ಮೈಕ್ರೋ ಫೈನಾನ್ಸ್ ಹಾವಳಿಯಿಂದ ಮಾಂಗಲ್ಯ ಉಳಿಸಿಕೊಳ್ಳಲಾಗದ ಪರಿಸ್ಥಿತಿ
ಧಾರುಣ ಪರಿಸ್ಥಿತಿಯನ್ನು ತಿಳಿಸಲು ಮುಖ್ಯ ಮಂತ್ರಿಗಳಿಗೆ ಮಾಂಗಲ್ಯ ರವಾನಿಸಿರುವುದು ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಘಟನೆ
ಬೆಂಗಳೂರು: ಮಹಿಳೆಯರು ಮುಖ್ಯಮಂತ್ರಿಗಳಿಗೆ ಮಾಂಗಲ್ಯ ರವಾನಿಸುತ್ತಿರುವ ವರದಿ ಪರಿಸ್ಥಿತಿಯ ಗಂಭೀರತೆಯನ್ನು ಸಾಕ್ಷೀಕರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು 'ಗ್ಯಾರಂಟಿ ಭಾಗ್ಯಗಳ ಬಗ್ಗೆ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ ಸರ್ಕಾರ ಮಹಿಳೆಯರ ಮಾಂಗಲ್ಯ ಭಾಗ್ಯಕ್ಕೆ ಕುತ್ತು ಬಂದಿದ್ದರೂ ಕಣ್ಣು ಮುಚ್ಚಿ ಕುಳಿತಿದೆ'. ಈ ನೆಲದ ಹೆಣ್ಣು ತನಗೆ ಯಾವ ಭಾಗ್ಯ ಕೊಡದಿದ್ದರೂ ಚಿಂತೆ ಇಲ್ಲ ಉಸಿರಿರುವ ತನಕ ಮಾಂಗಲ್ಯ ಭಾಗ್ಯ ಉಳಿಸು ಎಂದು ದೇವಾನುದೇವತೆಗಳಲ್ಲಿ ಪ್ರಾರ್ಥಿಸುತ್ತಾಳೆ. ಅನಾದಿಕಾಲದಿಂದಲೂ ತನ್ನ ಮಾಂಗಲ್ಯ ರಕ್ಷಣೆಗಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ನಿದರ್ಶನಗಳನ್ನು ಕೇಳಿದ್ದೇವೆ, ಪುರಾಣ ಪುಣ್ಯದ ಕಥೆಗಳಲ್ಲೂ ಹೆಣ್ಣಿನ ಮಾಂಗಲ್ಯ ಎಷ್ಟು ಪವಿತ್ರ ಎಂಬ ಉಲ್ಲೇಖವಿದೆ. ಸ್ವತಃ ಸೀತಾಮಾತೆ ತನ್ನ ಮಾಂಗಲ್ಯ ರಕ್ಷಣೆಗಾಗಿ ಭದ್ರಕಾಳಿಯ ಅವತಾರವೆತ್ತಿ ಶ್ರೀ ರಾಮನ ರಕ್ಷಣೆಗೆ ನಿಲ್ಲುತ್ತಾಳೆ. ಇಂತಹ ಪುಣ್ಯಭೂಮಿಯಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿಯಿಂದ ಇಂದು ತನ್ನ ಮಾಂಗಲ್ಯ ಉಳಿಸಿಕೊಳ್ಳಲಾಗದ ಪರಿಸ್ಥಿತಿಗೆ ತಲುಪಿರುವ ಮಹಿಳೆಯರು ಮುಖ್ಯಮಂತ್ರಿಗಳಿಗೆ ಮಾಂಗಲ್ಯ ರವಾನಿಸುತ್ತಿರುವ ವರದಿ ಪರಿಸ್ಥಿತಿಯ ಗಂಭೀರತೆಯನ್ನು ಸಾಕ್ಷೀಕರಿಸುತ್ತಿದೆ.
ಸ್ವಾತಂತ್ರ್ಯಾ ನಂತರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾಂಗಲ್ಯ ಉಳಿಸಿಕೊಳ್ಳಲಾರದ ಧಾರುಣ ಪರಿಸ್ಥಿತಿಯನ್ನು ತಿಳಿಸಲು ಮುಖ್ಯ ಮಂತ್ರಿಗಳಿಗೆ ಮಾಂಗಲ್ಯ ರವಾನಿಸಿರುವುದು ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಘಟನೆಯಾಗಿದೆ. ಮೈಕ್ರೋ ಫೈನಾನ್ಸ್ ಗಳ ಹಾವಳಿಯಿಂದ ಜನರ ಆಕ್ರಂದನ ಮುಗಿಲು ಮುಟ್ಟಿದೆ, ಗ್ರಾಮಾಂತರ ಪ್ರದೇಶಗಳಲ್ಲಿ ಭೀಕರ ಬರದ ಪರಿಸ್ಥಿತಿ ಎದುರಾದಾಗ ಗುಳೆ ಹೋಗುತ್ತಿದ್ದ ಜನ ಇಂದು 'ಮೈಕ್ರೋ ಫೈನಾನ್ಸ್ ವ್ಯವಹಾರದ ಕಿರುಕುಳದಿಂದ ಗುಳೆ ಹೋಗುತ್ತಿದ್ದಾರೆ' ಎಂದರೆ ಪರಿಸ್ಥಿತಿ ಎಷ್ಟು ಗಂಭೀರತೆಯ ಹಂತ ತಲುಪಿದೆ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ.
ಮೈಕ್ರೋ ಫೈನಾನ್ಸ್ ಗಳಿಂದ ಸಾಲ ತೆಗೆದುಕೊಂಡವರು ಒಂದು ಕಡೆ ಕಿರುಕುಳ ಅನುಭವಿಸುತ್ತಿದ್ದರೆ, ಮತ್ತೊಂದು ಕಡೆ ತಮ್ಮ ಪರಿಶ್ರಮದಿಂದ ಕೂಡಿಟ್ಟ ಅಲ್ಪ ಹಣವನ್ನು ಕೆಲವು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇಟ್ಟು ಅದನ್ನು ಕಳೆದುಕೊಳ್ಳುತ್ತಿದ್ದಾರೆ. ರಹದಾರಿ ಪಡೆದುಕೊಂಡಿರುವ ಹೆಸರಿನಲ್ಲಿ ಒಂದು ಕಡೆ ವಸೂಲಿ, ಇನ್ನೊಂದು ಕಡೆ ವಂಚನೆ ಇವೆರಡೂ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಬರೋಬ್ಬರಿ 7.80 ಲಕ್ಷ ದೂರು ದಾಖಲಾಗಿದ್ದರೂ ಕರ್ನಾಟಕ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ಅದರ ಆಡಳಿತ ವೈಫಲ್ಯವನ್ನು ಎತ್ತಿ ತೋರುತ್ತಿದೆ.
ಒಂದು ಕಡೆ ಜನರ ಮಾನ, ಪ್ರಾಣ, ಆಸ್ತಿಗಳಿಗೆ ರಕ್ಷಣೆ ಸಿಗದೆ, ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರಗಳು ತಾಂಡವವಾಡುತ್ತಿದ್ದರೆ, ಮತ್ತೊಂದು ಕಡೆ ಚಕ್ರಬಡ್ಡಿ ವಸೂಲಿ ಹಾಗೂ ಠೇವಣಿ ವಂಚನೆ ನಿರಂತರವಾಗಿ ನಡೆಯುತ್ತಿದೆ, ಕರ್ನಾಟಕ ಅರಾಜಕತೆಯತ್ತ ಸಾಗುತ್ತಿದೆ, ಈ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಪ್ರತಿಭಟನೆಗಳು, ಜನರ ಆಕ್ರಂದನಗಳ ಬಿಸಿ ತಟ್ಟುತ್ತಿಲ್ಲ. ಈ ಕ್ಷಣದಿಂದಲಾದರೂ ಜನರ ರಕ್ಷಣೆಗೆ ಧಾವಿಸದಿದ್ದರೆ ಕರ್ನಾಟಕ ಬಿಜೆಪಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದಿದ್ದಾರೆ.