For the best experience, open
https://m.samyuktakarnataka.in
on your mobile browser.

ಮೈಶಾಳ ಬ್ಯಾರೇಜ್ ಪೂರ್ಣಗೊಂಡರೆ ೭೦೦ ಹಳ್ಳಿಗಳಿಗೆ ಬರ

09:39 PM Dec 14, 2023 IST | Samyukta Karnataka
ಮೈಶಾಳ ಬ್ಯಾರೇಜ್ ಪೂರ್ಣಗೊಂಡರೆ ೭೦೦ ಹಳ್ಳಿಗಳಿಗೆ ಬರ

ಬೆಳಗಾವಿ(ವಿಧಾನಸಭೆ): ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಗೆ ನಿರ್ಮಿಸುತ್ತಿರುವ ೧೫ ಟಿಎಂಸಿ ಸಾಮರ್ಥ್ಯದ ಮೈಶಾಳ ಬ್ಯಾರೇಜ್‌ನಿಂದ ಬೆಳಗಾವಿ ಜಿಲ್ಲೆಯ ೭೦೦ ಹಳ್ಳಿಗಳಿಗೆ ಪ್ರತಿವರ್ಷ ನಾಲ್ಕು ತಿಂಗಳ ಕಾಲ ಕುಡಿಯುವ ನೀರಿನ ಕೊರತೆ ಉಂಟಾಗಿ, ನೀರಾವರಿಗೂ ಭಾರಿ ತೊಂದರೆ ಆಗಲಿದೆ. ಸರ್ಕಾರ ಈಗಲೇ ಪರ್ಯಾಯ ನೀರು ಸಂಗ್ರಹ ಯೋಜನೆ ರೂಪಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಸರ್ಕಾರವನ್ನು ಆಗ್ರಹಿಸಿದರು.
ಗುರುವಾರ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷ್ಣಾ ನದಿಗೆ ಪ್ರತಿವರ್ಷ ಮಹಾರಾಷ್ಟ್ರದಿಂದ ಹರಿದು ಬರುವ ನೀರನ್ನು ಮೈಶಾಳ ಬ್ಯಾರೇಜ್ ಮೂಲಕ ತಡೆ ಹಿಡಿಯುತ್ತಿದೆ. ಇನ್ನೊಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆನಂತರ ಪ್ರತಿವರ್ಷ ಜನವರಿಯಿಂದ ಏಪ್ರಿಲ್‌ವರೆಗೆ ಚಿಕ್ಕೋಡಿ, ರಾಯಬಾಗ, ಅಥಣಿ, ಜಮಖಂಡಿ, ತೇರದಾಳ ತಾಲೂಕುಗಳ ೭೦೦ ಗ್ರಾಮಗಳಿಗೆ ಕುಡಿಯುವ ನೀರು, ೬ ಲಕ್ಷ ಎಕರೆ ನೀರಾವರಿ ಭೂಮಿಗೆ ನೀರಿನ ಕೊರತೆ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಮಸ್ಯೆ ಬಗೆಹರಿಸಬೇಕಾದರೆ ಹಿಪ್ಪರಗಿ ಬ್ಯಾರೇಜ್‌ಗೆ ಪ್ರತಿವರ್ಷ ಆಲಮಟ್ಟಿ ಹಿನ್ನೀರಿನಿಂದ ಹಿರೇಪಡಸಲಗಿಯಿಂದ ೬ ಟಿಎಂಸಿ ನೀರು ಲಿಫ್ಟ್ ಮಾಡುವ ಮೂಲಕ ನೀರು ಸಂಗ್ರಹ ಮಾಡಿದರೆ ಈ ಸಮಸ್ಯೆ ಬಗೆಹರಿಸಬಹುದು. ಇದರ ಜೊತೆಗೆ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು ೫೧೯ ಮೀಟರ್‌ನಿಂದ ೫೨೪ ಮೀಟರ್‌ಗೆ ಹೆಚ್ಚಿಸುವ ನಿಟ್ಟಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಜಮಖಂಡಿ ತಾಲೂಕು ಕಂಕನವಾಡಿ ಬಳಿ ಗೂಶಿರಪುರ ಗಡ್ಡಿಗೆ ಸೇತುವೆ ನಿರ್ಮಿಸಬೇಕು. ಕೃಷಿ ಹೊಂಡ ಯೋಜನೆಯಡಿ ಇನ್ನೂ ಹೆಚ್ಚು ರೈತರಿಗೆ ನೆರವು ನೀಡಲು ಹೆಚ್ಚು ಅನುದಾನ ತೆಗೆದಿರಿಸಬೇಕು, ಡಿಸಿಸಿ ಬ್ಯಾಂಕ್‌ನಿಂದ ಸಾಲವನ್ನು ಸೂಕ್ತ ಸಂದರ್ಭದಲ್ಲಿ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಸಕರಾದ ಪ್ರಸಾದ್‌ ಅಬ್ಬಯ್ಯ, ಸಿದ್ದು ಸವದಿ, ಎನ್.ಎಚ್. ಕೋನರೆಡ್ಡಿ, ಅಲ್ಲಮಪ್ರಭು ಪಾಟೀಲ್, ವಿಜಯಾನಂದ ಕಾಶಪ್ಪನವರ, ಪ್ರಕಾಶ್ ಕೋಳಿವಾಡ, ವಿನಯ್‌ ಕುಲಕರ್ಣಿ, ಶಿವಲಿಂಗೇಗೌಡ ಚರ್ಚೆಯಲ್ಲಿ ಭಾಗವಹಿಸಿದ್ದರು.