For the best experience, open
https://m.samyuktakarnataka.in
on your mobile browser.

ಮೇಕ್ ಇನ್ ಇಂಡಿಯಾ ಸಿಂಹಾವಲೋಕನ ನಿರಾಸೆ ಇಲ್ಲ

02:28 AM Sep 27, 2024 IST | Samyukta Karnataka
ಮೇಕ್ ಇನ್ ಇಂಡಿಯಾ ಸಿಂಹಾವಲೋಕನ ನಿರಾಸೆ ಇಲ್ಲ

ಮೇಕ್ ಇನ್ ಇಂಡಿಯಾ ಯೋಜನೆಗೆ ೧೦ ವರ್ಷ ಮುಕ್ತಾಯಗೊಂಡಿದೆ. ಒಮ್ಮೆ ಹಿಂತಿರುಗಿ ನೋಡಿದರೆ ಕೆಲವು ಕ್ಷೇತ್ರಗಳಲ್ಲಿ ಉತ್ತಮ ಬೆಳವಣಿಗೆ ಆಗಿದೆ. ಮತ್ತೆ ಕೆಲವು ಕ್ಷೇತ್ರಗಳಲ್ಲಿ ಇನ್ನೂ ಸಾಗಬೇಕಾದ ದಾರಿ ಬಹಳ ಇದೆ. ಇದುವರೆಗೆ ನಮ್ಮದು ಈ ವಸ್ತು ಎಂದು ಅಭಿಮಾನದಿಂದ ಹೇಳಿಕೊಳ್ಳಲು ಯಾವುದೇ ಇರಲಿಲ್ಲ. ಉತ್ಪಾದನೆಗಿಂತ ಆಮದು ಹೆಚ್ಚಾಗಿತ್ತು. ವಿದೇಶಿ ವಸ್ತುಗಳನ್ನು ಬಳಸುವುದೇ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಈಗ ಕಾಲ ಬದಲಾಗಿದೆ. ನಮ್ಮ ಯುವಕರು ಸ್ಟಾರ್ಟ್ ಅಪ್‌ಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಅವರು ಹೊಸ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಬೇಕಾದ ಆರ್ಥಿಕ ಬೆಂಬಲ ನೀಡಲು ಸರ್ಕಾರ ಮುಂದೆ ಬಂದಿರುವುದು ಹಲವು ಹೊಸ ಆವಿಷ್ಕಾರಗಳಿಗೆ ಆಸರೆ ನೀಡುವ ಹಂತ ತಲುಪಿದೆ.
ಮೊಬೈಲ್ ತಯಾರಿಕೆಯಲ್ಲಿ ನಾವು ದಾಪುಗಾಲು ಹಾಕಿದ್ದೇವೆ. ಹತ್ತು ವರ್ಷಗಳ ಹಿಂದೆ ಕೇವಲ ೨ ಘಟಕಗಳು ನಮ್ಮಲ್ಲಿ ಮೊಬೈಲ್ ತಯಾರಿಸುತ್ತಿದ್ದವು. ಈಗ ೨೦೦ ಘಟಕಗಳು ತಲೆ ಎತ್ತಿವೆ. ನಮ್ಮ ರಫ್ತು ೧.೨ಲಕ್ಷ ಕೋಟಿ ರೂ. ತಲುಪಿದೆ. ಮೊಬೈಲ್ ಬಿಡಿಭಾಗಗಳು ಈಗಲೂ ಬೇರೆ ಕಡೆಯಿಂದ ಬರುತ್ತಿವೆ. ಅವುಗಳ ಜೋಡಣೆ ಇಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಿಡಿಭಾಗಗಳು ಇಲ್ಲೇ ತಯಾರಾಗಬೇಕು. ಆಗ ಶೇಕಡ ೧೦೦ ರಷ್ಟು ಮೇಕ್ ಇನ್ ಇಂಡಿಯಾ ಆಗುತ್ತದೆ. ವಂದೇ ಭಾರತ ವಿದ್ಯುತ್ ರೈಲ್ವೆ ಎಂಜಿನ್ ನಮ್ಮ ಕೊಡುಗೆ. ಅದೇರೀತಿ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಂದೆ ಇದ್ದೇವೆ. ರಕ್ಷಣಾ ವಲಯದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಇದರಲ್ಲಿ ರಹಸ್ಯ ಕಾಪಾಡುವುದೇ ದೊಡ್ಡ ಕೆಲಸವಾಗಿತ್ತು. ಈಗ ಸಮರೋದ್ಯಮ ದೊಡ್ಡದಾಗಿ ಬೆಳೆದಿದೆ. ಬೇರೆ ದೇಶಗಳಿಗೆ ಬೇಕಾದ ರಕ್ಷಣಾ ಉಪಕರಣಗಳನ್ನು ತಯಾರಿಸುವುದು ಈಗ ರಹಸ್ಯವಾಗಿ ಉಳಿದಿಲ್ಲ. ಇದರಲ್ಲಿ ನಮಗೆ ಇಸ್ರೇಲ್ ನಮಗೆ ಸಾಕಷ್ಟು ಪಾಠ ಕಲಿಸಿದೆ. ನಮ್ಮ ಸುತ್ತಲೂ ವೈರಿಗಳೇ ಇರುವಾಗ ನಮ್ಮ ರಕ್ಷಣೆಗೆ ಬೇಕಾದ ಎಲ್ಲ ವಸ್ತುಗಳನ್ನು ನಾವೇ ತಯಾರಿಸಿಕೊಳ್ಳುವ ಹಂತ ತಲುಪಬೇಕಿದೆ. ಈಗ ಮೇಕ್ ಇನ್ ಇಂಡಿಯಾದಿಂದ ದೇಶಾದ್ಯಂತ ಉತ್ಪಾದನೆ ಕ್ಷೇತ್ರದಲ್ಲಿ ಚಲನಶೀಲತೆ ಮೂಡಿದೆ. ಉತ್ಪಾದನೆ ಎಂದರೆ ಶ್ರೀಮಂತರ ಸೊತ್ತು ಎಂದಾಗಿತ್ತು. ಈಗ ಎಂಜಿನಿಯರ್‌ಗಳು, ವಿಜ್ಞಾನಿಗಳು ತಮ್ಮದೇ ಆದ ಕಂಪನಿ ತೆರೆಯಲು ಮುಂದಾಗುತ್ತಿದ್ದಾರೆ. ಅದರಲ್ಲೂ ಐಟಿ ಬಿಟಿಯಲ್ಲಿರುವ ಯುವ ಪಡೆ ಹೊಸತನ್ನು ಸೃಷ್ಟಿಸಲು ಹಾತೊರೆಯುತ್ತಿರುವುದು ಉತ್ತಮ ಬೆಳೆವಣಿಗೆ. ಆದರೂ ಸರ್ಕಾರದ ಉತ್ತೇಜನಕ್ಕೆ ಅನುಗುಣವಾಗಿ ಉದ್ಯಮಕ್ಷೇತ್ರ ಮಾನಸಿಕವಾಗಿ ಸಿದ್ಧಗೊಳ್ಳುತ್ತಿಲ್ಲ. ವಿದೇಶಗಳಲ್ಲಿ ಯುವಕರು ಹೊಸ ವಸ್ತುಗಳನ್ನು ತಯಾರಿಸುವಾಗ ನಷ್ಟಕ್ಕೆ ಹೆದರುವುದಿಲ್ಲ. ನಮ್ಮಲ್ಲಿ ಯುವಕರಿಗೆ ನಷ್ಟವಾದರೂ ಅದನ್ನು ಎದುರಿಸಲು ಬೇಕಾದ ಆಸರೆ ನೀಡುವ ಸಂಸ್ಥೆಗಳು ಬಹಳ ಕಡಿಮೆ. ಇದರಿಂದ ಯುವಕರಲ್ಲಿ ಹಿಂಜರಿಕೆ ಕಂಡು ಬರುವುದು ಸಹಜ.
ಮೇಕ್ ಇನ್ ಇಂಡಿಯಾ ಈಗಿನ ಕಲ್ಪನೆಯಾಗಿ ಕಂಡರೂ ಹಿಂದೆ ಇದು ಸ್ವಲ್ಪಮಟ್ಟಿಗೆ ಅನುಷ್ಠಾನಕ್ಕೆ ಬಂದಿತ್ತು. ನಮ್ಮ ಎಚ್‌ಎಂಟಿ ಗಡಿಯಾರ, ಎನ್‌ಜಿಇಎಫ್ ಮೋಟಾರುಗಳು ವಿಶ್ವಖ್ಯಾತಿ ಪಡೆದಿದ್ದವು. ಕಾಲಕ್ರಮೇಣ ಇವು ತಮ್ಮ ಅಸ್ತಿತ್ವ ಕಳೆದುಕೊಂಡವು. ಆ ಪರಿಸ್ಥಿತಿ ಈಗ ಮೇಕ್ ಇನ್ ಇಂಡಿಯಾ ತಯಾರಿಕೆಗೆ ಬರಬಾರದು. ಸರ್ಕಾರ ಬದಲಾದರೂ ಕೈಗಾರಿಕೆ ಪ್ರಗತಿಗೆ ಕೈಗೊಂಡ ನಿಲುವು ಬದಲಾಗಬಾರದು. ಈಗ ಸೋಲಾರ್‌ಗೆ ಸಾಕಷ್ಟು ಉತ್ತೇಜನ ನೀಡುತ್ತಿದ್ದೇವೆ. ಇದು ಸರ್ಕಾರ ಬದಲಾದಂತೆ ನೇಪಥ್ಯಕ್ಕೆ ಸರಿಯಬಾರದು. ಹೊಸ ಪೀಳಿಗೆ ಇದರಲ್ಲಿ ಹೆಚ್ಚು ಶ್ರಮವಹಿಸಿ ಮಾಡಿದ ಸಾಧನೆ ವ್ಯರ್ಥವಾಗಬಾರದು. ಮೇಕ್ ಇನ್ ಇಂಡಿಯಾ ಸಾಂವಿಧಾನಿಕ ರಕ್ಷಣೆ ಒದಗಿಸುವುದು ಅಗತ್ಯ. ೨೦೩೦ಕ್ಕೆ ಉತ್ಪಾದನೆ ವಲಯದ ಬೆಳವಣಿಗೆ ಜಿಡಿಪಿ ಶೇ. ೨೫ ಪಾಲು ನೀಡುವಂತೆ ಬೆಳೆಯಬೇಕು ಎಂದರೆ ಅದಕ್ಕೆ ಬೇಕಾದ ಸರ್ಕಾರದ ಗ್ಯಾರಂಟಿ ಮುಖ್ಯ. ಆರ್ಥಿಕ ವಿಚಾರದಲ್ಲಿ ಪಕ್ಷ ರಾಜಕಾರಣ ನುಸುಳಬಾರದು. ಈಗ ನಾವು ಕೆಲವು ಕ್ಷೇತ್ರಗಳಲ್ಲಿ ಪ್ರಾಥಮಿಕ ಹಂತ ದಾಟಿದ್ದೇವೆ. ಈಗ ಅಂತಾರಾಷ್ಟ್ರೀಯ ಮಟ್ಟದ ಉತ್ಪಾದನಾ ಸಾಮರ್ಥ್ಯ ಪಡೆಯಬೇಕು. ನಮ್ಮಲ್ಲಿ ಹೊಸ ಆವಿಷ್ಕಾರವಾಯಿತು ಎಂದರೆ ಅದಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುವಂತೆ ಇರಬೇಕು. ಅಂದರೆ ನಮ್ಮ ಸಂಶೋಧನೆ, ಆವಿಷ್ಕಾರ ಮತ್ತು ಉತ್ಪಾದನೆ ಎಲ್ಲವೂ ಬೃಹತ್ ದೇಶಗಳ ಉತ್ಪಾದನೆಗೆ ಸರಿಸಮಾನವಾಗಿರಬೇಕು. ಈಗ ವಿದೇಶಿ ಕಂಪನಿಗಳು ನಮ್ಮಲ್ಲಿ ಬಂಡವಾಳ ಹೂಡಿ ವಿದ್ಯುತ್ ವಾಹನಗಳಿಂದ ಹಿಡಿದು ವಿಮಾನಗಳನ್ನು ತಯಾರಿಸಿ ರಫ್ತು ಮಾಡಬಹುದು. ಮುಂದಿನ ಗುರಿ ನಮ್ಮದೇ ವಸ್ತುಗಳನ್ನು ತಯಾರಿಸಿ ಅದಕ್ಕೆ ಜಾಗತಿಕ ಮನ್ನಣೆ ಸಿಗಬೇಕು. ಆಗ ಮೇಕ್ ಇನ್ ಇಂಡಿಯಾಗೆ ಬೆಲೆ ಬರುತ್ತದೆ.