ಮೈಸೂರು ಚಲೋ: ಪಾದಯಾತ್ರೆಗೆ ಚಾಲನೆ
ಕೆಂಗೇರಿಯಲ್ಲಿ ಉದ್ಘಾಟನೆ, ಮೈಸೂರಿನ ಸಮಾರೋಪ ಕಾರ್ಯಕ್ರಮ
ಬೆಂಗಳೂರು: ಮೈಸೂರು ಚಲೋ ಪಾದಯಾತ್ರೆ ಆರಂಭಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಾಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಂ ರಾಜೇಂದ್ರ, ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ, ಜಿಲ್ಲಾಧ್ಯಕ್ಷ ಶ್ರೀ ಎಲ್. ನಾಗೇಂದ್ರ, ಮಹದೇವಸ್ವಾಮಿ, ಸೇರಿದಂತೆ ಪಕ್ಷದ ಮುಖಂಡರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮೈಸೂರು ಚಲೋ ಪಾದಯಾತ್ರೆಗೆ ನಾಡದೇವತೆಯ ಆಶೀರ್ವಾದ: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಾಶೀರ್ವಾದ ಪಡೆಯಲಾಯಿತು. ನಿವೇಶನ ವಂಚಿತ ಸೂರು ರಹಿತರಿಗಾಗಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಾದ ಹಣದ ರಕ್ಷಣೆಗಾಗಿ, ಭ್ರಷ್ಟ ಅಧಿಕಾರಸ್ಥರಿಗೆ ಶಿಕ್ಷೆ ಕೊಡಿಸುವುದಕ್ಕಾಗಿ, ಜನವಿರೋಧಿ ಕಾಂಗ್ರೆಸ್ ಸರ್ಕಾರ ವಿರದ್ಧದ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಹೋರಾಟಕ್ಕೆ ತಾಯಿ ಶ್ರೀ ಚಾಮುಂಡೇಶ್ವರಿಯ ಅನುಗ್ರಹಕ್ಕಾಗಿ ನಿವೇದಿಸಿಕೊಳ್ಳಲಾಯಿತ್ತಲ್ಲದೇ ಪ್ರಾಕೃತಿಕ ವಿಕೋಪದಿಂದ ಬೆಟ್ಟ, ಗುಡ್ಡಗಳು ಕುಸಿದು ಜಲಕಂಟಕಕ್ಕೆ ಸಿಲುಕಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಜನರ ಒಳತಿಗಾಗಿ ದೇವಿಯಲ್ಲಿ ಪ್ರಾರ್ಥಿಸಲಾಯಿತು. ಪಾದಯಾತ್ರೆಯ ಪ್ರಾರಂಭದ ದಿನವಾದ ಇಂದಿನಿಂದ ಕೊನೆಯ ದಿನದವರೆಗೂ ಬಿಜೆಪಿ ಹಾಗೂ ಜೆಡಿಎಸ್ ನ ಪ್ರಮುಖರು ಹಾಗೂ ಕಾರ್ಯಕರ್ತರು ಜೊತೆಗೂಡಿ ವಿಶ್ವಾಸಪೂರ್ಣ ಹೆಜ್ಜೆಯನ್ನಿಟ್ಟು ಪ್ರತಿಭಟನೆಯನ್ನು ಪರಿಣಾಮಕಾರಿಯಾಗಿ ಹಂತ ತಲುಪಿಸುವ ಸಂಕಲ್ಪ ಮಾಡೋಣ ಎಂದಿದ್ದಾರೆ.
ಇಂದಿನಿಂದ ಆಗಸ್ಟ್ 10ರವರೆಗೆ 140 ಕಿಮೀ ಪಾದಯಾತ್ರೆ ಇದಾಗಿದೆ. ಕೆಂಗೇರಿಯಲ್ಲಿ ಉದ್ಘಾಟನೆ, ಮೈಸೂರಿನ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಬಹಿರಂಗ ಸಭೆಗಳು ನಡೆಯಲಿವೆ. ಬೆಳಗ್ಗೆ 10 ಕಿ.ಮೀ. ಮಧ್ಯಾಹ್ನ ಊಟದ ನಂತರ 10 ಕೀ.ಮೀನಂತೆ ಪ್ರತಿದಿನ 20 ಕಿ.ಮೀ. ಕ್ರಮಿಸಲು ಯೋಜಿಸಲಾಗಿದೆ. ಆಗಸ್ಟ್ 10ರಂದು ಬೆಳಗ್ಗೆ 10.30ಕ್ಕೆ ಮೈಸೂರಿನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ.