ಮೈಶುಗರ್ ಕಾರ್ಖಾನೆ ಉಳಿವು
ಮೇಕೆದಾಟು ಯೋಜನೆ ಜಾರಿಗೆ ನಮ್ಮ ಸರ್ಕಾರ ಕಾನೂನು ಹೋರಾಟ
ಮೈಸೂರು: ಇರುವ ಕಾರ್ಖಾನೆಯನ್ನೇ ಅಗತ್ಯ ಉಪಕರಣಗಳೊಂದಿಗೆ ಅಭಿವೃದ್ಧಿ ಪಡಿಸಬೇಕೇ ಎನ್ನುವ ಕುರಿತು ಚರ್ಚೆ ನಡೆಸಲಾಗಿದ್ದು, ತಾಂತ್ರಿಕ ವರದಿಯನ್ನು ಕೂಡಾ ಪರಿಶೀಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ
ಕೆಆರ್‌ಎಸ್ ಬಳಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮಂಡ್ಯ ಮತ್ತು ಕೆಆರ್‌ಎಸ್ ಡ್ಯಾಂನ ಸಮಸ್ಯೆ ಬಗ್ಗೆ ಈಗಾಗಲೇ ನಾವು ಚರ್ಚೆ ಮಾಡಿದ್ದೇವೆ. ಮೊದಲು ನಾವು ಇತಿಹಾಸವುಳ್ಳ ಮೈಶುಗರ್ ಕಂಪನಿಯನ್ನು ಹೇಗೆ ಉಳಿಸಿಕೊಳ್ಳಬೇಕು ಹಾಗೂ ಅದರಿಂದ ರೈತರಿಗೆ ಆಗುವ ಅನುಕೂಲಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ. ಅಲ್ಲದೆ ಹೊಸ ಕಾರ್ಖಾನೆ ನಿರ್ಮಾಣ ಮಾಡಬೇಕೇ ಅಥವಾ ಇರುವ ಕಾರ್ಖಾನೆಯನ್ನೇ ಅಗತ್ಯ ಉಪಕರಣಗಳೊಂದಿಗೆ ಅಭಿವೃದ್ಧಿ ಪಡಿಸಬೇಕೇ ಎನ್ನುವ ಕುರಿತು ಚರ್ಚೆ ನಡೆಸಲಾಗಿದ್ದು, ತಾಂತ್ರಿಕ ವರದಿಯನ್ನು ಕೂಡಾ ಪರಿಶೀಲಿಸಲಾಗಿದೆ. ಇದರ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕಬ್ಬು ಬೆಳೆಯುವ ರೈತರ ಹಿತದೃಷ್ಟಿ ಅನುಸಾರ ನಾವು ಕಾರ್ಯನಿರ್ವಹಿಸುತ್ತೇವೆ. ಮೇಕೆದಾಟು ಯೋಜನೆ ಜಾರಿಗೆ ನಮ್ಮ ಸರ್ಕಾರ ಕಾನೂನು ಹೋರಾಟವನ್ನು ಮಾಡಲಿದ್ದು, ನಾನು ಈಗಾಗಲೇ ಪ್ರಧಾನಮಂತ್ರಿ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರದ ನಡುವೆ ಒಂದು ಸಭೆ ನಡೆಸಿ ಎಂದು ಮನವಿ ಮಾಡಿದ್ದೇನೆ. ಈ ಬಗ್ಗೆ ಕೇಂದ್ರ ಸರ್ಕಾರದ ಮುಂದಿನ ಹೆಜ್ಜೆ ಏನು ಎಂಬುದನ್ನು ಕಾದು ನೋಡಬೇಕಿದೆ ಎಂದರು.