್ವಭಾವದ ಈ ಸಾಮೂಹಿಕ ಸ್ಫೂರ್ತಿಯೇ ಕನಸನ್ನು ಶಕ್ತಿಯುತ ಆಂದೋಲನವನ್ನಾಗಿ ಪರಿವರ್ತಿಸಿದೆ.ಮೇಕ್ ಇನ್ ಇಂಡಿಯಾ'ದ ಪರಿಣಾಮವು ಭಾರತ ಅಜೇಯ ಎಂಬುದನ್ನು ತೋರಿಸುತ್ತದೆ. ಈ ಪ್ರಯತ್ನವು ಹತ್ತು ವರ್ಷಗಳ ಹಿಂದೆ ನಮ್ಮಂತಹ ಪ್ರತಿಭಾವಂತ ರಾಷ್ಟ್ರವು ಆಮದುದಾರನಾಗಿ ಮಾತ್ರ ಇರದೆ ರಫ್ತುದಾರನೂ ಆಗುವುದನ್ನು ಖಚಿತಪಡಿಸಿಕೊಳ್ಳಲು ಉತ್ಪಾದನೆಯಲ್ಲಿ ಭಾರತದ ಪ್ರಗತಿಯನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಪ್ರಾರಂಭವಾಯಿತು.
ಕಳೆದ ದಶಕದಲ್ಲಿ ನಾವು ಕನಸಿನಲ್ಲಿಯೂ ಯೋಚಿಸದ ಕ್ಷೇತ್ರಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ `ಮೇಕ್ ಇನ್ ಇಂಡಿಯಾ' ಛಾಪು ಗೋಚರಿಸುತ್ತಿದೆ.
ಮೊಬೈಲ್ ತಯಾರಿಕೆ… ಈಗ ಮೊಬೈಲ್ ಫೋನ್‌ಗಳು ಎಷ್ಟು ಪ್ರಾಮುಖ್ಯತೆ ಪಡೆದಿವೆ ಎಂಬುದು ಗೊತ್ತಿದೆ, ಆದರೆ ಆಶ್ಚರ್ಯಕರ ವಿಷಯವೆಂದರೆ ೨೦೧೪ರಲ್ಲಿ ಇಡೀ ದೇಶದಲ್ಲಿ ಕೇವಲ ಎರಡು ಮೊಬೈಲ್ ತಯಾರಿಕಾ ಘಟಕಗಳನ್ನು ಹೊಂದಿದ್ದೆವು. ಇಂದು, ಈ ಸಂಖ್ಯೆ ೨೦೦ಕ್ಕಿಂತ ಹೆಚ್ಚಾಗಿದೆ. ನಮ್ಮ ಮೊಬೈಲ್ ರಫ್ತು ೧,೫೫೬ ಕೋಟಿಯಿಂದ ೧.೨ ಲಕ್ಷ ಕೋಟಿಗೆ ಭಾರಿ ಏರಿಕೆ ಕಂಡಿದೆ, ಬೆರಗುಗೊಳಿಸುವ ಶೇ. ೭೫೦೦ ರಷ್ಟು ಬೆಳವಣಿಗೆ! ಇಂದು, ಭಾರತದಲ್ಲಿ ಬಳಸಲಾಗುವ ಶೇ. ೯೯ರಷ್ಟು ಮೊಬೈಲ್ ಫೋನ್‌ಗಳು ಮೇಡ್ ಇನ್ ಇಂಡಿಯಾ ಆಗಿವೆ. ನಾವು ವಿಶ್ವಾದ್ಯಂತ ಎರಡನೇ ಅತಿದೊಡ್ಡ ಮೊಬೈಲ್ ತಯಾರಕರಾಗಿದ್ದೇವೆ.
ನಮ್ಮ ಉಕ್ಕು ಉದ್ಯಮವನ್ನು ನೋಡಿ ನಾವು ಸಿದ್ಧಪಡಿಸಿದ ಉಕ್ಕಿನ ನಿವ್ವಳ ರಫ್ತುದಾರರಾಗಿದ್ದೇವೆ ಮತ್ತು ೨೦೧೪ ರಿಂದ ಉತ್ಪಾದನೆಯು ಶೇ. ೫೦ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
ನಮ್ಮ ಸೆಮಿಕಂಡಕ್ಟರ್ ತಯಾರಿಕಾ ವಲಯವು ೧.೫ ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಹೂಡಿಕೆಯನ್ನು ಆಕರ್ಷಿಸಿದೆ, ಐದು ಘಟಕಗಳನ್ನು ಅನುಮೋದಿಸಲಾಗಿದೆ, ಅವು ದಿನಕ್ಕೆ ೭ ಕೋಟಿಗೂ ಹೆಚ್ಚು ಚಿಪ್‌ಗಳ ಒಟ್ಟು ಸಾಮರ್ಥ್ಯವನ್ನು ಹೊಂದಿರುತ್ತವೆ!
ನಾವು ಜಾಗತಿಕವಾಗಿ ನವೀಕರಿಸಬಹುದಾದ ಇಂಧನದ ನಾಲ್ಕನೇ ಅತಿದೊಡ್ಡ ಉತ್ಪಾದಕರಾಗಿದ್ದೇವೆ, ಕೇವಲ ಒಂದು ದಶಕದಲ್ಲಿ ಇದರ ಸಾಮರ್ಥ್ಯವು ಶೇ. ೪೦೦ರಷ್ಟು ಹೆಚ್ಚಾಗಿದೆ. ೨೦೧೪ರಲ್ಲಿ ಬಹುತೇಕ ಅಸ್ತಿತ್ವದಲ್ಲಿಲ್ಲದ ನಮ್ಮ ಎಲೆಕ್ಟ್ರಿಕ್ ವಾಹನ ಉದ್ಯಮವು ಈಗ ೩ ಬಿಲಿಯನ್ ಮೌಲ್ಯದ್ದಾಗಿದೆ. ರಕ್ಷಣಾ ಉತ್ಪಾದನಾ ರಫ್ತು ೧,೦೦೦ ಕೋಟಿಗಳಿಂದ ೨೧,೦೦೦ ಕೋಟಿಗೆ ಏರಿಕೆಯಾಗಿದ್ದು, ೮೫ಕ್ಕೂ ಹೆಚ್ಚು ದೇಶಗಳನ್ನು ತಲುಪಿದೆ.
ಇಂದಿನ ಭಾರತದ ಅನೇಕ ಗಣ್ಯ ವ್ಯಕ್ತಿಗಳು ವಂದೇ ಭಾರತ್ ರೈಲುಗಳು, ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್‌ಗಳ-ಇವೆಲ್ಲದರ ಮೇಕ್ ಇನ್ ಇಂಡಿಯಾ ಲೇಬಲ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ಸ್‌ನಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ, ಇದು ಭಾರತೀಯ ಪ್ರತಿಭೆ ಮತ್ತು ಗುಣಮಟ್ಟವನ್ನು ಪ್ರತಿನಿಧಿಸುತ್ತದೆ.
ಮೇಕ್ ಇನ್ ಇಂಡಿಯಾ ಉಪಕ್ರಮವು ವಿಶೇಷವಾಗಿದೆ, ಏಕೆಂದರೆ ಇದು ಬಡವರಿಗೆ ದೊಡ್ಡ ಕನಸುಗಳಿಗೆ ಮತ್ತು ಅವರ ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡಿದೆ.
ಇದು ಅವರಿಗೆ ತಾವೂ ಸಂಪತ್ತಿನ ಸೃಷ್ಟಿಕರ್ತರಾಗಬಹುದು ಎಂಬ ವಿಶ್ವಾಸವನ್ನು ನೀಡಿದೆ. ಎಂಎಸ್‌ಎಂಇ ವಲಯದ ಮೇಲಿನ ಪರಿಣಾಮವು ಅಷ್ಟೇ ಗಮನಾರ್ಹವಾಗಿದೆ.
ಒಂದು ಸರ್ಕಾರವಾಗಿ, ಈ ಮನೋಭಾವವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ದಶಕದ ಸುದೀರ್ಘ ದಾಖಲೆಯು ಸ್ವತಃ ಇದನ್ನೇ ಹೇಳುತ್ತದೆ. ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್‌ಐ) ಪರಿವರ್ತಕ ಯೋಜನೆಯಾಗಿದೆ. ಸಾವಿರಾರು ಕೋಟಿಗಳ ಹೂಡಿಕೆಗಳನ್ನು ಸಕ್ರಿಯಗೊಳಿಸುತ್ತಿದೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ.
ಹೀಗಾಗಿ ಆವೇಗ ಸ್ಪಷ್ಟವಾಗಿ ಭಾರತದ ಪರವಾಗಿದೆ. ಜಾಗತಿಕ ಸಾಂಕ್ರಾಮಿಕದಂತಹ ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದ್ದರೂ, ಭಾರತವು ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಉಳಿದಿದೆ. ಇಂದು ನಮ್ಮನ್ನು ಜಾಗತಿಕ ಬೆಳವಣಿಗೆಯ ಚಾಲಕರನ್ನಾಗಿ ನೋಡಲಾಗುತ್ತಿದೆ. ಮೇಕ್ ಇನ್ ಇಂಡಿಯಾವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬೆಂಬಲಿಸುವಂತೆ ಯುವ ಸ್ನೇಹಿತರಿಗೆ ಕರೆ ನೀಡುತ್ತೇನೆ. ನಾವೆಲ್ಲರೂ ಶ್ರೇಷ್ಠತೆಗಾಗಿ ಶ್ರಮಿಸಬೇಕು. ಗುಣಮಟ್ಟವನ್ನು ಒದಗಿಸುವುದು ನಮ್ಮ ಬದ್ಧತೆಯಾಗಬೇಕು. ಶೂನ್ಯ ದೋಷ ನಮ್ಮ ಮಂತ್ರವಾಗಬೇಕು.
ನಾವು ಒಟ್ಟಾಗಿ, ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಮಾತ್ರವಲ್ಲದೇ ಜಗತ್ತಿಗೆ ಉತ್ಪಾದನೆ ಮತ್ತು ನಾವೀನ್ಯತೆಯ ಶಕ್ತಿಕೇಂದ್ರವಾಗುವ ಭಾರತ ನಿರ್ಮಾಣವನ್ನು ಮುಂದುವರಿಸೋಣ.